×
Ad

ಕೊಣಾಜೆ: ಇರಾ ಬ್ರಹ್ಮಕಲಶಾಭಿಷೇಕ ಸಭಾ ಕಾರ್ಯಕ್ರಮ

Update: 2016-03-24 19:23 IST

ಕೊಣಾಜೆ: ಇಂದು ಭಾರತ ವಿಶ್ವಗುರು ಆಗುವುದಕ್ಕೆ ಇಲ್ಲಿನ ಜನರ ಧಾರ್ಮಿಕ ನಂಬಿಕೆಯೇ ಕಾರಣ. ಭಾರತದ ಹಿಂದು ಧಾರ್ಮಿಕ ಕ್ಷೇತ್ರಗಳು ಹಿಂದಿನಿಂದಲೂ ಸಂಪತ್ಭರಿತವಾಗಿದ್ದು ಗುಜರಾತ್‌ನ ದೇವಸ್ಥಾನವೊಂದು 18 ಬಾರಿ ದಾಳಿಗೊಳಗಾದರೂ ಸರ್ದಾರ್ ವಲ್ಲಭಬಾಯಿ ಪಟೇಲ್ ಪುನರ್ ನಿರ್ಮಿಸುವವಾಗಲೂ ಸಂಪತ್ತಿಗೆ ಕೊರತೆಯಾಗಿರಲಿಲ್ಲ ಎನ್ನುವು ಇತಿಹಾಸಕಾರರಿಂದ ತಿಳಿಯುತ್ತದೆ . ಆದ್ದರಿಂದ ನಮ್ಮ ಧಾರ್ಮಿಕ ಪರಂಪರೆ ಇಂದಿಗೂ ಗಟ್ಟಿಯಾಗಿದೆ ಎಂದು ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಅಭಿಪ್ರಾಯಪಟ್ಟರು.

ಇರಾ ಆಚೆಬೈಲು ಶ್ರೀ ಅರಸು ಕುರಿಯಡಿತ್ತಾಯ ದೈವದ ಪ್ರತಿಷ್ಠ, ಬ್ರಹ್ಮಕಲಶಾಭಿಷೇಕ ಪ್ರಯುಕ್ತ ಗುರುವಾರ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮ ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು.
  ಯಾವತ್ತೂ ಕಾನೂನು ಧರ್ಮಕಟ್ಟಲೆಗಳನ್ನು ಮೀರಬಾರದು. ಆದರೆ ಇಂದು ಶಿಷ್ಟಾಚಾರದ ಎಲ್ಲೆಯನ್ನು ಕಾನೂನು ಮೀರುತ್ತಿದೆ. ಇಂದು ಕಾನೂನು ಕಾಯ್ದೆಗಳು ಅಂಗಡಿಗಳಲ್ಲಿ ಬುಟ್ಟಿಯಲ್ಲಿ ಜನಸಾಮಾನ್ಯರಿಗೆ ಸಿಗುವಂತಹ ವಸ್ತುವಾಗಿರುವುದು ಖೇದಕರ ಎಂದು ಹೇಳಿದರು.
      ಧಾರ್ಮಿಕ ದತ್ತಿ ಇಲಾಖೆ ಕಾನೂನು ಪ್ರಕಾರ ಹಿಂದು ಧಾರ್ಮಿಕ ಕೇಂದ್ರಗಳಲ್ಲಿ ಹಿಂದುಯೇತರರಿಗೆ ಯಾವುದೇ ಅಧಿಕಾರ ಇಲ್ಲ. ಆದರೆ ಪುತ್ತೂರು ದೇವಸ್ಥಾನದ ಜಾತ್ರೆಗೆ ಜಿಲ್ಲಾಧಿಕಾರಿ ಕರೆಯುವಂತಾದರೆ ಹಿಂದುಗಳು ಎಲ್ಲಿಗೆ ಹೋಗಬೇಕು. ಈ ವಿಚಾರದಲ್ಲಿ ವಿದಾನಸಭೆಯಲ್ಲಿ ಚರ್ಚೆಯಾದಾಗ ಧಾರ್ಮಿಕ ದತ್ತಿ ಇಲಾಖೆಯ ಕಾನೂನನ್ನು ಅರ್ಧ ಗಂಟೆಯಲ್ಲಿ ರದ್ದುಪಡಿಸುವಂತೆ ಸಭಾಪತಿ ಸೂಚನೆ ನೀಡುವುದಾದರೆ ಹಿಂದು ಧರ್ಮದಲ್ಲಿ ಬರಗಾಲ ಬಂದಿದೆಯೇ ಎಂದು ಪ್ರಶ್ನಿಸಿದರು.
ನಿವೃತ್ತ ಪ್ರಾಧ್ಯಾಪಕ ಶಿಕಾರಿಪುರ ಕೃಷ್ಣಮೂರ್ತಿ ಧಾರ್ಮಿಕ ಉಪನ್ಯಾಸ ನೀಡಿ, ಬದುಕಿದಾಗ ಇರುವ ಜಾತಿ, ಧರ್ಮ, ಆಸ್ತಿ, ಸಂಪತ್ತು ಎಲ್ಲವೂ ತಾತ್ಕಾಲಿಕ. ಇದನ್ನೇ ಮುಂದಿಟ್ಟುಕೊಂಡು ಬಡಿದಾಡುವ ಬದಲು ದೇಹ ಮತ್ತು ಮನಸ್ಸನ್ನು ಸೇರಿಸಿ ಆತ್ಮದ ಮೂಲಕ ಚೆನ್ನಾಗಿ ದುಡಿಸಿಕೊಂಡು ಪುಣ್ಯಕರ್ಮದ ಮೂಲಕ ಮುಂದಿನ ಜನ್ಮಕ್ಕೆ ಹೋಗುವ ಪ್ರಯತ್ನ ಮಾಡಬೇಕು ಎಂದರು.
ಪತ್ರಕರ್ತ ಮನೋಹರ್ ಪ್ರಸಾದ್ ಅಧ್ಯಕ್ಷತೆ ವಹಿಸಿದ್ದರು. ಇರಾ ಶ್ರೀ ಸೋಮನಾಥೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಕಲ್ಲಾಡಿ ದೇವಿಪ್ರಸಾದ್ ಶೆಟ್ಟಿ, ಶ್ರೀ ಅರಸು ಕುರಿಯಡಿತ್ತಾಯ ದೈವಂಗಳ ಬೀಡು ಆಡಳಿತದಾರ ವೇಣುಗೋಪಾಲ ಭಂಡಾರಿ, ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಹರೀಶ್ ಆಚಾರ್, ಉದ್ಯಮಿ ವೈ.ಬಿ.ಸಂದರ್, ಉಳ್ಳಾಲ ಶ್ರೀ ವೀರಭದ್ರ ದುರ್ಗಾಪರಮೇಶ್ವರಿ ದೇವಸ್ಥಾನದ ಅಧ್ಯಕ್ಷ ವಿಜಯ್ ಕುಮಾರ್, ಉದ್ಯಮಿ ಜಯಂತ್ ಕೊಂಡಾಣ ಮೊದಲಾದವರು ಉಪಸ್ಥಿತರಿದ್ದರು.
ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ಜಗದೀಶ ಶೆಟ್ಟಿ ಇರಾಗುತ್ತು ಸ್ವಾಗತಿಸಿದರು. ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಹರೀಶ್ ಇರಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಪತ್ರಕರ್ತ ದಿನೇಶ್ ಇರಾ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News