ಮಂಗಳೂರು: ವಿನಾಯಕ ಬಾಳಿಗ ಕೊಲೆ ಪ್ರಕರಣ ಬಯಲಿಗೆಳೆಯಲು ಪೊಲೀಸ್ ಕಮೀಷನರ್‌ಗೆ ಡಿವೈಎಫ್‌ಐ ಮನವಿ
ಮಂಗಳೂರು,ಮಾ.22:ನಗರದ ಹೃದಯ ಭಾಗದ ಮಾರ್ಗಮಧ್ಯೆ ಕೊಲೆಗೀಡಾದ ಆರ್ ಟಿ ಐ ಕಾರ್ಯಕರ್ತ ವಿನಾಯಕ ಬಾಳಿಗ ಹತ್ಯೆಯನ್ನು ಡಿವೈಎಫ್‌ಐ ದ.ಕ ಜಿಲ್ಲಾ ಸಮಿತಿ ತೀವ್ರವಾಗಿ ಖಂಡಿಸಿದೆ.
ಈ ಕೊಲೆ ಪ್ರಕರಣದಲ್ಲಿ ನಗರದ ರಿಯಲ್ ಎಸ್ಟೇಟ್, ಬಿಲ್ಡರ್ ಮಾಫಿಯಾದ ಕೈವಾಡ ಇರುವ ಶಂಕೆ ವ್ಯಕ್ತವಾಗಿದ್ದು, ಸಮಗ್ರ ತನಿಖೆ ನಡೆಸಿ ಕೊಲೆಯ ಹಿಂದಿರುವ ಶಕ್ತಿಗಳನ್ನು ಬಂಧಿಸಬೇಕೆಂದು ಪೊಲೀಸ್ ಕಮೀಷನರ್ ಅವರನ್ನು ಒತ್ತಾಯಿಸಿದೆ.
ಮಂಗಳೂರು ನಗರ ಮಾಫಿಯಾಗಳ ಭೂಗತ ದೊರೆಗಳ ಕಾರ್ಯಸ್ಥಾನವಾಗಿ ಬದಲಾಗುತ್ತಿದ್ದು ರಿಯಲ್ ಎಸ್ಟೇಟ್, ಬಿಲ್ಡರ್, ಶಿಕ್ಷಣ ಕ್ಷೇತ್ರದಲ್ಲಿ ಲಾಬಿಗಳು ಮಾಫಿಯಾ ರೀತಿ ಕಾರ್ಯಚರಿಸುತ್ತಿದೆ. ಹಣಕಾಸು ರಾಜಕಾರಣದ ಆಗಾಧ ಬಲ ಹೊಂದಿರುವ ಈ ಶಕ್ತಿಗಳು ಸಾಮಾಜಿಕವಾಗಿ ಗಣ್ಯ ಸ್ಥಾನಮಾನವನ್ನು ಹೊಂದಿದ್ದು ತಮಗಿರುವ ಅಧಿಕಾರಸ್ಥರ ಬೆಂಬಲದೊಂದಿಗೆ ಕಾನೂನು ಉಲ್ಲಂಘಿಸಿ ವ್ಯವಹಾರದಲ್ಲಿ ತೊಡಗಿಕೊಂಡಿವೆ. ಮಂಗಳೂರು ನಗರ ಇಂತಹ ರಿಯಲ್ ಎಸ್ಟೇಟ್ ಲಾಬಿಯ ಹಿಡಿತದಲ್ಲಿ ಸಿಲುಕಿಕೊಂಡಿದೆ. ಇಂತಹ ನಿಯಮಬಾಹಿರ ವ್ಯವಹಾರ, ಕಾನೂನಿನ ಸ್ವಚ್ಚಂದ ಉಲ್ಲಂಘನೆಯನ್ನು ಪ್ರಶ್ನಿಸಿದವರ ಬಾಯಿ ಮುಚ್ಚಿಸಲು ಈ ಶಕ್ತಿಗಳು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದೆ. ವಿನಾಯಕ ಬಾಳಿಗರವರು ಇಂತಹ ಪ್ರಬಲ ಶಕ್ತಿಗಳ ಅಕ್ರಮಗಳನ್ನು ಆರ್‌ಟಿಐ ಕಾಯ್ದೆಯ ಮೂಲಕ ಬಯಲಿಗೆಳೆಯುವ ಕಾನೂನು ಸಮರ ನಡೆಸುತ್ತಿದ್ದರು. ಬಾಳಿಗರವರಿಗೆ ವೈಯಕ್ತಿಕವಾಗಿ ಬೇರೆ ಯಾರೊಂದಿಗೂ ವೈಮನಸ್ಸು ಇದ್ದಿರಲಿಲ್ಲ ಈ ಎಲ್ಲಾ ಅಂಶಗಳನ್ನು ಪರಿಗಣಿಸುವಾಗ ವಿನಾಯಕ ಬಾಳಿಗರನ್ನು ಭೂಮಾಫಿಯಾ, ಶಿಕ್ಷಣ ಮಾಫಿಯಾಗಳಿಗೆ ಸೇರಿದ ಜನ ಸುಪಾರಿಕೊಟ್ಟು ಕೊಲೆ ನಡೆಸಿರುವ ಸಾಧ್ಯತೆಗಳು ಗೋಚರಿಸುತ್ತಿದೆ. ಈ ಹಿನ್ನಲೆಯಲ್ಲಿ ಮಂಗಳೂರು ನಗರ ಪೊಲೀಸ್ ಕಮೀಷನರ್‌ರವರು ಸ್ವತಹ ಈ ಪ್ರಕರಣದ ತನಿಖೆಯ ಮೇಲುಸ್ತುವಾರಿ ವಹಿಸಿಕೊಳ್ಳಬೇಕು, ಈ ಕೊಲೆಯ ಹಿಂದಿರುವ ಎಲ್ಲಾ ಶಕ್ತಿಗಳನ್ನು ಬಂಧಿಸಬೇಕು ಎಂದು ಡಿವೈಎಫ್‌ಐ ದ.ಕ ಜಿಲ್ಲಾ ಸಮಿತಿಯು ಪೊಲೀಸ್ ಕಮೀಷನರ್‌ರವರಲ್ಲಿ ಮನವಿ ಮಾಡಿದೆ ಎಂದು ಡಿವೈಎಫ್‌ಐ ದ.ಕ ಜಿಲ್ಲಾ ಅಧ್ಯಕ್ಷ ದಯಾನಂದ ಶೆಟ್ಟಿ, ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.