ಸಿಖ್ಖರು ‘ಭಾರತ್ ಮಾತಾ ಕಿ ಜೈ’ ಹೇಳುವಂತಿಲ್ಲ : ಮಾನ್
ಚಂಡಿಗಡ, ಮಾ.22: ಸಿಖ್ಖರು ಯಾವುದೇ ರೀತಿಯಲ್ಲೂ ಮಹಿಳೆಯರನ್ನು ಆರಾಧಿಸುವುದಿಲ್ಲ. ಆದುದರಿಂದ ಅವರು ‘ಭಾರತ್ ಮಾತಾಕೀ ಜೈ’ ಘೋಷಣೆಯನ್ನು ಕೂಗುವಂತಿಲ್ಲವೆಂದು ಶಿರೋಮಣಿ ಅಕಾಲ ದಳದ (ಅಮೃತಸರ) ಅಧ್ಯಕ್ಷ ಸಿಮ್ರನ್ ಜಿತ್ ಸಿಂಗ್ ಮಾನ್ ಹೇಳಿಕೆ ನೀಡುವ ಮೂಲಕ ಈ ಕುರಿತಾದ ವಿವಾದವನ್ನು ಮತ್ತೆ ಕೆದಕಿದ್ದಾರೆ.
ಭಟಿಂಡಾ ಕಾರಾಗೃಹದಲ್ಲಿ ಪಕ್ಷದ ಇಬ್ಬರು ಕಾರ್ಯಕರ್ತರನ್ನು ಭೇಟಿ ಮಾಡಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಮಾನ್, ಬಿಜೆಪಿಯವರ ಪ್ರಕಾರ, ದೇಶದ್ರೋಹದ ಆರೋಪದಲ್ಲಿ ವಿಚಾರಣೆ ನಡೆಸಬಹದು ಎಂದು ವಾದವನ್ನಾರಂಭಿಸಿ, ಸಿಖ್ಖರು ‘ವಹೇಗುರೂಜೀ ಕಾ ಖಾಲ್ಸಾ, ವಹೇ ಗುರೂಜೀ ಕೀ ಫತೇಹ್’ ಎಂದು ಹೇಳಿದ್ದಾರೆ.
ಸಿಖ್ಖರು ‘ವಂದೇ ಮಾತರಂ’ ಸಹ ಹೇಳಬಾರದೆಂಬುದನ್ನು ಬಿಜೆಪಿಯವರು ತಿಳಿದುಕೊಳ್ಳಬೇಕು. ಅಲ್ಲದೆ ಬಿಜೆಪಿ ಆಡಳಿತದ ಹರ್ಯಾಣದಲ್ಲಿ ಮಾಡಿರುವಂತೆ ಗೀತೆಯಂತಹ ಮತೀಯ ಗ್ರಂಥಗಳನ್ನೂ ಇತರ ಮತೀಯರ ಮೇಲೆ ಹೇರಬಾರದು ಎಂದವರು ಆಗ್ರಹಿಸಿದ್ದಾರೆ.
ಎಐಎಂಐಎಂ ರ ವಾರಿಸ್ ಪಠಾಣ್, ‘ಭಾರತ್ ಮಾತಾಕೀ ಜೈ’ಎಂದು ಹೇಳಲು ನಿರಾಕರಿಸಿ, ಬದಲಿಗೆ ‘ಜೈ ಹಿಂದ್’ ಎನ್ನಲು ಸಿದ್ಧನೆಂದು ಹೇಳಿದ ಬಳಿಕ ಈ ವಿವಾದ ಮುನ್ನಲೆಗೆ ಬಂದಿತ್ತು.