×
Ad

ಪುತ್ತೂರು: ಮರಳು ನೀತಿ ವಿರೋಧಿಸಿ ಪ್ರತಿಭಟನೆ

Update: 2016-03-24 18:23 IST

ಪುತ್ತೂರು: ಸರ್ಕಾರವು ಮರಳಿನ ಮೇಲೆ ಏಕಾಏಕಿ ನಿಯಂತ್ರಣ ಹೇರುವ ಮೂಲಕ ಜನಸಾಮಾನ್ಯರಿಗೆ ಮತ್ತು ಕಟ್ಟಡ ನಿರ್ಮಾಣದಾರರಿಗೆ ಸಮಸ್ಯೆಯನ್ನು ಸೃಷ್ಟಿಸಿದೆ.

ಅನ್ನಭಾಗ್ಯದಂತಹ ಭಾಗ್ಯಗಳನ್ನು ನೀಡುವ ಸರ್ಕಾರ ಕರಾವಳಿ ಜನರಿಗೆ ಮರಳು ದೌರ್ಭಾಗ್ಯ ನೀಡಿದ್ದು, ಮೂಲಸೌಕರ್ಯ ಕೇಳಿದರೂ ಬಂಧನದ ಭೀತಿ ಎದುರಾಗುವಂತಾಗಿದೆ. ಮರಳಿಗೆ ಮುಕ್ತ ನೀತಿ ಅನುಸರಿಸಿ ಸಮಸ್ಯೆಯನ್ನು ಪರಿಹರಿಸಬೇಕು ಎಂದು ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಂಜೀವ ಮಠಂದೂರು ಆಗ್ರಹಿಸಿದರು.

ಅವರು ಪುತ್ತೂರು ತಾಲೂಕು ಲಾರಿ ಚಾಲಕ- ಮಾಲೀಕರ ಹಾಗೂ ಮರಳು ವ್ಯಾಪಾರಸ್ಥರ ಸಂಘದ ವತಿಯಿಂದ ಗುರುವಾರ ಪುತ್ತೂರಿನ ಮಿನಿವಿಧಾನಸೌಧದ ಮುಂಭಾಗದಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದರು. ಕೂಲಿ, ಗಾರೆ ಕಾರ್ಮಿಕರು, ಮನೆ ಕಟ್ಟುವವರಿಗೆ, ಹೊಟ್ಟೆಪಾಡಿಗೆ ದುಡಿಯುವ ಚಾಲಕರಿಗಾಗಿ ಹೋರಾಟ ಸಂಘಟಿಸಲಾಗಿದೆ. ಸರ್ಕಾರದ ಗಮನ ಸೆಳೆಯುವ ಉದ್ದೇಶದಿಂದ ವಿನೂತನವಾಗಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಮಳೆ ಬೀಳುವ ಪ್ರದೇಶವಾದ ಕರಾವಳಿಯ ನದಿ ತಪ್ಪಲಿನಲ್ಲಿ ಮರಳು ರಾಶಿ ಬೀಳುತ್ತದೆ. ಹಲವು ವರ್ಷಗಳಿಂದ ಕಾನೂನಿನ ಹಂಗಿಲ್ಲದೇ ತಮಗೆ ಅವಶ್ಯವಾದ ಮರಳನ್ನು ತೆಗೆಯಲಾಗುತ್ತಿತ್ತು. ಆದರೆ ಇದೀಗ ಸರ್ಕಾರ ನಿಯಂತ್ರಣ ಹೇರಿದ್ದು ಜನಸಾಮಾನ್ಯರ ಸಮಸ್ಯೆಗೆ ಕಾರಣವಾಗಿದೆ ಎಂದರು.

ರಾಜ್ಯಕ್ಕೆ ಒಂದು ನೀತಿ ಅನುಸರಿಸುವ ಸರ್ಕಾರ, ಜಿಲ್ಲೆಗೆ ಮತ್ತೊಂದು ಕಾನೂನು ಅನುಸರಿಸುತ್ತಿದೆ. ಜಿಲ್ಲೆಯಿಂದ ಬೆಂಗಳೂರು ಮತ್ತಿತರ ದೂರದ ಊರುಗಳಿಗೆ ಸಾಗಾಟ ಮಾಡುತ್ತಿರುವ ಮರಳು ಲಾರಿಗಳನ್ನು ನಿಯಂತ್ರಿಸುವುದಿಲ್ಲ. ಅವು ಹೆದ್ದಾರಿಯಲ್ಲೇ ರಾಜಾರೋಷವಾಗಿ ಸಾಗಾಟ ನಡೆಸುತ್ತವೆ. ಪಾಪದವರ ಲಾರಿಗಳನ್ನು ಹಿಡಿದು ಪ್ರಕರಣ ದಾಖಲಿಸಲಾಗುತ್ತಿದೆ. ಹಿಂದಿನಂತೆ ಮರಳುಗಾರಿಕೆಗೆ ಮುಕ್ತ ಪರವಾನಗಿ ನೀಡಿದರೆ ಸಮಸ್ಯೆ ಉದ್ಭವಿಸದು ಎಂದು ಹೇಳಿದರು.

ಜಿಪಂ ಮಾಜಿ ಅಧ್ಯಕ್ಷೆ ಆಶಾ ತಿಮ್ಮಪ್ಪ ಮಾತನಾಡಿ, ಮರಳುಗಾರಿಕೆ ಸ್ಥಗಿತಗೊಂಡ ಕಾರಣದಿಂದ ಲಾರಿ ಮಾಲೀಕರು- ಚಾಲಕರು ತೊಂದರೆ ಅನುಭವಿಸುತ್ತಿದ್ದಾರೆ. ಸಾಲದ ಕಂತು ತುಂಬಲಾಗದೇ ಸಂಕಷ್ಟ ಎದುರಿಸುತ್ತಿದ್ದಾರೆ. ಮಾನವೀಯ ನೆಲೆಯಲ್ಲಿ ಮರಳುಗಾರಿಕೆಗೆ ತಕ್ಷಣ ಅವಕಾಶ ಕಲ್ಪಿಸಬೇಕು. ಬರೀಯ ಕಾರ್ಮಿಕರಷ್ಟೆ ಅಲ್ಲ ಕುಟುಂಬಗಳು ಕಂಗಾಲಾಗಿವೆ. ಯಾವುದೇ ಕಾರಣಕ್ಕೂ ಮರಳುಗಾರಿಕೆಯನ್ನು ಪಿಡಬ್ಲೂೃಡಿಗೆ ವಹಿಸಬಾರದು. ಈ ಹಿಂದಿನಂತೆ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಮೂಲಕವೇ ಪರವಾನಗಿ ನೀಡುವಂತೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ರಾಕೇಶ್ ರೈ ಕೆಡೆಂಜಿ, ಸುಮಾರು 1 ಸಾವಿರ ಧಕ್ಕೆಗಳಲ್ಲಿ ಕೇವಲ 4 ಬ್ಲಾಕ್‌ಗಳಿಗೆ ಮಾತ್ರ ಮರಳುಗಾರಿಕೆಗೆ ಅವಕಾಶ ನೀಡಲಾಗಿದೆ. 4 ಬ್ಲಾಕ್‌ಗಳನ್ನು ರಚಿಸುವ ಅಗತ್ಯ ಇರಲಿಲ್ಲ. ಮುಕ್ತವಾಗಿ ಮರಳುಗಾರಿಕೆಗೆ ಪರವಾನಗಿ ನೀಡಿದರೆ ಯಾವುದೇ ಸಮಸ್ಯೆ ಸೃಷ್ಟಿಯಾಗುವುದಿಲ್ಲ ಎಂದರು.

ಮುಖಂಡರಾದ ಆರ್.ಸಿ.ನಾರಾಯಣ್, ಸುಧಾಕರ್ ರಾವ್ ಆರ್ಯಾಪು, ಪ್ರಮೀಳಾ ಜನಾರ್ದನ್, ಕನ್ನಡ ಸೇನೆಯ ಚಂದ್ರಶೇಖರ್, ಕೃಷ್ಣಕುಮಾರ್ ರೈ ಗುತ್ತು, ಸವಣೂರು ಗ್ರಾಪಂ ಅಧ್ಯಕ್ಷೆ ಇಂದಿರಾ ಬಿ.ಕೆ, ಗಿರೀಶ್ ಪಡ್ಡಾಯೂರು, ಅರುಣ್ ಕುಮಾರ್ ಪುತ್ತಿಲ ಮೊದಲಾದವರು ಉಪಸ್ಥಿತರಿದ್ದರು. ದಿನೇಶ್ ಮೆದು ಸ್ವಾಗತಿಸಿ, ವಂದಿಸಿದರು.

ಲಾರಿಗಳ ರ್ಯಾಲಿ:

ಮರಳು ಸಾಗಾಟ ಮಾಡುತ್ತಿರುವ ಸುಮಾರು 250ಕ್ಕೂ ಅಧಿಕ ಲಾರಿಗಳು ದರ್ಬೆ ಫಾ.ಪತ್ರವೋ ವೃತ್ತದ ಬಳಿಯಿಂದ ರ್ಯಾಲಿ ಆರಂಭಿಸಿ ಮುಖ್ಯ ರಸ್ತೆಯಲ್ಲಿ ಸಾಗಿ ಕಿಲ್ಲೆ ಮೈದಾನಕ್ಕೆ ಆಗಮಿಸಿದವು. ಲಾರಿಗಳ ರ್ಯಾಲಿಗೆ ದರ್ಬೆ ವೃತ್ತದಲ್ಲಿ ಗುತ್ತಿಗೆದಾರ ರಾಧಾಕೃಷ್ಣ ನಾಕ್ ಚಾಲನೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News