ತಮಿಳುನಾಡಿನಲ್ಲಿ ಹಾರುವ ಹಾವು ಪತ್ತೆ
ಚೆನ್ನೈ, ಮಾ.23: ಮರದಿಂದ ಮರಕ್ಕೆ ಹಾವು ಹಾರುವುದು ನೋಡಿದ್ದೀರಾ? ಅಚ್ಚರಿಯಾದರೂ ಸತ್ಯ. ತೀರಾ ಅಪರೂಪದ ಮೂರು ಅಡಿ ಉದ್ದದ ಹಾರುವ ಹಾವು ಕೊಯಮತ್ತೂರಿನ ಹೊರವಲಯದ ಗ್ರಾಮವೊಂದರಲ್ಲಿ ಪತ್ತೆಯಾಗಿದೆ.
ವೆಂಕಟೇಶನ್ ಎಂಬ ರೈತ ಕಲಂಪಾಳ್ಯಂ ಎಂಬ ಗ್ರಾಮದಲ್ಲಿ ಆಹಾರ ಬೇಟೆಗಾಗಿ ಮರದಿಂದ ಮರಕ್ಕೆ ಹಾರುವ ಹಾವನ್ನು ಮೊದಲು ಪತ್ತೆ ಮಾಡಿದರು. ತಕ್ಷಣ ಹಾವು ಹಿಡಿಯುವವರಿಗೆ ಮಾಹಿತಿ ನೀಡಿದರು. ಮೂರು ಗಂಟೆ ಹೆಣಗಾಡಿ ಕೊನೆಗೂ ಹಾರುವ ಹಾವನ್ನು ಹಿಡಿಯುವಲ್ಲಿ ಯಶಸ್ವಿಯಾದರು. ಬಳಿಕ ಹಾವನ್ನು ಅರಣ್ಯ ಇಲಾಖೆ ವಶಕ್ಕೆ ಒಪ್ಪಿಸಲಾಯಿತು.
ಕಾಂಬೋಡಿಯಾ, ವಿಯೇಟ್ನಾಂನಂಥ ಆಗ್ನೇಯ ದೇಶಗಳ ಒಣಪ್ರದೇಶದಲ್ಲಿ ಇದು ಕಂಡುಬರುತ್ತದೆ. ಭಾಗಶಃ ಶ್ರೀಲಂಕಾದಲ್ಲೂ ಹಾರುವ ಹಾವುಗಳಿವೆ. ಭಾರತದಲ್ಲಿ ಇದು ತೀರಾ ಅಪರೂಪ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ವಿವರ ನೀಡಿದ್ದಾರೆ.
ಇಂಥ ಹಾವುಗಳು ಗಾಳಿಯಲ್ಲಿ ಸುಮಾರು 20 ಅಡಿ ವರೆಗೆ ಹಾರಬಲ್ಲವು. ಬೂದುಬಣ್ಣದ ಹಾವಿನಲ್ಲಿ ಎರಡು- ಮೂರು ಇಂಚು ದೂರದಲ್ಲಿ ಕಪ್ಪು ಚುಕ್ಕೆಗಳನ್ನು ಹೊಂದಿರುತ್ತದೆ. ಇದನ್ನು ಪುಟುಪತಿ ಅರಣ್ಯಕ್ಕೆ ಬಿಡಲಾಯಿತು.