×
Ad

ಮಾ.25-ಎ.3: ಪಿಲಿಕುಳ ರಾಷ್ಟ್ರೀಯ ಕ್ರಾಫ್ಟ್ ಬಜಾರ್

Update: 2016-03-22 14:31 IST

ಮಂಗಳೂರು, ಮಾ. 22: ಕೇಂದ್ರ ಸರಕಾರದ ಜವಳಿ ಇಲಾಖೆ ಹಾಗೂ ರಾಜ್ಯ ಸರಕಾರದ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಸಹಭಾಗಿತ್ವದಲ್ಲಿ ನಗರದ ಪಿಲಿಕುಳದ ಡಾ. ಶಿವರಾಮ ಕಾರಂತ ನಿಸರ್ಗಧಾಮದ ಅರ್ಬನ್ ಹಾತ್‌ನಲ್ಲಿ ಮಾರ್ಚ್ 25ರಿಂದ ಎಪ್ರಿಲ್ 3ರವರೆಗೆ ಪಿಲಿಕುಳ ರಾಷ್ಟ್ರೀಯ ಕ್ರಾಫ್ಟ್ ಬಜಾರನ್ನು ಆಯೋಜಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎ.ಬಿ. ಇಬ್ರಾಹೀಂ ತಿಳಿಸಿದರು.


ಕ್ರಾಫ್ಟ್ ಬಜಾರ್‌ನ ಪೂರ್ವ ತಯಾರಿ ಕುರಿತಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಪಿಲಿಕುಳ ನಿಸರ್ಗಧಾಮದ ಪ್ರತಿನಿಧಿಗಳು ಆಗೂ ವಿವಿಧ ಸಂಸ್ಥೆಗಳ ಮುಖ್ಯಸ್ಥರ ಜತೆ ಇಂದು ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.


ಪ್ರದರ್ಶನವು ಈ ದಿನಗಳಲ್ಲಿ ಬೆಳಗ್ಗೆ 11ರಿಂದ ರಾತ್ರಿ 8 ಗಂಟೆಯವರೆಗೆ ತೆರೆದಿರುತ್ತದೆ. ಕೇಂದ್ರ ಸರಕಾರವು ಅರ್ಬನ್ ಹಾತ್‌ಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಕ್ರಾಫ್ಟ್ ಬಜಾರ್, ಗಾಂಧಿ ಶಿಲ್ಪಾ ಬಜಾರ್ ಹಾಗೂ ಪ್ರದರ್ಶನಗಳಿಗೆ ಅವಕಾಶ ಕಲ್ಪಿಸುತ್ತಿದೆ. ವರ್ಷದಲ್ಲಿ 10 ಕಾರ್ಯಕ್ರಮಗಳನ್ನು ಮಾಡಲು ಅವಕಾಶವಿದ್ದು, ಪಿಲಿಕುಳದಲ್ಲಿ ಇದೇ ಮೊದಲ ಬಾರಿಗೆ ಕ್ರಾಫ್ಟ್ ಬಜಾರ್‌ಗೆ ಅವಕಾಶ ದೊರಕಿದ್ದು, ಮುಂದೆ ಗಾಂಧಿ ಶಿಲ್ಪ ಬಜಾರ್‌ಗೂ ಅವಕಾಶ ದೊರೆಯುವ ನಿರೀಕ್ಷೆ ಇದೆ ಎಂದು ಜಿಲ್ಲಾಧಿಕಾರಿ ಹೇಳಿದರು.


ಕರಕುಶಲಕರ್ಮಿಗಳಿಗೆ ಉತ್ತೇಜನ ನೀಡುವುದಲ್ಲದೆ, ಕರಕುಶಲ ವಸ್ತುಗಳಿಗೆ ಉತ್ತಮ ಮಾರುಕಟ್ಟೆ ಒದಗಿಸುವ ಉದ್ದೇಶವೂ ಈ ಬಜಾರ್‌ನ ಮೂಲಕ ನಡೆಯಲಿದೆ. ಪಿಲಿಕುಳದಲ್ಲಿ ನಡೆಯಲಿರುವ ಕ್ರಾಫ್ಟ್ ಬಜಾರ್‌ನಲ್ಲಿ ತಿರುಪತಿ, ಮೈಸೂರು, ಧಾರವಾಡ, ತಮಿಳುನಾಡು, ಕೇರಳ, ನಾಗಾಲ್ಯಾಂಡಂ ಸೇರಿದಂತೆ ದೇಶದ ವಿವಿಧ ಕಡೆಗಳಿಂದ 100ಕ್ಕೂ ಅಧಿಕ ಕರಕುಶಲ ಕರ್ಮಿಗಳು ಭಾಗವಹಿಸುವ ನಿರೀಕ್ಷೆ ಇದೆ. 60 ಮಂದಿ ಈಗಾಗಲೇ ಪ್ರದರ್ಶನದಲ್ಲಿ ಭಾಗವಹಿಸುವುದನ್ನು ದೃಢಪಡಿಸಿದ್ದಾರೆ ಎಂದು ಕೇಂದ್ರ ಸರಕಾರದ ಕರಕುಶಲ ಉತ್ತೇಜನ ಅಧಿಕಾರಿ ಜೇಕಬ್ ಡಿಸೋಜಾ ತಿಳಿಸಿದರು.


ಬಿದಿರಿನ ಕರಕುಲ ವಸ್ತುಗಳು- ಪೀಠೋಪಕರಣಗಳು, ಕರಕುಶಲ ಸೀರೆಗಳು, ವಸ್ತ್ರಗಳು, ಲೋಹಗಳಿಂದ ಮಾಡಿದ ಕರಕುಶಲ ವಸ್ತುಗಳು, ಸೆಣಬಿನ ವಿವಿಧ ಕಲಾ ಪ್ರಕಾರಗಳು, ಎಂಬ್ರಾಯಿಡರಿ, ಆಭರಣಗಳು, ಚರ್ಮದ ವಸ್ತುಗಳು, ಟೆರ್ರಾಕೋಟ ಸೇರಿದಂತೆ ನಾನಾ ರೀತಿಯ ಕರಕುಶಲ ವಸ್ತುಗಳು ಪ್ರದರ್ಶನದಲ್ಲಿ ಲಭ್ಯವಿರುತ್ತವೆ ಎಂದು ಅವರು ಹೇಳಿದರು.


ಸಭೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಕುಮಾರ್, ಮನಪಾ ಆಯುಕ್ತ ಡಾ. ಎಚ್.ಎನ್. ಗೋಪಾಲಕೃಷ್ಣ, ಜಂಟಿ ಆಯುಕ್ತ ಗೋಕುಲ್‌ದಾಸ್ ನಾಯಕ್, ಪಿಲಿಕುಳ ನಿಸರ್ಗಧಾಮದ ಕಾರ್ಯನಿರ್ವಾಹಕ ನಿರ್ದೇಶಕ ಪ್ರಭಾಕರ ಶರ್ಮಾ, ವಿಜ್ಞಾನ ಕೇಂದ್ರದ ನಿರ್ದೇಶಕ ಕೆ.ವಿ. ರಾವ್, ಕಸಾಪ ಜಿಲ್ಲಾಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಪಣಂಬೂರು ಬೀಚ್ ಅಭಿವೃದ್ಧಿಯ ಯತೀಶ್ ಬೈಕಂಪಾಡಿ, ಜಿಲ್ಲಾ ಸ್ಕೌಟ್ಸ್ ಮತ್ತು ಗೈಡ್ಸ್‌ನ ಆಯುಕ್ತರಾದ ಎನ್.ಜಿ. ಮೋಹನ್ ಹಾಗೂ ಇತರರು ಉಪಸ್ಥಿತರಿದ್ದರು.


25ರಂದು ಅರ್ಬನ್ ಹಾತ್ ಉದ್ಘಾಟನೆ
ಕೇಂದ್ರದ ಜವಳಿ ಇಲಾಖೆಯ 210 ಲಕ್ಷ ರೂ. ಹಾಗೂ ರಾಜ್ಯ ಸರಕಾರದ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ವತಿಯಿಂದ 90 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣವಾಗಿರುವ ಅರ್ಬನ್ ಹಾತ್ ಸಂಕೀರ್ಣವನ್ನು ಉದ್ಘಾಟನೆ ಜ. 25ರಂದು ನಡೆಯಲಿದೆ ಎಂದು ಜಿಲ್ಲಾಧಿಕಾರಿ ಎ.ಬಿ. ಇಬ್ರಾಹೀಂ ಈ ಸಂದರ್ಭ ತಿಳಿಸಿದರು.


ಅರ್ಬನ್ ಹಾತ್‌ನಲ್ಲಿ 40 ಪ್ರದರ್ಶನ ಮಳಿಗೆಗಳು, ಎರಡು ಪ್ರದರ್ಶನ ಸಭಾಂಗಣಗಳು, ರೆಸ್ಟೋರೆಂಟ್ ಮೊದಲಾದ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ವೃತ್ತಿಪರ ಕೌಸಳ್ಯದೊಂದಿಗೆ ಕರಕುಶಲಕರ್ಮಿಗಳಿಗೆ ಮತ್ತು ಕಲಾವಿದರಿಗೆ ವೇದಿಕೆಯನ್ನು ಕಲ್ಪಿಸುವ ಉದ್ದೇಶದಿಂದ ಅರ್ಬನ್ ಹಾತ್ ನಿರ್ಮಾಣವಾಗಿದ. ಕಲಾವಿದರು, ಕುಶಲಕರ್ಮಿಗಳು ತಮ್ಮ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟಕ್ಕೆ ಅವಕಾಶ ಕಲ್ಪಿಸುವುದು ಹಾಗೂ ಗ್ರಾಹಕರು ನೇರವಾಗಿ ಕುಶಲಕರ್ಮಿಗಳಿಂದಲೇ ಕಲಾವಸ್ತುಗಳನ್ನು ಖರೀದಿಸಲು ಅವಕಾಸ ಕಲ್ಪಿಸುವುದು ಈ ಅರ್ಬನ್ ಹಾತ್‌ನ ಉದ್ದೇಶವಾಗಿದೆ ಎಂದು ಜಿಲ್ಲಾಧಿಕಾರಿ ಎ.ಬಿ. ಇಬ್ರಾಹೀಂ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News