ಮಾಹಿತಿ ನೀಡುವಲ್ಲಿ ವಿಳಂಬ: ಮಾಹಿತಿ ಹಕ್ಕು ಆಯೋಗದಿಂದ ನಿವೃತ್ತ ತಹಶೀಲ್ದಾರರಿಗೆ ದಂಡ
ಬಂಟ್ವಾಳ, ಮಾ. 24: ಕೆ.ಪಿ. ಟ್ರಸ್ಟ್ ಮುಖಂಡ, ಸಾಮಾಜಿಕ ಕಾರ್ಯಕರ್ತ ಕೆ.ಪಿ.ಅಬ್ದುಲ್ಲಾ ಕಲ್ಲಡ್ಕ ಎಂಬವರು ಮಾಹಿತಿ ಹಕ್ಕು ಕಾಯ್ದೆಯಡಿ ಸಲ್ಲಿಸಿದ್ದ ಅರ್ಜಿಗೆ ಕಾಲ ಮಿತಿಯಲ್ಲಿ ಮಾಹಿತಿ ನೀಡದ ಬಂಟ್ವಾಳ ತಾಲೂಕಿನ ಹಿಂದಿನ ತಹಶೀಲ್ದಾರ್ ಮಲ್ಲೇಸ್ವಾಮಿಗೆ ಮಾಹಿತಿ ಹಕ್ಕು ಆಯೋಗ 10 ಸಾವಿರ ರೂ. ದಂಡ ವಿಧಿಸಿ ಆದೇಶ ನೀಡಿದೆ. ಕೆ.ಪಿ.ಅಬ್ದುಲ್ಲಾ 2013ರಲ್ಲಿ ಮಾಹಿತಿ ಕೋರಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗೆ ಸಲ್ಲಿಸಿದ್ದ ಅರ್ಜಿಯನ್ನು ಜಿಲ್ಲಾಧಿಕಾರಿಯವರ ಕಚೇರಿ ಬಂಟ್ವಾಳ ತಹಶೀಲ್ದಾರ್‌ಗೆವರ್ಗಾಯಿಸಿತ್ತು. ಆದರೆ, ತಹಶೀಲ್ದಾರರಿಂದ ನಿಗದಿತ ಕಾಲಮಿತಿಯಲ್ಲಿ ಮಾಹಿತಿ ದೊರಕದ ಹಿನ್ನೆಲೆಯಲ್ಲಿ ಕೆ.ಪಿ.ಅಬ್ದುಲ್ಲಾ ಮಾಹಿತಿ ಆಯೋಗದ ಮೊರೆ ಹೋಗಿದ್ದರು. ವಿಚಾರಣೆಯನ್ನು ಕೈಗೆತ್ತಿಕೊಂಡ ಆಯೋಗ ತಹಶೀಲ್ದಾರರಿಗೆ ನೋಟಿಸ್ ಜಾರಿ ಮಾಡಿ ಉತ್ತರಿಸುವಂತೆ ಸೂಚಿಸಿತ್ತು. ಆದರೆ, ನೋಟಿಸ್‌ಗೆ ಉತ್ತರಿಸಲು ಕೂಡಾ ಅವರು ವಿಫಲರಾಗಿದ್ದರು. ಈ ಹಿನ್ನೆಲೆಯಲ್ಲಿ ಪ್ರಸ್ತುತ ನಿವೃತ್ತರಾಗಿರುವ ತಹಶೀಲ್ದಾರ್ ಮಲ್ಲೇಸ್ವಾಮಿಗೆ ಆಯೋಗ 10 ಸಾವಿರ ರೂ. ದಂಡ ವಿಧಿಸಿ ಆದೇಶ ಹೊರಡಿಸಿದ್ದು, ಫೆಬ್ರವರಿ ಮತ್ತು ಮಾರ್ಚ್ ತಿಂಗಳ ಸಂಬಳದಲ್ಲಿ ಕಡಿತಗೊಳಿಸಿ ಆಯೋಗಕ್ಕೆ ವರದಿ ಸಲ್ಲಿಸುವಂತೆ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹೀಂಗೆ ಸೂಚಿಸಿದೆ. ಮಲ್ಲೇಸ್ವಾಮಿ ಈಗಾಗಲೇ ದಂಡ ಪಾವತಿಸಿದ್ದಾರೆ ಎಂದು ತಿಳಿದು ಬಂದಿದೆ.