×
Ad

ಕ್ಷಯರೋಗ ಮುಕ್ತಗೊಳಿಸಲು ಕ್ರಿಯಾಯೋಜನೆ ರೂಪಿಸಿ: ಎ.ಬಿ. ಇಬ್ರಾಹೀಂ

Update: 2016-03-24 15:12 IST

ಮಂಗಳೂರು, ಮಾ. 24: ದಕ್ಷಿಣ ಕನ್ನಡ ಜಿಲ್ಲೆಯನ್ನು ಕ್ಷಯರೋಗ ಮುಕ್ತಗೊಳಿಸುವ ನಿಟ್ಟಿನಲ್ಲಿ ಕ್ರಿಯಾಯೋಜನೆಯೊಂದನ್ನು ರೂಪಿಸಿ ಸೂಕ್ತ ಕ್ರಮಗಳನ್ನು ಅನುಷ್ಠಾನಗೊಳಿಸುವ ಕಾರ್ಯವಾಗಬೇಕು ಎಂದು ಜಿಲ್ಲಾಧಿಕಾರಿ ಎ.ಬಿ. ಇಬ್ರಾಹೀಂ ಜಿಲ್ಲೆಯ ವೈದ್ಯರಿಗೆ ಕರೆ ನೀಡಿದ್ದಾರೆ.


ದ.ಕ. ಜಿಲ್ಲಾಡಳಿತ ಹಾಗೂ ವಿವಿಧ ಸರಕಾರಿ ಹಾಗೂ ಸರಕಾರೇತರ ಸಂಸ್ಥೆಗಳ ಸಹಭಾಗಿತ್ವದಲ್ಲಿ ನಗರದ ಪುರಭವನದಲ್ಲಿ ಇಂದು ವಿಶ್ವ ಕ್ಷಯರೋಗ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.


ಜಿಲ್ಲೆಯಲ್ಲಿ 8 ಮೆಡಿಕಲ್ ಕಾಲೇಜುಗಳು, ನೂರಾರು ಪ್ಯಾರಾ ಮೆಡಿಕಲ್ ಸಂಸ್ಥೆಗಳಿದ್ದರೂ 1600ರಷ್ಟು ಕ್ಷಯ ರೋಗಿಗಳು ಇರುವುದು ಶೋಚನೀಯ. ಕ್ಷಯ ರೋಗ ಹಲವಾರು ರೋಗಗಳಿಗೆ ಆಹ್ವಾನ ನೀಡುವ ಸಾಂಕ್ರಾಮಿಕ ರೋಗವಾಗಿದ್ದು, ಅದನ್ನು ಸಂಪೂರ್ಣವಾಗಿ ತಡೆಯಲು ಅಸಾಧ್ಯ. ಆದರೆ ಈ ನಿಟ್ಟಿನಲ್ಲಿ ಸಮರ್ಪಕ ಪ್ರಯತ್ನಗಳಾದಲ್ಲಿ ಜಿಲ್ಲೆಯನ್ನು ಮುಂದಿನ ಮೂರ್ನಾಲ್ಕು ವರ್ಷಗಳಲ್ಲಿ ಕ್ಷಯರೋಗ ಮುಕ್ತಗೊಳಿಸಬಹುದಾಗಿದೆ ಎಂದು ಅವರು ಅಭಿಪ್ರಾಯಿಸಿದರು.


ಕಾರ್ಯಕ್ರಮದಲ್ಲಿ ನಗರದ ಸ್ಪಂದನ ಟ್ರಸ್ಟ್‌ನ ಆಡಳಿತಾಧಿಕಾರಿ ಭಗಿನಿ ಇವಾಂಜಲಿನ್‌ರನ್ನು ಸನ್ಮಾನಿಸಲಾಯಿತು. ಕಳೆದ 21 ವರ್ಷಗಳಿಂದ ಬಡವರು, ನಿರ್ಗತಿಕರಿಗೆ ಪ್ರಾಶಸ್ತ್ಯದ ಸೇವೆಯನ್ನು ನೀಡುತ್ತಿರುವ ಸಿ. ಇವಾಂಜಲಿನ್, 98ಕ್ಕೂ ಅಧಿಕ ಕ್ಷಯರೋಗಿಗಳಿಗೆ ಪೌಷ್ಠಿಕ ಆಹಾರವನ್ನು ಪೂರೈಸುವ ಕಾರ್ಯವನ್ನು ನಡೆಸುತ್ತಿದ್ದಾರೆ.


ವೇದಿಕೆಯಲ್ಲಿ ಯೆನೆಪೋಯ ಮೆಡಿಕಲ್ ಕಾಲೇಜನ ಅಸೋಸಿಯೇಟ್ ಪ್ರೊಫೆಸರ್ ಡಾ. ಅಕ್ಷಯ್ ಕೆ.ಎಂ. ಉಪಸ್ಥಿತರಿದ್ದು ಉಪನ್ಯಾಸ ನೀಡಿದರು.
ಜಿಲ್ಲಾ ವೆನ್‌ಲಾಕ್ ಆಸ್ಪತ್ರೆಯ ಶಸ್ತ್ರ ಚಿಕಿತ್ಸಕಿ ಡಾ. ರಾಜೇಶ್ವರಿ ದೇವಿ, ಲೇಡಿಗೋಶನ್ ಆಸ್ಪತ್ರೆಯ ಅಧೀಕ್ಷಕಿ ಡಾ. ಸವಿತಾ, ಕೆಎಂಸಿಯ ಡಾ.ವಿ.ಎನ್. ಹೊಳ್ಳ, ಜಿಲ್ಲಾ ನಿವೃತ್ತ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ. ಅಬ್ದುಲ್ ಹಮೀದ್, ಡಾ. ಅಮೃತ್ ಭಂಡಾರಿ ಮೊದಲಾದವರು ಉಪಸ್ಥಿತರಿದ್ದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಮಕೃಷ್ಣ ರಾವ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಕ್ಷಯ ನಿಯಂತ್ರಣಾಧಿಕಾರಿ ಡಾ. ಬದ್ರುದ್ದೀನ್ ಎಂ.ಎನ್. ಸ್ವಾಗತಿಸಿದರು.


ಸಿಬಿ ನ್ಯಾಟ್ ಕೇಂದ್ರ


ಪರಿಷ್ಕೃತ ರಾಷ್ಟ್ರೀಯ ಕ್ಷಯ ನಿಯಂತ್ರಣ ಕಾರ್ಯಕ್ರಮದಡಿ ಜಿಲ್ಲಾ ವೆನ್‌ಲಾಕ್ ಆಸ್ಪತ್ರೆಯಲ್ಲಿ ಎಂ.ಡಿ.ಆರ್. ಕ್ಷಯರೋಗದ ಪತ್ತೆಗಾಗಿ ಸಿ.ಬಿ. ನ್ಯಾಟ್ ಕೇಂದ್ರವನ್ನು ಆರಂಭಿಸಲಾಗಿದೆ. ಮೊದಲು ಕ್ಷಯರೋಗಿಗಳ ಕಫದ ಮಾದರಿಯನು ಪರೀಕ್ಷೆಗಾಗಿ ಬೆಂಗಳೂರು ಮತ್ತು ಬಿಜಾಪುರದ ಪ್ರಯೋಗಶಾಲೆಗಳಿಗೆ ಕಳುಹಿಸಲಾಗುತ್ತಿದ್ದು, ಪರೀಕ್ಷಾ ವರದಿ ಪಡೆಯಲು ವಿಳಂಬವಾಗುತ್ತಿತ್ತು. ಪ್ರಸ್ತುತ ದ.ಕ. ಜಿಲ್ಲೆಯಲ್ಲೇ ಕೇಂದ್ರ ಆರಂಭವಾಗಿರುವುದರಿಂದ ಎಂ.ಡಿ.ಆರ್. ಕ್ಷಯರೋಗವನ್ನು ಶೀಘ್ರವಾಗಿ ಪತ್ತೆ ಹಚ್ಚಲು ಸಾಧ್ಯವಾಗುತ್ತಿದೆ.
- ಡಾ. ರಾಮಕೃಷ್ಣ ರಾವ್.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News