×
Ad

ಕಲಿತ ಶಾಲೆಗೆ ಕಲ್ಲೆಸೆದು ವಿದಾಯ ಹೇಳಿದ ವಿದ್ಯಾರ್ಥಿಗಳು!

Update: 2016-03-24 21:33 IST

 ಮಂಜೇಶ್ವರ, ಮಾ.24: ಹೈಸ್ಕೂಲು ವಿದ್ಯಾಭ್ಯಾಸದ ಅಂತಿಮ ಹಂತ ಹತ್ತನೆ ತರಗತಿಯ ಕೊನೆಯ ಪರೀಕ್ಷೆಯನ್ನು ಮುಗಿಸಿ ಭಾರವಾದ ಮನಸ್ಸಿನಿಂದ ತೆರಳುವ ವಿದ್ಯಾರ್ಥಿಗಳ ನಡುವೆ, ಕಲಿತ ಶಾಲೆಗೆ ಕಲ್ಲೆಸೆದು ದಾಂಧಲೆ ನಡೆಸಿದ ಹೊಸ ತಲೆಮಾರಿನ ಪರಾಕ್ರಮವೊಂದು ಕುಂಬಳೆಯಲ್ಲಿ ಬುಧವಾರ ನಡೆದಿರುವುದಕ್ಕೆ ಸಾಕ್ಷಿಯಾಯಿತು.

ಕುಂಬಳೆಯ ಸರಕಾರಿ ಪ್ರೌಢಶಾಲೆಯಲ್ಲಿ ಬುಧವಾರ ಕೊನೆಗೊಂಡ ಹತ್ತನೆ ತರಗತಿ ಪರೀಕ್ಷೆಯ ಬಳಿಕ ಮಕ್ಕಳಿಂದ ಇಂತಹದೊಂದು ವಿದಾಯ ಕೂಟ ಕಂಡುಬಂತು.

ಸಹಜವಾಗಿ ಹತ್ತನೆ ತರಗತಿಯ ಅಗಲುವಿಕೆ ಮಕ್ಕಳ ಮನಸ್ಸನ್ನು ತೀವ್ರ ನೋವಿಗೆ ತಳ್ಳುವ ಸಂದರ್ಭ ಕಲಿತ ಶಾಲೆ, ಅಧ್ಯಾಪಕರು, ಸಹಪಾಠಿಗಳನ್ನು ಅಗಲಿರಬೇಕಾದ ಸ್ಥಿತಿಯಿಂದ ಯಾಕಾಗಿ ಪರೀಕ್ಷೆ ಕೊನೆಗೊಂಡಿತೊ ಎಂಬ ಬೇಸರ ಎಲ್ಲರ ಮುಖದಲ್ಲಿರುವುದು ಸಾಮಾನ್ಯ.

 ಆದರೆ ಬುಧವಾರ ಕುಂಬಳೆ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ನಡೆದದ್ದೇ ವ್ಯತಿರಿಕ್ತವಾದುದು. ಬುಧವಾರ ಪರೀಕ್ಷೆ ಕೊನೆಗೊಳ್ಳುವ ಸಮಯದ ಮೊದಲೇ ಉತ್ತರ ಪತ್ರಿಕೆಯನ್ನು ನೀಡಿ ಪರೀಕ್ಷಾ ಕೊಠಡಿಯಿಂದ ಹೊರಬಂದ ವಿದ್ಯಾರ್ಥಿಯೋರ್ವ ಶಾಲಾವರಣದೊಳಗೆ ಭಾರೀ ಸದ್ದಿನಿಂದ ಸಿಡಿಮದ್ದು ಸ್ಫೋಟಿಸಿ ಭೀಕರತೆ ಸೃಷ್ಟಿಸಿದ್ದ. ಶಾಲಾಧಿಕೃತರು ವಿಚಾರಿಸಿದಾಗ ಸಿಡಿಮದ್ದು ಬಳಸಿದ ವಿದ್ಯಾರ್ಥಿಯನ್ನು ಪತ್ತೆಹಚ್ಚಲಾಗಲಿಲ್ಲ.

ಬಳಿಕ ಎಲ್ಲಾ ವಿದ್ಯಾರ್ಥಿಗಳ ಬ್ಯಾಗ್‌ನ್ನು ಪರಿಶೀಲಿಸಲಾಯಿತು. ಹಾಗು ವಿದ್ಯಾರ್ಥಿಗಳ ಮೊಬೈಲ್‌ನ್ನು ಶಾಲಾ ಅಧಿಕೃತರು ವಶಕ್ಕೆ ತೆಗೆದುಕೊಂಡರು. ಈ ವೇಳೆ ವಿದ್ಯಾರ್ಥಿಗಳ ಒಂದು ತಂಡ ಶಿಕ್ಷಕರ ಪರವಾಗಿ ವಾದಿಸಿದಾಗ ಮತ್ತೊಂದು ಗುಂಪು ಸೃಷ್ಟಿಯಾಗಿ ಗುಂಪುಗಳೊಳಗೆ ಮಾರಾಮಾರಿ ಏರ್ಪಟ್ಟಿತು. ಹೊಡೆದಾಟವಲ್ಲದೆ ಬಣ್ಣದ ನೀರನ್ನೂ ಎರಚಿದರು. ಘಟನೆಯನ್ನು ಅರಿತು ಆಗಮಿಸಿದ ಕುಂಬಳೆ ಪೊಲೀಸರು ವಿದ್ಯಾರ್ಥಿಗಳನ್ನು ಚದುರಿಸಿದರು. ಓಡಿದ ವಿದ್ಯಾರ್ಥಿಗಳ ಪೈಕಿ ಕೆಲವರು ಮತ್ತೆ ಸಂಘಟಿತರಾಗಿ ಮರಳಿ ಶಾಲೆಗೆ ತಲುಪಿ ವ್ಯಾಪಕವಾಗಿ ಕಲ್ಲೆಸೆದು ಪರಾರಿಯಾದರು. ಘಟನೆಯಲ್ಲಿ ಶಾಲೆಯ ಹೆಂಚುಗಳು ಹುಡಿಯಾಗಿವೆ. ಪೊಲೀಸರು ಘಟನೆಯ ಕುರಿತು ದೂರು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News