×
Ad

ಮಾ.25ರಿಂದ ಮಂಗಳೂರಿನಲ್ಲಿ ಸಯನ್ಸ್ ಎಕ್ಸ್‌ಪ್ರೆಸ್ ರೈಲು

Update: 2016-03-24 18:07 IST

ಮಂಗಳೂರು, ಮಾ.24: ವಿಜ್ಞಾನದ ವಿವಿಧ ಕೌತುಕಗಳನ್ನು ಸಾರ್ವಜನಿಕರಿಗೆ ವೀಕ್ಷಿಸಲು ಅವಕಾಶ ಒದಗಿಸುವ ‘ಸಾಯನ್ಸ್ ಎಕ್ಸ್‌ಪ್ರೆಸ್ ರೈಲು’ ಶುಕ್ರವಾರ (ಮಾ.25)ಮಂಗಳೂರಿಗೆ ಆಗಮಿಸಲಿದೆ.

ನಗರದ ಪಡೀಲ್‌ನಲ್ಲಿರುವ ಮಂಗಳೂರು ಜಂಕ್ಷನ್ ರೈಲು ನಿಲ್ದಾಣದಲ್ಲಿ ಮಾರ್ಚ್ 25ರಿಂದ 28ರವರೆಗೆ ಈ ರೈಲು ತಂಗಲಿದೆ. ವಿಜ್ಞಾನಕ್ಕೆ ಸಂಬಂಧಪಟ್ಟ ಹಲವಾರು ಕುತೂಹಲಕರ, ಸಂಶೋಧನೆಗಳ ಜಾಗೃತಿ ಮೂಡಿಸುವ ಈ ರೈಲು ಸಂಚಾರಿ ವಿಜ್ಞಾನ ಪ್ರದರ್ಶನವನ್ನು ಹೊಂದಿದೆ. ಮುಖ್ಯವಾಗಿ ಹವಾಮಾನ ಬದಲಾವಣೆ ಕುರಿತು ಸಾರ್ವಜನಿಕರಿಗೆ ಹೆಚ್ಚು ಜಾಗೃತಿ ಮೂಡಿಸಲು ವೈಜ್ಞಾನಿಕವಾಗಿ ಮಾಹಿತಿಯನ್ನು ಈ ರೈಲಿನಲ್ಲಿ ನೀಡಲಾಗುತ್ತಿದೆ.

16 ಬೋಗಿಗಳನ್ನು ಹೊಂದಿರುವ ಈ ಎಸಿ ರೈಲಿನ ಪ್ರತಿಯೊಂದು ಬೋಗಿಯೂ ಒಂದಕ್ಕೊಂದು ವಿಭಿನ್ನ ಪ್ರದರ್ಶನವನ್ನೊಳಗೊಂಡಿದೆ. ವಿಜ್ಞಾನದದ ಚಟುವಟಿಕೆಗಳು, ವೈಜ್ಞಾನಿಕ ಆಟಗಳು, ಪ್ರಯೋಗಾಲಯ, ಪರಿಸರ, ತಾಪಮಾನದ ಬದಲಾವಣೆ, ಮಾಲಿನ್ಯ ನಿಯಂತ್ರಣ, ದೈನಂದಿನ ಜೀವನದಲ್ಲಿ ವಿಜ್ಞಾನದ ಪಾತ್ರ, ಹುಲಿ ಸಂರಕ್ಷಣೆ ಮತ್ತಿತರ ವಿಷಯಗಳನ್ನು ಈ ರೈಲಿನಲ್ಲಿ ಕಂಡು ಅರಿಯಬಹುದಾಗಿದೆ.

2007ರ ಅಕ್ಟೋಬರ್ 30ರಂದು ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಜರ್ಮನ್ ಚಾನ್ಸೆಲರ್ ಆ್ಯಂಗೆಲಾ ಮೆರ್ಕಲ್ ಅವರಿಂದ ಚಾಲನೆ ಪಡೆದಿದ್ದ ಈ ರೈಲು, ಕಳೆದ ಏಳು ವರ್ಷಗಳಿಂದ ದೇಶದ ಉದ್ದಗಲಕ್ಕೂ ಸಂಚಾರ ನಡೆಸಿದೆ. ಈವರೆಗೆ ರೈಲು 1,22,000 ಕಿ.ಮೀ.ಗಳನ್ನು ಸಂಚರಿಸಿದ್ದು, 1.33 ಕೋಟಿಗೂ ಅಧಿಕ ವೀಕ್ಷಕರು ರೈಲಿನ ಈ ಪ್ರದರ್ಶನವನ್ನು ವೀಕ್ಷಿಸಿದ್ದಾರೆ. 1,404 ದಿನಗಳಲ್ಲಿ ಈ ರೈಲು 391 ರೈಲ್ವೇ ಜಂಕ್ಷನ್‌ಗಳಲ್ಲಿ ವಾಸ್ತವ್ಯಹೂಡಿ ಪ್ರದರ್ಶನವನ್ನು ನೀಡಿದೆ.

ಪ್ರಸಕ್ತ ಪ್ರಯಾಣದಲ್ಲಿ ಈ ಸಾಯನ್ಸ್ ಎಕ್ಸ್‌ಪ್ರೆಸ್ ರೈಲು 30 ರಾಜ್ಯಗಳ 64 ಕಡೆಗಳಲ್ಲಿ ಪ್ರದರ್ಶನ ನೀಡಲಿದೆ. ಒಟ್ಟು 19,800 ಕಿ.ಮೀ. ಸಂಚಾರದ ಮೂಲಕ ಹವಾಮಾನ ಬದಲಾವಣೆಯ ಕುರಿತು ಸಂದೇಶವನ್ನು ನೀಡಲಿದೆ ಎಂದು ದಕ್ಷಿಣ ರೈಲ್ವೇ ಪ್ರಕಟನೆ ತಿಳಿಸಿದೆ.

ಮಾರ್ಚ್ 28ರವರೆಗೆ ಪ್ರತಿದಿನ ಬೆಳಿಗ್ಗೆ 10ರಿಂದ ಸಂಜೆ 5ಗಂಟೆಯವರೆಗೆ ಈ ಸಾಯನ್ಸ್ ಎಕ್ಸ್‌ಪ್ರೆಸ್ ರೈಲು ಸಾರ್ವಜನಿಕ ವೀಕ್ಷಣೆಗೆ ಲಭ್ಯವಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News