ಮುಲ್ಕಿ: ಮಹಿಳಾ ಸಮಾಗಮ ಕಾರ್ಯಕ್ರಮ
ಮುಲ್ಕಿ, ಮಾ.22: ಎಲ್ಲಾ ಮಹಿಳೆಯರಲ್ಲಿಯೂ ಒಂದೊಂದು ಪ್ರತಿಭೆ ಅಡಗಿರುತ್ತದೆ. ಸಮಾಜ ಸೇವೆಯಲ್ಲಿ ಮಹಿಳೆಯೂ ನಿಸ್ವಾರ್ಥವಾಗಿ ತೊಡಗಿಕೊಂಡಾಗ ಆಕೆಗೆ ಮನೋಬಲದ ಧೈರ್ಯವನ್ನು ಮೊದಲು ಮನೆಯಿಂದ ನೀಡುವಂತೆ ಆಗಬೇಕು ಎಂದು ಮಂಗಳೂರು ಮಹಾನಗರ ಪಾಲಿಕೆಯ ಕಾರ್ಪೋರೇಟರ್ ಪ್ರತಿಭಾ ಕುಳಾಯಿ ಹೇಳಿದರು.
ಅವರು ಮುಲ್ಕಿ ಮತ್ತು ಮಂಗಳೂರಿನ ಕೇಂದ್ರ ಸಮಿತಿಯ ಯುವವಾಹಿನಿ ಸಂಸ್ಥೆಯ ಜಂಟಿ ಆಶ್ರಯದಲ್ಲಿ ಮುಲ್ಕಿ ಬಿಲ್ಲವ ಸಮಾಜ ಸೇವಾ ಸಂಘದಲ್ಲಿ ನಡೆದ ಮಹಿಳಾ ಸಮಾಗಮ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ಮಂಗಳೂರಿನ ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷ ಸಂತೋಷ್‌ಕುಮಾರ್ ಅಧ್ಯಕ್ಷತೆಯನ್ನು ವಹಿಸಿದ್ದರು.ಲೀಲಾವತಿ ಜಯ ಸಿ. ಸುವರ್ಣ ಮಹಿಳಾ ಸಮಾಗಮವನ್ನು ಉದ್ಘಾಟಿಸಿ ಶುಭಹಾರೈಸಿದರು.
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತೆ ರಾಮಕ್ಕ ಗಿಡಿಗೆರೆ, ಮುಲ್ಕಿ ನ.ಪಂ.ಮಾಜಿ ಅಧ್ಯಕ್ಷೆ ಸರೋಜಿನಿ ಸುವರ್ಣ, ರಾಷ್ಟ್ರೀಯ ಕ್ರೀಡಾ ಪ್ರತಿಭೆ ಹರ್ಷಿತಾ ಯಾದವ ಕೋಟ್ಯಾನ್ ಪೆರ್ಮುದೆ ಸೇರಿದಂತೆ ಒಟ್ಟು 28 ಮಂದಿ ವಿವಿಧ ಕ್ಷೇತ್ರದ
ಸಾಧಕರ ಮಹಿಳೆಯರನ್ನು ವಿಶೇಷವಾಗಿ ಗೌರವಿಸಲಾಯಿತು. ಮಂಗಳೂರು ಮಹಾನಗರ ಪಾಲಿಕೆಯಮಾಜಿ ಮೇಯರ್ ರಜನಿ ದುಗ್ಗಣ್ಣ, ಮುಲ್ಕಿ ನಾರಾಯಣಗುರು ಮಹಿಳಾ ಮಂಡಳಿಯ ಅಧ್ಯಕ್ಷೆ ಸರಸ್ವತಿ ರಾಘು ಸುವರ್ಣ ಉಪಸ್ಥಿತರಿದ್ದರು.
ಯುವವಾಹಿನಿ ಕೇಂದ್ರ ಸಮಿತಿಯ ನಿರ್ದೇಶಕಿ ಚಿತ್ರಾ ಚಂದ್ರಶೇಖರ ಸುವರ್ಣ ಪ್ರಸ್ತಾವನೆಗೈದರು, ಮುಲ್ಕಿ ಯುವವಾಹಿನಿ ಘಟಕದ ಅಧ್ಯಕ್ಷ ಎಚ್.ಸತೀಶ್‌ಕುಮಾರ್ ಸ್ವಾಗತಿಸಿದರು, ದೀಕ್ಷಾ ಸುವರ್ಣ ಮತ್ತು ಉಷಾ ನರೇಂದ್ರ ಕೆರೆಕಾಡು ಕಾರ್ಯಕ್ರಮ ನಿರೂಪಿಸಿದರು. ಯುವವಾಹಿನಿಯ ಮುಲ್ಕಿ ಘಟಕದ ಕೋಶಾಧಿಕಾರಿ ರಾಜೀವಿ ವಿಶ್ವನಾಥ್ ವಂದಿಸಿದರು.