×
Ad

ವಿಟ್ಲ : ಸರಕಾರಿ ಕಾಲೇಜಿನಲ್ಲಿ ವಿದ್ಯಾರ್ಥಿ ತಂಡಗಳ ನಡುವೆ ಮಾರಾಮಾರಿ - ಐವರು ವಿದ್ಯಾರ್ಥಿಗಳು ಆಸ್ಪತ್ರೆಗೆ ದಾಖಲು

Update: 2016-03-22 18:12 IST

ಬಂಟ್ವಾಳ: ತಾಲೂಕಿನ ವಿಟ್ಲ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಎರಡು ಕೋಮಿನ ವಿದ್ಯಾರ್ಥಿಗಳ ನಡುವೆ ನಡೆದ ಮಾರಾಮಾರಿಯಲ್ಲಿ ಐವರು ವಿದ್ಯಾರ್ಥಿಗಳು ಗಾಯಗೊಂಡು ವಿಟ್ಲ ಮತ್ತು ಪುತ್ತೂರು ಆಸ್ಪತ್ರೆಗೆ ದಾಖಲಾದ ಘಟನೆ ಮಂಗಳವಾರ ನಡೆದಿದೆ.

   ಸೋಮವಾರದಂದು ದ್ವಿತೀಯ ಬಿ.ಕಾಂ ವಿದ್ಯಾರ್ಥಿ ಸಿನಾನ್ ಎಂಬಾತ ಅನ್ಯ ಕೋಮಿಗೆ ಸೇರಿದ ವಿದ್ಯಾರ್ಥಿನಿಯೊಂದಿಗೆ ಮಾತನಾಡಿದ ಎಂಬ ಕಾರಣಕ್ಕೆ ವಿದ್ಯಾರ್ಥಿಗಳ ತಂಡವೊಂದು ಆತನ ಮೇಲೆ ಹಲ್ಲೆಗೆ ಮುಂದಾಗಿದ್ದು, ಬಳಿಕ  ಶಮನಗೊಂಡಿತ್ತು ಎಂದು ತಿಳಿದು ಬಂದಿದೆ.

   ಆದರೆ, ಮಂಗಳವಾರ ಬೆಳಗ್ಗೆ ಅದೇ ವಿಷಯವನ್ನು ಕೆದಕಿದ ವಿದ್ಯಾರ್ಥಿಗಳ ತಂಡವೊಂದು ಸಿನಾನ್ ಮೇಲೆ ಹಲ್ಲೆ ನಡೆಸಿದೆ. ಈ ವೇಳೆ ಸಿನಾನ್ ನ ಸಹಾಯಕ್ಕೆಂದು ಬಂದ ಅದೇ ತರಗತಿಯ ಸಾಹಿದ್ ,  ದಿಲ್ಸಾನ್ ಎಂಬವರ ಮೇಲೂ ಮೊದಲೇ ತಂದಿಟ್ಟ ಕಬ್ಬಿಣದ ರಾಡ್ , ಬ್ಯಾಟ್ ನಿಂದ ಹಲ್ಲೆ ನಡೆಸಿದ್ದು , ಈ ಸಂದರ್ಭದಲ್ಲಿ ಎರಡೂ ತಂಡಗಳ ನಡುವೆ ಮಾರಾಮಾರಿ ನಡೆದಿವೆ ಎಂದು ಕಾಲೇಜಿನ ವಿದ್ಯಾರ್ಥಿಗಳು ತಿಳಿಸಿದ್ದಾರೆ.

   ಘಟನೆಯಿಂದ ಗಾಯಗೊಂಡಿರುವ ಸಾಹಿದ್,  ಸಿನಾನ್ , ದಿಲ್ಸಾನ್ ವಿಟ್ಲ ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರೆ, ಇನ್ನೊಂದು ತಂಡದ ಸನತ್, ಯೋಗೇಶ್ ಎಂಬವರು ಪುತ್ತೂರು ಆಸ್ಪತ್ರೆಗೆ ದಾಖಲಾಗಿದ್ದಾರೆ.

   ವಿಷಯ ತಿಳಿದು ಸ್ಥಳಕ್ಕೆ ದಾವಿಸಿರುವ ವಿಟ್ಲ ಠಾಣೆ ಪೊಲೀಸರು ತನಿಖೆ ಮುಂದುವರಿಸಿದ್ದು , ಘಟನೆಗೆ ಸಂಬಂಧಿಸಿ ಕಾಲೇಜು ಪ್ರಾಂಶುಪಾಲರು 20 ಮಂದಿ ವಿದ್ಯಾರ್ಥಿಗಳ ಹೆಸರನ್ನು ಪೊಲೀಸರಿಗೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News