×
Ad

ಪುತ್ತೂರು: ನೆಲ್ಯಾಡಿ ವಸಂತಿ ಸಾವಿನ ಪ್ರಕರಣ ವೈದ್ಯರಿಂದ ನಿರ್ಲಕ್ಷ್ಯವಾಗಿಲ್ಲ- ಐಎಂಎ ಸ್ಪಷ್ಟನೆ

Update: 2016-03-23 18:19 IST

ಪುತ್ತೂರು,ಮಾ.23: ನೆಲ್ಯಾಡಿಯ ವೈದ ದಂಪತಿಗಳಾದ ಡಾ. ಮುರಳೀಧರ್ ಮತ್ತು ಡಾ. ಸುಧಾ ಮುರಳೀಧರ್ ಅವರು ಚಿಕಿತ್ಸೆಯಲ್ಲಿ ನಿರ್ಲಕ್ಷ್ಯ ವಹಿಸಿದ್ದಾರೆ ಎಂಬ ದೂರಿನಲ್ಲಿ ಸತ್ಯಾಂಶವಿಲ್ಲ. ಅಲ್ಲದೆ ಪೊಲೀಸರು ಪೂರ್ವಾಗ್ರಹ ಪೀಡಿತರಾಗಿ ವೈದ್ಯರ ವಿರುದ್ದ ಜಾತಿ ನಿಂದನೆ ಕೇಸು ದಾಖಲಿಸಿಕೊಂಡಿದ್ದಾರೆ ಎಂದು ಇಂಡಿಯನ್ ಮೆಡಿಕಲ್ ಎಸೋಸಿಯೇಶನ್ ಪುತ್ತೂರು ಇದರ ವೈದ್ಯಕೀಯ ದೌರ್ಜನ್ಯ ತಡೆ ಸಮಿತಿ ಅಧ್ಯಕ್ಷ ಡಾ. ರವಿಪ್ರಕಾಶ್ ಸ್ಪಷ್ಠ ಪಡಿಸಿದ್ದಾರೆ.
ಅವರು ಬುಧವಾರ ಪುತ್ತೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಡಾ. ಮುರಳೀಧರ್ ಅವರ ನೆಲ್ಯಾಡಿಯಲ್ಲಿರುವ ಅಶ್ವಿನಿ ಆಸ್ಪತ್ರೆಗೆ ಮಾ.17ರಂದು ಉಮೇಶ್ ನಾಯ್ಕ ಅವರ ಪತ್ನಿ ವಸಂತಿ ಎಂಬವರು ಹೆರಿಗೆಗಾಗಿ ದಾಖಲಾಗಿದ್ದರು. ಮಾ.18ರಂದು ಹೆರಿಗೆಯಾಗಿತ್ತು. ಆದರೆ ಈ ಸಂದರ್ಭದಲ್ಲಿ ರಕ್ತ ಸ್ರಾವ ಉಂಟಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿದ್ದರೂ ಅವರು ಅಲ್ಲಿ ಮೃತಪಟ್ಟಿದ್ದಾರೆ. ಆದರೆ ಈ ಸಂದರ್ಭದಲ್ಲಿ ಮೃತರ ಕುಟಂಬಸ್ಥರು ವೈದ್ಯರನ್ನು ಅವ್ಯಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಮಾನವೀಯತೆಯ ನೆಲೆಯಲ್ಲಿ ಅವರು ಯಾವುದೇ ಪೊಲೀಸ್ ದೂರು ನೀಡಿಲ್ಲ. ಆದರೆ ಉಮೇಶ್ ನಾಯ್ಕ ಅವರು ವೈದ್ಯರ ವಿರುದ್ದ ನಿರ್ಲಕ್ಷ್ಯತನ ಹಣ ಪಾವತಿಗೆ ಅಸಮರ್ಥರು ಎಂಬ ಕಾರಣಕ್ಕೆ ಚಿಕಿತ್ಸೆ ನೀಡಿಲ್ಲ ಎಂಬ ಆರೋಪ ಮಾಡಿದ್ದಾರೆ. ಆದರೆ ಎಲ್ಲಿಯೂ ಜಾತಿ ನಿಂದನೆ ಮಾಡಿದ್ದಾರೆ ಎಂಬ ಆರೋಪ ಮಾಡಿಲ್ಲ. ಆದರೆ ಪೊಲೀಸರು ಇದರೊಂದಿಗೆ ಜಾತಿನಿಂದನೆ ಮಾಡಿದ್ದಾರೆ ಕೇಸನ್ನೂ ದಾಖಲಿಸಿಕೊಂಡಿದ್ದಾರೆ. ಆದರೆ ವೈದ್ಯ ದಂಪತಿಗಳು ಎಲ್ಲೂ ಜಾತಿ ನಿಂದನೆ ಮಾಡಿಲ್ಲ. ಉಳಿದ ಕೇಸಿನ ಬಗ್ಗೆ ತನಿಖೆ ನಡೆಸುವುದಕ್ಕೆ ಐಎಂಎಯ ಅಭ್ಯಂತರವಿಲ್ಲ. ಅದಾಗ್ಯೂ ವೈದ್ಯರಿಂದ ಯಾವುದೇ ನಿರ್ಲಕ್ಷ್ಯತನ ನಡೆದಿಲ್ಲ. ಹಣಕ್ಕಾಗಿಯೂ ಪೀಡಿಸಿಲ್ಲ. ಈ ತನಕ ಉಮೇಶ್ ನಾಯ್ಕ ಅವರ ಕುಟುಂಬವು ವೈದ್ಯರ ಶುಲ್ಕವನ್ನು ಪಾ ವತಿಸಿಲ್ಲ ಎಂದು ಸ್ಪಷ್ಠ ಪಡಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಡಾ. ಮುರಳೀಧರ್ ಅವರು ವಸಂತಿ ಅವರಿಗೆ ಇದು ಮೂರನೆಯ ಹೆರಿಗೆಯಾಗಿದ್ದು, ಮೊದಲ 2 ಹೆರಿಗೆಯನ್ನೂ ನಮ್ಮ ಆಸ್ಪತ್ರೆಯಲ್ಲಿ ಡಾ. ಆಶಾ ಮುರಳೀಧರ್ ಅವರೇ ಮಾಡಿಸಿದ್ದರು. ಈ ಬಾರಿಯೂ ಅವರಲ್ಲಿಯೇ ಪರೀಕ್ಷೆ ಮಾಡಿಸಿಕೊಂಡಿದ್ದರು. ಸಹಜ ಹೆರಿಗೆಯ ಸಾಧ್ಯತೆಯ ಕಾರಣ ಶಸ್ತ್ರ ಚಿಕಿತ್ಸೆ ಮಾಡಲು ಹೇಳಿರಲಿಲ್ಲ. ಆದರೆ ಹೆರಿಗೆ ಬಳಿಕ ರಕ್ತ ಸ್ರಾವವಾಗಿದ್ದು ಇದನ್ನು ಔಷಧಿಯ ಮೂಲಕ ನಿಯಂತ್ರಿಸಲು ಸಾಧ್ಯವಿಲ್ಲ ಎಂದು ತಿಳಿದು ಬಂದಾಗ, ತಾನು ಮತ್ತು ಡಾ. ಆಶಾ ಸೇರಿಕೊಂಡು ಅವರನ್ನು ಮಂಗಳೂರಿನ ಕೆಎಂಸಿಗೆ ಕರೆದೊಯ್ದಿದ್ದೆವು. ಕೆಎಂಸಿ ಅಸ್ಪತ್ರೆಗೆ ಪೂರ್ವ ಮಾಹಿತಿ ನೀಡಿದ್ದೆವು. ನನ್ನ ಆಸ್ಪತ್ರೆಯಲ್ಲಿ ಚಿಕತ್ಸೆಗಾಗಿ ಕಾಯುತ್ತಿರುವ ಎಲ್ಲಾ ರೋಗಿಗಳನ್ನು ಬಿಟ್ಟು ನಾವಿಬ್ಬರೂ ವಸಂತಿ ಅವರ ಜೀವ ಉಳಿಸಲೆಂದು ಅಂಬುಲೆನ್ಸ್‌ನಲ್ಲಿ ಮಂಗಳೂರಿಗೆ ತೆರಳಿದ್ದೆವು. ಆದರೆ ಅವರ ಜೀವ ಉಳಿಸಲು ಸಾಧ್ಯವಾಗಿಲ್ಲ. ಬಿಸಿರೋಡ್ ತಲುಪುವಾಗ ಅವರಿಗೆ ಫಿಡ್ಸ್ ಬಂದಿತ್ತು. ಇದೆಲ್ಲವೂ ಉಮೇಶ್ ನಾಯ್ಕ ಅವರ ಕುಟುಂಬಕ್ಕೆ ಗೊತ್ತಿದ್ದರೂ ವಿನಾ ಕಾರಣ ನನ್ನ ಮೇಲೆ ನಿಂದನೆ ಮಾಡಿ ಕೇಸುದಾಖಲಿಸಿದ್ದಾರೆ ಎಂದು ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಐಎಂಎ ಪುತ್ತೂರು ಘಟಕದ ಅಧ್ಯಕ್ಷ ವಿಶ್ವನಾಥ ಭಟ್ ಕಾನಾವು, ಉಪಾಧ್ಯಕ್ಷ ಗಣೇಶ್ ಪ್ರಸಾದ್ ಮುದ್ರಾಜೆ, ರಾಜ್ಯ ಸಮಿತಿ ಸದಸ್ಯ ಡಾ. ರವೀಂದ್ರ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News