ನಾಳೆಯಿಂದ ಮಂಗಳೂರಿನಲ್ಲಿ ಸಯನ್ಸ್ ಎಕ್ಸ್‌ಪ್ರೆಸ್ ರೈಲು
ಮಂಗಳೂರು, ಮಾರ್ಚ್ 23: ವಿಜ್ಞಾನದ ವಿವಿಧ ಕೌತುಕಗಳನ್ನು ಸಾರ್ವಜನಿಕರಿಗೆ ವೀಕ್ಷಿಸಲು ಅವಕಾಶ ಒದಗಿಸುವ ಸಯನ್ಸ್ ಎಕ್ಸ್‌ಪ್ರೆಸ್ ರೈಲು ಶುಕ್ರವಾರ ಮಂಗಳೂರಿಗೆ ಆಗಮಿಸಲಿದೆ.
ನಗರದ ಪಡೀಲ್‌ನಲ್ಲಿರುವ ಮಂಗಳೂರು ಜಂಕ್ಷನ್ ರೈಲು ನಿಲ್ದಾಣದಲ್ಲಿ ಮಾರ್ಚ್ 25ರಿಂದ 28ರವರೆಗೆ ಈ ರೈಲು ತಂಗಲಿದೆ. ವಿಜ್ಞಾನಕ್ಕೆ ಸಂಬಂಧಪಟ್ಟ ಹಲವಾರು ಕುತೂಹಲಕರ, ಸಂಶೋಧನೆಗಳ ಜಾಗೃತಿ ಮೂಡಿಸುವ ಈ ರೈಲು ಸಂಚಾರಿ ವಿಜ್ಞಾನ ಪ್ರದರ್ಶನವನ್ನು ಹೊಂದಿದೆ. ಮುಖ್ಯವಾಗಿ ಹವಾಮಾನ ಬದಲಾವಣೆ ಕುರಿತು ಸಾರ್ವಜನಿಕರಿಗೆ ಹೆಚ್ಚು ಜಾಗೃತಿ ಮೂಡಿಸಲು ವೈಜ್ಞಾನಿಕವಾಗಿ ಮಾಹಿತಿಯನ್ನು ಈ ರೈಲಿನಲ್ಲಿ ನೀಡಲಾಗುತ್ತದೆ.
16 ಬೋಗಿಗಳನ್ನು ಹೊಂದಿರುವ ಈ ರೈಲಿನ ಪ್ರತಿಯೊಂದು ಬೋಗಿಯೂ ಒಂದಕ್ಕೊಂದು ವಿಭಿನ್ನ ಪ್ರದರ್ಶನವನ್ನೊಳಗೊಂಡಿದೆ. ವಿಜ್ಞಾನದದ ಚಟುವಟಿಕೆಗಳು, ವೈಜ್ಞಾನಿಕ ಆಟಗಳು, ಪ್ರಯೋಗಾಲಯ, ಪರಿಸರ, ತಾಪಮಾನದ ಬದಲಾವಣೆ, ಮಾಲಿನ್ಯ ನಿಯಂತ್ರಣ, ದೈನಂದಿನ ಜೀವನದಲ್ಲಿ ವಿಜ್ಞಾನದ ಪಾತ್ರ, ಹುಲಿ ಸಂರಕ್ಷಣೆ ಮತ್ತಿತರ ವಿಷಯಗಳನ್ನು ಈ ರೈಲಿನಲ್ಲಿ ಕಂಡು ಅರಿಯಬಹುದಾಗಿದೆ.
ಮಾರ್ಚ್ 28ರವರೆಗೆ ಪ್ರತೀದಿನ ಬೆಳಿಗ್ಗೆ 10ರಿಂದ ಸಂಜೆ 5ಗಂಟೆಯವರೆಗೆ ಈ ಸಯನ್ಸ್ ಎಕ್ಸ್‌ಪ್ರೆಸ್ ರೈಲು ಸಾರ್ವಜನಿಕ ವೀಕ್ಷಣೆಗೆ ಲಭ್ಯವಿದೆ.