ಉಪ್ಪಿನಂಗಡಿ: ಲಾರಿ ಡಿಕ್ಕಿಯಾಗಿ ಪಾದಚಾರಿ ಮೃತ್ಯು
ಉಪ್ಪಿನಂಗಡಿ: ಲಾರಿ ಡಿಕ್ಕಿಯಾಗಿ ಪಾದಚಾರಿಯೋರ್ವರು ಸ್ಥಳದಲ್ಲೇ ಮೃತಪಟ್ಟ ಘಟನೆ ಬುಧವಾರ ಉಪ್ಪಿನಂಗಡಿ ಬಳಿಯ ಬೊಳ್ಳಾರ್ ಬಳಿ ನಡೆದಿದೆ. ಅಪಘಾತ ಬಳಿಕ ಲಾರಿ ಚಾಲಕ ಲಾರಿಯೊಂದಿಗೆ ಪರಾರಿಯಾಗಿದ್ದು, ಆತನನ್ನು ಗೋಳಿತೊಟ್ಟುವಿನಲ್ಲಿ ಉಪ್ಪಿನಂಗಡಿ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ಬೊಳ್ಳಾರು ಸಮೀಪದ ಸುಭಾಶ್‌ನಗರದ ನಿರಾಲ ನಿವಾಸಿ ಶ್ರೀನಿವಾಸ್ ಭಟ್ (80) ಮೃತ ವ್ಯಕ್ತಿ. 34ನೇ ನೆಕ್ಕಿಲಾಡಿಯ ಶ್ರೀ ರಾಘವೇಂದ್ರ ಮಠಕ್ಕೆ ತೆರಳಿದ್ದ ಅವರು ಇಂದು ಮಧ್ಯಾಹ್ನ ಅಲ್ಲಿಂದ ಮನೆಗೆ ಬರುತ್ತಿದ್ದ ಸಂದರ್ಭ ಈ ದುರ್ಘಟನೆ ನಡೆದಿದೆ. ಮಂಗಳೂರು ಕಡೆಯಿಂದ ಅತೀ ವೇಗವಾಗಿ ಬಂದ ಲಾರಿ ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ಶ್ರೀನಿವಾಸ್ ಭಟ್ ಅವರಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಶ್ರೀನಿವಾಸ್ ಭಟ್ ಅವರು ರಸ್ತೆ ಪಕ್ಕದ ಗುಂಡಿ ಜಾಗಕ್ಕೆಸೆಯಲ್ಪಟ್ಟಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಅಪಘಾತವೆಸಗಿ ಲಾರಿ ಪರಾರಿಯಾಗಿರುವ ಮಾಹಿತಿ ತಿಳಿದ ಉಪ್ಪಿನಂಗಡಿ ಪೊಲೀಸರು ಗೋಳಿತ್ತೊಟ್ಟುವಿನಲ್ಲಿ ಲಾರಿಯನ್ನು ತಡೆದಿದ್ದು, ಈ ಸಂದರ್ಭ ಚಾಲಕ ಅಪಘಾತವನ್ನು ಒಪ್ಪಿಕೊಳ್ಳದೆ ತಪ್ಪಿಸಿಕೊಳ್ಳಲೆತ್ನಿಸಿದ ಎನ್ನಲಾಗಿದೆ. ಬಳಿಕ ಪೊಲೀಸರು ಚಾಲಕ ಸಹಿತ ಲಾರಿಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಪುತ್ತೂರು ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೃತರು ಒಂದು ಗಂಡು ಹಾಗೂ ಐದು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.