ಏಪ್ರಿಲ್ 1ಕ್ಕೆ ಸುಡು ಬಿಸಿಲಿಗೆ ತಂಪೆರೆಯಲು ಬರಲಿದೆ ‘ಊಟಿ
"ಊಟಿ" ಎಂಬ ಹೆಸರು ಕಿವಿಗೆ ಬಿದ್ದಾಕ್ಷಣ ಮನಸು ಮುದಗೊಳ್ಳುತ್ತದೆ. ಅದ್ಭುತವಾದ ನಿಸರ್ಗಸಿರಿಯ ಪ್ರವಾಸಿ ತಾಣವಾಗಿರುವ ಊಟಿಯ ಪ್ರಕೃತಿ ಪ್ರೇಮಿಗಳ ಸ್ವರ್ಗವೂ ಆಗಿದೆ. ಇದೀಗ ಸ್ಯಾಂಡಲ್‌ವುಡ್‌ನಲ್ಲಿ "ಊಟಿ" ಎಂಬ ಹೆಸರಿನಲ್ಲೇ ಹೊಸ ಚಿತ್ರವೊಂದು ತಯಾರಾಗಿದ್ದು ಏಪ್ರಿಲ್ 1ರಂದು ಬಿಡುಗಡೆಯಾಗಲಿದೆ.
ಊಟಿ ಎಂದರೆ ಕೇವಲ ಪಿಕ್‌ನಿಕ್ ಸ್ಪಾಟ್ ಅಷ್ಟೇ ಅಲ್ಲ. ಅಲ್ಲಿನ ಸಾಂಸ್ಕೃತಿಕ ಪರಿಸರ, ಬದುಕು-ಬವಣೆ, ಭಾಷೆಯ ಲಯ-ಸೊಗಡು, ಅಲ್ಲಿನ ಜನಜೀವನ ಅತ್ಯಂತ ವಿಶೇಷವಾದುದು. ಈ ಆಂತರ್ಯ ಬಹುತೇಕ ಜನರಿಗೆ ಇನ್ನೂ ಅಗೋಚರವಾಗಿಯೇ ಉಳಿದಿದೆ. ಇಂಥ ವಿಶಿಷ್ಟವಾದ ಪರಿಸರದಲ್ಲಿ ಯುವ ಜೋಡಿಯೊಂದರ ನಡುವೆ ಅರಳುವ ಪ್ರೇಮ ಕಥಾನಕವನ್ನು ಊಟಿ ಚಿತ್ರ ಒಳಗೊಂಡಿದೆ. 1991-92ರಲ್ಲಿ ನಡೆದ ಕಾವೇರಿ ಗಲಭೆಯ ಸಂದರ್ಭದಲ್ಲಿ ಭಾಷೆಗಳ ವಿಷಯದಲ್ಲಿ ವೈಷಮ್ಯದ ದಳ್ಳುರಿ ಹೊತ್ತಿಕೊಂಡಾಗ ಅದರ ವರ್ತುಲದೊಳಗೆ ಯುವ ಪ್ರೇಮಿಗಳು ಸಿಲುಕಿ ನಲುಗುವ ಪರಿಯನ್ನು ಈ ಚಿತ್ರದಲ್ಲಿ ಮನೋಜ್ಞವಾಗಿ ಚಿತ್ರಿಸಲಾಗಿದೆ. ‘ಊಟಿ ಚಿತ್ರದ ಹಾಡುಗಳ ಧ್ವನಿಮುದ್ರಿಕೆ ಈಗಾಗಲೇ ಬಿಡುಗಡೆಗೊಂಡಿದ್ದು ಅದರಲ್ಲಿರುವ 6 ಹಾಡುಗಳು ಕೇಳುಗರ ಮೆಚ್ಚುಗೆಗೆ ಪಾತ್ರವಾಗಿವೆ. ಅಬ್ಬರವಿಲ್ಲದ ಇಂಪಾದ ಸಂಗೀತದೊಂದಿಗೆ ಅರ್ಥಪೂರ್ಣವಾಗಿರುವ ಹಾಡುಗಳು ವನಸಿರಿಯನ್ನು ಹಿನ್ನೆಲೆಯಾಗಿಟ್ಟುಕೊಂಡು ಪ್ರಕೃತಿಯ ಮಡಿಲಲ್ಲಿ ಚಿತ್ರೀಕರಿಸಲ್ಪಟ್ಟಿದ್ದು ಅವುಗಳ ಮಾಧುರ್ಯ ಚಿತ್ರ ರಸಿಕರಿಗೆ ಮುದ ನೀಡುವುದರಲ್ಲಿ ಸಂಶಯವಿಲ್ಲ.
ಸಾಹಿತಿ, ಪತ್ರಕರ್ತ ಡಾ. ಕೃಷ್ಣಮೂರ್ತಿ ಚಮರಂ ಅವರು ಬರೆದಿರುವ ‘ಪ್ರೀತಿಯ ಅರಸಿ’ ಎಂಬ ಕಾದಂಬರಿಯನ್ನು ಆಧರಿಸಿದ ಚಿತ್ರಕಥೆ ಇದಾಗಿದೆ. ಮೈಸೂರಿನ ನಿಖಿಲ್ ಎಂಬ ನವನಟ ಈ ಚಿತ್ರದ ನಾಯಕನಾಗಿದ್ದು, ನಾಯಕಿಯಾಗಿ ಬೆತ್ತನಗೆರೆ, ಕೋಲಾರ ಚಿತ್ರಗಳಲ್ಲಿ ನಟಿಸಿರುವ ಕನ್ನಡದ ಬೆಡಗಿ ನೈನಾ ಅಭಿನಯಿಸಿದ್ದಾರೆ. ಜುಗಾರಿ ಖ್ಯಾತಿಯ ನಟ ಅವಿನಾಶ್ ನರಸಿಂಹರಾಜು ಪ್ರಮುಖ ಭೂಮಿಕೆಯಲ್ಲಿದ್ದಾರೆ. ತಾಂತ್ರಿಕ ವರ್ಗದಲ್ಲಿ ಬಹುತೇಕ ಯುವಜನರ ಹೊಸ ತಂಡವಿದ್ದರೂ ‘ಜಟ್ಟ’ ಖ್ಯಾತಿಯ ನಿರ್ದೇಶಕ ಗಿರಿರಾಜ್, ‘ಡೈರೆಕ್ಟರ್ ಸ್ಪೆಷಲ್’ ನಿರ್ದೇಶಕ ಗುರುಪ್ರಸಾದ್ ಅವರಲ್ಲದೆ ಹಲವು ರಂಗ ಕಲಾವಿದರನ್ನು ಒಳಗೊಂಡ ತಾರಾಗಣ ಈ ಚಿತ್ರಕ್ಕಿರುವುದು ವಿಶೇಷವಾಗಿದೆ. ಪರಿವರ್ತನಾ ಫಿಲಂಸ್ ಲಾಂಛನದಲ್ಲಿ ಹೈಕೋರ್ಟ್ ವಕೀಲರಾದ ಹೆಚ್. ಮೋಹನ್‌ಕುಮಾರ್ ಅವರು ನಿರ್ಮಿಸಿರುವ ಈ ಚಿತ್ರವನ್ನು ಮಹೇಶ್‌ಕುಮಾರ್ ನಿರ್ದೇಶಿಸಿದ್ದಾರೆ. ಸಂಭಾಷಣೆ ಹಾಗೂ ಹಾಡುಗಳನ್ನು ಡಾ. ಚಮರಂ ಬರೆದಿದ್ದು ರಾಜ್ ಭಾಸ್ಕರ್ ಅವರು ಸಂಗೀತ ನೀಡಿದ್ದಾರೆ. ಚೆನ್ನೈನ ವಿ.ಎಂ.ಸೆಲ್ವಂ ಈ ಚಿತ್ರದ ಛಾಯಾಗ್ರಾಹಕರಾಗಿದ್ದಾರೆ. ಮಂಜು ಸುರಿಸುವ ಮೋಡಗಳನ್ನು ತಡೆದು ನಿಲ್ಲಿಸಿಕೊಂಡು ತಂಪೆರೆಯುವ ಹಸಿರು ಬೆಟ್ಟಗಳ ನಡುವೆ ಹರಡಿಕೊಂಡಿರುವ ಊಟಿಯ ಸುಂದರ ಪರಿಸರದಲ್ಲಿ, ಅಲ್ಲಿಗೆ ಸಮೀಪದ ಗೂಡಲೂರು ಮತ್ತು ಕೇರಳದ ಸುಲ್ತಾನ್ ಬತ್ತೇರಿಯ ಎಸ್ಟೇಟ್‌ಗಳಲ್ಲಿ, ಹಾಗೂ ಮೈಸೂರಿನ ವಿವಿಧ ಸ್ಥಳಗಳಲ್ಲಿ ಈ ಚಿತ್ರದ ಚಿತ್ರೀಕರಣ ಮಾಡಲಾಗಿದೆ. ಚಿತ್ರರಂಗದಲ್ಲಿ ಇತ್ತೀಚೆಗೆ ರಿಮೇಕ್ ಸಂಸ್ಕೃತಿ ಹೆಚ್ಚುತ್ತಿದ್ದು ರೌಡಿಸಂನ ಕಥೆಗಳೇ ವಿಜೃಂಭಿಸುತ್ತಿವೆ. ಇಂಥ ಏಕತಾನತೆಯ ನಡುವೆ ಉತ್ಸಾಹಿ ಯುವಜನರ ತಂಡವೊಂದು ಕಾದಂಬರಿ ಆಧರಿಸಿದ ಉತ್ತಮ ಅಭಿರುಚಿಯ ಚಿತ್ರವೊಂದನ್ನು ನಿರ್ಮಿಸಿದ್ದಾರೆ. ಕ್ರಿಯಾಶೀಲ ಯುವಜನರ ತಂಡವೊಂದರ ಈ ಪ್ರಯತ್ನಕ್ಕೆ ಪ್ರೇಕ್ಷಕರಿಂದಲೂ ಉತ್ತಮ ಪ್ರತಿಕ್ರಿಯೆ ದೊರಕಬಹುದೆಂಬ ನಿರೀಕ್ಷೆಯಿದೆ. ಮಲೆಯಾಳಂ ಚಿತ್ರರಂಗಕ್ಕೆ ಮೈಸೂರಿನ ಪ್ರತಿಭೆ ನಿಖಿಲ್
ಮೊದಲ ಚಿತ್ರ ‘ಊಟಿ ಬಿಡುಗಡೆಗೆ ಮುನ್ನವೇ ಒಲಿದುಬಂದ ಅವಕಾಶ
"ಊಟಿ" ಚಿತ್ರದ ಮೂಲಕ ಕನ್ನಡ ಚಲನಚಿತ್ರರಂಗಕ್ಕೆ ನಾಯಕ ನಟನಾಗಿ ಪರಿಚಯಿಸಲ್ಪಡುತ್ತಿರುವ ಯುವಕ ನಿಖಿಲ್ ಸಾಂಸ್ಕೃತಿಕ ನಗರಿ ಮೈಸೂರಿನ ಪ್ರತಿಭೆ. ಅವರು ನಟಿಸಿರುವ ಮೊದಲ ಚಿತ್ರ ಏಪ್ರಿಲ್ 1ರಂದು ಬಿಡುಗಡೆಯಾಗುತ್ತಿದ್ದು ಈ ಸುಸಂದರ್ಭದಲ್ಲೇ ನಿಖಿಲ್‌ಗೆ ಮಲೆಯಾಳಂ ಚಿತ್ರವೊಂದರಲ್ಲಿ ನಟಿಸುವ ಅವಕಾಶ ಕೂಡಿಬಂದಿದೆ. ಮಲೆಯಾಳಂ ಮತ್ತು ತಮಿಳಿನ ಹಿರಿಯ ನಟರಾದ ವಿಜಯರಾಜ್ ಅವರು ಕಥೆಗಾರರು, ಕಲಾಕಾರರು ಹಾಗೂ ಚಿತ್ರಕಥೆ ರಚನಾಕಾರರೂ ಆಗಿದ್ದು ಅವರ ಇತ್ತೀಚಿನ ಮೂರು ಚಿತ್ರಕಥೆಗಳಲ್ಲಿ ಒಂದಾದ ‘ನೀಲ ಪೂಕ್ಕಳ್
ಎಂಬ ಹೆಸರಿನ ಕಥೆಯನ್ನು ಅವರು ಚಿತ್ರವಾಗಿ ನಿರ್ಮಿಸಲು ಹೊರಟಿದ್ದು ಅದಕ್ಕೆ ಪೂರಕ ವೇದಿಕೆ ಸಿದ್ಧವಾಗಿದೆ. ಆ ಚಿತ್ರದಲ್ಲಿ ನಿಖಿಲ್ ನಾಯಕ ಪಾತ್ರ ನಿರ್ವಹಿಸಲು ಆಯ್ಕೆಯಾಗಿದ್ದು ನಾಯಕಿಯ ಪಾತ್ರಧಾರಿಯ ಶೋಧ ನಡೆಯುತ್ತಿದೆ. ಇನ್ನೊಂದು ತಿಂಗಳಲ್ಲಿ ಚಿತ್ರೀಕರಣ ಆರಂಭವಾಗುವ ನಿರೀಕ್ಷೆಯಿದೆ. ಮಲೆಯಾಳಂ ಚಿತ್ರರಂಗದಲ್ಲಿ ನಿಖಿಲ್ ಮಾಲಿಯಕ್ಕಲ್ ಎಂಬ ಹೆಸರಿನಲ್ಲಿ ನಿಖಿಲ್ ಗುರುತಿಸಿಕೊಳ್ಳಲಿದ್ದಾರೆ. ಬೆಂಗಳೂರಿನ ಆಚಾರ್ಯ ಇನ್ಸ್‌ಟಿಟ್ಯೂಷನ್‌ನಲ್ಲಿ ಡಿಪ್ಲೊಮಾ ಇನ್ ಆರ್ಕಿಟೆಕ್ಟ್ ವ್ಯಾಸಂಗ ಮಾಡುತ್ತಿರುವ ನಿಖಿಲ್ "ಊಟಿ" ಚಿತ್ರದಲ್ಲಿ ಯುವ ನಾಯಕನಾಗಿ ಅಭಿನಯಿಸುತ್ತಿದ್ದಾರೆ. ಕಾಲೇಜು ವ್ಯಾಸಂಗದಲ್ಲಿ ತೊಡಗಿದ್ದ ನಿಖಿಲ್ ಅವರನ್ನು ಚಲನಚಿತ್ರರಂಗ ತಾನಾಗಿಯೇ ಕೈ ಬೀಸಿ ಕರೆದು ನಾಯಕ ನಟನಾಗಿ ಅಭಿನಯಿಸುವ ಅವಕಾಶ ನೀಡಿದೆ. ಓರ್ವ ಉತ್ತಮ ಡ್ಯಾನ್ಸರ್ ಆಗಿರುವ ನಿಖಿಲ್ ಶಾಲಾ ದಿನಗಳಲ್ಲೇ ನೃತ್ಯದಲ್ಲಿ ತನ್ನ ಪ್ರತಿಭೆಯನ್ನು ಪ್ರದರ್ಶಿಸಿ ಹಲವಾರು ಪ್ರಮುಖ ಸ್ಪರ್ಧೆಗಳಲ್ಲಿ ವಿಜಯಶಾಲಿಯಾಗಿ ಬಹುಮಾನಗಳನ್ನು ಪಡೆದಿದ್ದಾರೆ. ಕರ್ನಾಟಕ ಸಂಗೀತಾಭ್ಯಾಸವನ್ನು ಸಹಾ ಮುಂದುವರಿಸಿರುವ ನಿಖಿಲ್ ಹಾಡುಗಾರಿಕೆಯಲ್ಲೂ ನೈಪುಣ್ಯತೆ ಪಡೆದಿದ್ದಾರೆ. ಉತ್ತಮ ಕ್ರೀಡಾಪಟುವೂ ಆಗಿರುವ ನಿಖಿಲ್ ವಿವಿಧ ಕ್ರೀಡಾಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜಯಿಯಾಗಿದ್ದಾರೆ. ಕನ್ನಡ, ಇಂಗ್ಲಿಷ್, ಹಿಂದಿ, ತಮಿಳು, ಮಲೆಯಾಳಂ, ಮರಾಠಿ ಭಾಷೆಗಳನ್ನು ಬಲ್ಲ ನಿಖಿಲ್ ಮೊದಲ ಚಿತ್ರವಾದ "ಊಟಿ"ಯಲ್ಲಿ ನಟನೆಯಲ್ಲೂ ಸಹ ಪ್ರಬುದ್ಧತೆಯನ್ನು ಪ್ರದರ್ಶಿಸಿದ್ದು ಚಿತ್ರತಂಡದ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಚಿತ್ರರಂಗಕ್ಕೆ ಹಲವಾರು ಉತ್ತಮ ಪ್ರತಿಭೆಗಳನ್ನು ನೀಡಿರುವ ಮೈಸೂರಿನಿಂದ ಇದೀಗ ಮತ್ತೊಂದು ಪ್ರತಿಭೆ ಹೊರಹೊಮ್ಮಿದೆ. ಈ ಯುವ ನಟನ ಪ್ರತಿಭೆಗೆ ಸಮಸ್ತ ಕನ್ನಡ ನಾಡಿನ ಚಿತ್ರ ರಸಿಕರು ಹಾಗೂ ಮೈಸೂರಿನ ಜನತೆ ಪ್ರೋತ್ಸಾಹದ ನೀರೆರೆದು, ಆಶೀರ್ವದಿಸಿ ಬೆಳೆಸಬೇಕಾಗಿದೆ.