ಪಂಡಿತ ಮಹಿಳೆಯ ಅಂತ್ಯಸಂಸ್ಕಾರ ನೆರವೇರಿಸಿದ ಕಾಶ್ಮೀರಿ ಮುಸ್ಲಿಮರು
ಶ್ರೀನಗರ, ಮಾ.22: ಕಾಶ್ಮೀರಿ ಪಂಡಿತ್ ಸಮುದಾಯದ ಮಹಿಳೆಯ ಅಂತ್ಯಸಂಸ್ಕಾರವನ್ನು ಸ್ಥಳೀಯ ಮುಸ್ಲಿಮರು ಮುಂದೆ ನಿಂತು ನೆರವೇರಿಸಿದ ಘಟನೆ ವರದಿಯಾಗಿದೆ.
ಇಲ್ಲಿನ ಖಾನ್ ಖಾ-ಎ-ಸೋಕ್ತಾ ನವಕಡಾಲ್‌ನಲ್ಲಿ ಕಳೆದ ರವಿವಾರ ಪಂಡಿತ ಸಮುದಾಯದ ದೂರಾ ತಜ್ನ(65)ಮೃತಪಟ್ಟರು. ಆಕೆ ಪತಿ, ಒಬ್ಬ ಪುತ್ರ ಹಾಗೂ ಕುಟುಂಬ ಸದಸ್ಯರನ್ನೂ ಬಿಟ್ಟಗಳಿದ್ದಾರೆ.
ವಿಷಯ ತಿಳಿದ ಕೂಡಲೇ ಸ್ಥಳೀಯ ಮುಸ್ಲಿಮರು ಜೊತೆ ಸೇರಿ ಸ್ಥಳೀಯ ಮಸೀದಿಗಳ ಪದಾಧಿಕಾರಿಗಳನ್ನು ಕರೆದು ಅಂತ್ಯಸಂಸ್ಕಾರ ನಡೆಸಲು ವ್ಯವಸ್ಥೆ ಮಾಡಿದರು. ಸ್ಥಳೀಯ ಮುಸ್ಲಿಮರು ಮೃತರ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದರು.
ಸ್ಥಳೀಯ ಧಾರ್ಮಿಕ ಮುಖಂಡ ವೌಲಾನ ಅಬ್ಬಾಸ್ ಅನ್ಸಾರಿ ಮನೆಗೆ ಪ್ರಪ್ರಥಮವಾಗಿ ಭೇಟಿ ನೀಡಿದರು. ವೌಲಾನ ಅನ್ಸಾರಿ ಹಾಗೂ ಅವರ ಪುತ್ರ ವೌಲ್ವಿ ಮಸ್ರೂರ್ ಮುಂದೆ ನಿಂತು ಅಂತ್ಯಸಂಸ್ಕಾರಕ್ಕೆ ವ್ಯವಸ್ಥೆ ಮಾಡಿದರು.
ಅಂತಿಮ ಮೆರವಣಿಗೆಯಲ್ಲಿ ಭಾಗವಹಿಸಿದ ಮುಸ್ಲಿಮರು ಕರನ್ ನಗರದಲ್ಲಿರುವ ರುದ್ರ ಭೂಮಿಗೆ ತೆರಳಿದರು. ಅಂತ್ಯಸಂಸ್ಕಾರ ಮುಗಿದ ಮೇಲೆ ಇಡೀ ದಿನ ಮುಸ್ಲಿಮರು ಮನೆಯವರೊಂದಿಗೆ ಕಳೆದರು.
‘‘ಇಸ್ಲಾಮ್ ನಮಗೆ ಸಹೋದರತೆ ಹಾಗೂ ಸೌಹಾರ್ದ ಕಲಿಸುತ್ತದೆೆ. ಹಾಗಾಗಿ ಪಂಡಿತ್ ಕುಟುಂಬದೊಂದಿಗೆ ನಿಂತು ಸಾಂತ್ವನ ಹೇಳುವುದು ನಮ್ಮ ಕರ್ತವ್ಯವಾಗಿದೆ ಎಂದು ನಾವು ಹೋಗಿದ್ದೇವು’’ ಎಂದು ಸ್ಥಳೀಯ ಮಸೀದಿಯ ಇಮಾಮ್ ಹೇಳಿದರು.
‘‘ನಾವು ಅವರೊಂದಿಗೆ ಸಂತಸ, ದುಃಖ ಎರಡನ್ನೂ ಹಂಚಿಕೊಂಡಿದ್ದೇವೆ. ಈಗ ನಮ್ಮ ಕುಟುಂಬದ ಒಬ್ಬ ಸದಸ್ಯರನ್ನೇ ಕಳೆದುಕೊಂಡಂತೆ ಆಗಿದೆ’’ ಎಂದು ಸ್ಥಳೀಯ ಝಮೀರ್ ಅಹ್ಮದ್ ಹೇಳಿದ್ದಾರೆ.
‘‘ನಾವು ಇಲ್ಲಿ ಏಕಾಂಗಿ ಎಂದು ನಮಗೆ ಅನಿಸಲೆೇ ಇಲ್ಲ. ನಮ್ಮ ಸೋದರರ ಸಾಂತ್ವನ ಹಾಗೂ ಸಹಾಯದಿಂದ ನಮಗೆ ಈ ಕಠಿಣ ಪರಿಸ್ಥಿತಿ ಎದುರಿಸಲು ಸಾಧ್ಯವಾಯಿತು’’ ಎಂದು ಮೃತ ಮಹಿಳೆಯ ಪುತ್ರ ಸುಶೀಲ್ ತಜ್ನ ಕೃತಜ್ಞತೆ ಸಲ್ಲಿಸಿದ್ದಾರೆ.
ಈ ಹಿಂದೆ ತನ್ನ ಮನೆಯಲ್ಲಿ ಒಬ್ಬಳೇ ವಾಸಿಸುತ್ತಿದ್ದ ಸುಶೀಲಾ ಕೌಲ್ ಎಂಬ ಕಾಶ್ಮೀರಿ ಮಹಿಳೆ ನಿಧನರಾದಾಗ ಅವರ ಅಂತ್ಯ ಸಂಸ್ಕಾರವನ್ನು ಸ್ಥಳೀಯ ಮುಸ್ಲಿಮರೇ ನಡೆಸಿದ್ದರು.