ಅಮೆರಿಕದ ಮಸೀದಿಗಳಲ್ಲಿ ಹೆಚ್ಚಿನ ಕಣ್ಗಾವಲು: ಟ್ರಂಪ್ ಕರೆ
ವಾಶಿಂಗ್ಟನ್, ಮಾ. 24: ಶಂಕಿತ ಭಯೋತ್ಪಾದಕರ ವಿಚಾರಣೆಯಲ್ಲಿ ಅಮೆರಿಕ ವಾಟರ್‌ಬೋರ್ಡಿಂಗ್ ಮತ್ತು ಇತರ ಕಠಿಣ ವಿಧಾನಗಳನ್ನು ಬಳಸಬೇಕು ಎಂಬುದಾಗಿ ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದ ಮುಂಚೂಣಿ ಅಭ್ಯರ್ಥಿ ಆಕಾಂಕ್ಷಿ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಅದೇ ವೇಳೆ, ಬ್ರಸೆಲ್ಸ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ಹಿನ್ನೆಲೆಯಲ್ಲಿ, ಅಮೆರಿಕ ಗಡಿಯಲ್ಲಿ ಪ್ರಬಲ ಭದ್ರತೆಯನ್ನು ಹೊಂದಬೇಕು ಎಂಬ ತನ್ನ ನಿಲುವನ್ನು ಪುನರುಚ್ಚರಿಸಿದ್ದಾರೆ.
ಭವಿಷ್ಯದಲ್ಲಿ ದಾಳಿಗಳು ನಡೆಯುವುದನ್ನು ತಪ್ಪಿಸುವ ನಿಟ್ಟಿನಲ್ಲಿ, ಏನೆಲ್ಲಾ ಮಾಡಬೇಕೋ ಅವುಗಳನ್ನು ಮಾಡಲು ಅಧಿಕಾರಿಗಳಿಗೆ ಸಾಧ್ಯವಾಗಬೇಕು ಎಂದು ಬಿಲಿಯಾಧೀಶ ಉದ್ಯಮಿ ಹೇಳಿದರು.
‘‘ವಾಟರ್‌ಬೋರ್ಡಿಂಗ್ ಒಳ್ಳೆಯದು. ಕಾನೂನುಗಳನ್ನು ವಿಸ್ತರಿಸಲು ಸಾಧ್ಯವಾದರೆ, ವಾಟರ್‌ಬೋರ್ಡಿಂಗ್‌ಗಿಂತಲೂ ತುಂಬಾ ಹೆಚ್ಚಿನದನ್ನು ನಾನು ಮಾಡುತ್ತೇನೆ’’ ಎಂದು ಎನ್‌ಬಿಸಿ ಟೆಲಿವಿಶನ್ ಚಾನೆಲ್‌ನ ‘ಟುಡೆ’ ಕಾರ್ಯಕ್ರಮದಲ್ಲಿ ಭಾಗವಹಿಸಿದ ಟ್ರಂಪ್ ಹೇಳಿದರು.
ಚಿತ್ರಹಿಂಸೆಯಿಂದ ಅಗತ್ಯ ಮಾಹಿತಿಗಳನ್ನು ಪಡೆಯಬಹುದು ಎಂಬ ಬಗ್ಗೆ ತನಗೆ ನಂಬಿಕೆ ಇದೆ ಎಂದರು. ‘‘ಈ ಜನರಿಂದ ನೀವು ಮಾಹಿತಿಗಳನ್ನು ಪಡೆದುಕೊಳ್ಳಬೇಕು’’ ಎಂದು ಅವರು ಹೇಳಿದರು.
ವಾಟರ್‌ಬೋರ್ಡಿಂಗ್ ಎಂದರೆ, ವ್ಯಕ್ತಿಯನ್ನು ಅಂಗಾತ ಮಲಗಿಸಿ ಅಲುಗಾಡದಂತೆ ಕೈಕಾಲುಗಳನ್ನು ಬಂಧಿಸಿ ಮುಖದ ಮೇಲೆ ಬಟ್ಟೆಯೊಂದನ್ನು ಹಾಕಿ ಮೂಗು ಮತ್ತು ಮುಖಕ್ಕೆ ನೀರು ಸುರಿಯುವುದು. ಇದು ಆತನಿಗೆ ನೀರಿನಲ್ಲಿ ಮುಳುಗುವ ಅನುಭವವನ್ನು ನೀಡುತ್ತದೆ.
2009ರಲ್ಲಿ ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ ಅಧಿಕಾರಕ್ಕೆ ಬಂದ ಹೊಸದರಲ್ಲಿ ಈ ವಿಚಾರಣಾ ಪದ್ಧತಿಯನ್ನು ನಿಷೇಧಿಸಿದ್ದಾರೆ.
ಅಮೆರಿಕದ ಮಸೀದಿಗಳಲ್ಲಿ ಕಾನೂನು ಅನುಷ್ಠಾನ ಕಣ್ಗಾವಲನ್ನು ಹೆಚ್ಚಿಸಬೇಕು ಎಂಬುದಾಗಿಯೂ ಟ್ರಂಪ್ ಕರೆ ನೀಡಿದ್ದಾರೆ.
ಅದೇ ವೇಳೆ, ಪಕ್ಷದೊಳಗೆ ಟ್ರಂಪ್‌ನ ಎದುರಾಳಿ ಟೆಕ್ಸಾಸ್‌ನ ಸೆನೆಟರ್ ಟೆಡ್ ಕ್ರೂಝ್, ಹೆಚ್ಚಿನ ಪ್ರಮಾಣದಲ್ಲಿ ಮುಸ್ಲಿಂ ಜನಸಂಖ್ಯೆಯಿರುವ ಪಟ್ಟಣಗಳಲ್ಲಿ ಪೊಲೀಸ್ ತಪಾಸಣೆಯನ್ನು ಬಿಗಿಗೊಳಿಸಬೇಕು ಎಂದು ಸಲಹೆ ನೀಡಿದ್ದಾರೆ.
‘‘ಮುಸ್ಲಿಮರು ಮೂಲಭೂತವಾದಿಗಳಾಗುವ ಮುನ್ನ ಅವರ ಪಟ್ಟಣಗಳಲ್ಲಿ ಪೊಲೀಸ್ ಗಸ್ತು ಹೆಚ್ಚಿಸಬೇಕು ಹಾಗೂ ಇದಕ್ಕಾಗಿ ಕಾನೂನುಗಳನ್ನು ಬಲಪಡಿಸಬೇಕು’’ ಎಂದು ಹೇಳಿಕೆಯೊಂದರಲ್ಲಿ ಕ್ರೂಝ್ ಹೇಳಿದ್ದಾರೆ.