ವರ್ತಮಾನದ ‘ನಳಂದಾ’

Update: 2016-03-24 18:12 GMT

ವಿಶ್ವವಿದ್ಯಾನಿಲಯಗಳು ಚಿಂತನೆಗಳು, ಹೊಸ ಆಲೋಚನೆಗಳು ಹುಟ್ಟುವ ಸ್ಥಳವಾಗಿದೆ. ವಿದ್ಯಾರ್ಥಿಗಳು ಶಾಲೆ, ಕಾಲೇಜುಗಳಿಗೆ ಕಾಲಿಟ್ಟ ತಕ್ಷಣ, ಶಿಕ್ಷಕರು ಅವರಿಗೆ ಕಲಿಸುವುದು ಪ್ರಶ್ನಿಸುವುದನ್ನು. ಯಾಕೆಂದರೆ ಪ್ರಶ್ನೆಗಳೇ ಹೊಸ ಆಲೋಚನೆಗಳ ಉದಯಕ್ಕೆ ಕಾರಣವಾಗುತ್ತವೆ. ಜಗತ್ತಿನಲ್ಲಿ ದೊಡ್ಡ ದೊಡ್ಡ ನಾಯಕರು ಸೃಷ್ಟಿಯಾದದ್ದೇ ಇಂತಹ ಪ್ರಶ್ನೆಗಳ ಮೂಲಕ. ಈ ಪ್ರಶ್ನೆಗಳನ್ನು ಹತ್ತಿಕ್ಕುವುದೆಂದರೆ ಪರೋಕ್ಷವಾಗಿ ವಿಶ್ವವಿದ್ಯಾನಿಲಯಗಳ ದಮನ, ಆಲೋಚನೆಗಳ ದಮನವೆಂದೇ ಅರ್ಥ. ಸಾಧಾರಣವಾಗಿ ವಿಶ್ವ ವಿದ್ಯಾನಿಲಯದೊಳಗೆ ಪೊಲೀಸರು ಅಪ್ಪಣೆಯ ವಿನಃ ಪ್ರವೇಶಿಸುವಂತಿಲ್ಲ. ವಿಪರ್ಯಾಸವೆಂದರೆ, ಇತ್ತೀಚಿನ ದಿನಗಳಲ್ಲಿ ವಿಶ್ವವಿದ್ಯಾನಿಲಯದೊಳಗಿರುವ ಪ್ರೊೆಸರ್‌ಗಳೆಲ್ಲ ಜೈಲಿನಲ್ಲಿದ್ದಾರೆ. ಮತ್ತು ಪೊಲೀಸರ ಪಡೆಗಳು ವಿಶ್ವವಿದ್ಯಾ ನಿಲಯಗಳ ಆವರಣದಲ್ಲಿವೆ. ತಮ್ಮ ಲಾಠಿಗಳ ಮೂಲಕ ವಿದ್ಯಾರ್ಥಿಗಳಿಗೆ ಹೊಸ ಪಾಠವನ್ನು ಅವರು ಆರಂಭಿಸಿದ್ದಾರೆ. ಅವರ ಪಾಠದ ಒಟ್ಟು ಸಾರಾಂಶವೇ ‘ಪ್ರಶ್ನೆ ಕೇಳಬೇಡಿ, ಕೇಳಿ ಲಾಠಿ ಏಟು ತಿನ್ನಬೇಡಿ’ ಎಂಬ ಪಾಠ. ಜೆಎನ್‌ಯು ವಿನಲ್ಲಿ ಇತ್ತೀಚೆಗೆ ನಡೆದ ಪೊಲೀಸರ ಅಟ್ಟಹಾಸದ ಮುಂದುವರಿದ ಭಾಗ, ಹೈದರಾಬಾದ್ ವಿಶ್ವವಿದ್ಯಾನಿಲಯದಲ್ಲಿ ಪ್ರದರ್ಶನಗೊಳ್ಳುತ್ತಿದೆ. ಹೈದರಾಬಾದ್‌ನಲ್ಲಿ ಮಂಗಳವಾರ ಮತ್ತು ಬುಧವಾರ ನಡೆದಿರುವುದು ಅಕ್ಷರಶಃ ಪ್ರಶ್ನೆಗಳ ಕಗ್ಗೊಲೆ. ಹೊಸ ಆಲೋಚನೆಗಳ ದಮನ. ಪ್ರೊಫೆಸರ್‌ಗಳು ವಿದ್ಯಾರ್ಥಿಗಳು ತುಂಬಿ ತುಳುಕಬೇಕಾದ ವಿಶ್ವವಿದ್ಯಾನಿಲಯದಲ್ಲಿ ಪೊಲೀಸರು ಕೋವಿ, ಲಾಠಿಗಳ ಜೊತೆಗೆ ಓಡಾಡುತ್ತಿದ್ದಾರೆ. ಆರೆಸ್ಸೆಸ್ ವಿದ್ಯೆಯ ದೇವತೆ ಎಂದು ನಂಬಿರುವ ‘ಸರಸ್ವತಿ’ ಪೊಲೀಸರ ಮೂಲಕ ಸೀರೆ ರವಿಕೆಗಳನ್ನು ಹರಿದುಕೊಂಡು ಹಾಡಹಗಲೇ ಬರ್ಬರ ದೌರ್ಜನ್ಯಕ್ಕೀಡಾಗಿದ್ದಾಳೆ. ಹೊಸ ಚಿಂತನೆಗಳು, ಹೊಸ ಆಲೋಚನೆಗಳು ಕೈ ಕಾಲು ಮುರಿದುಕೊಂಡು ಜೈಲು, ಆಸ್ಪತ್ರೆಗಳನ್ನು ಸೇರಿವೆ. 

ರೋಹಿತ್ ವೇಮುಲಾ ಎನ್ನುವ ಪ್ರತಿಭಾವಂತ ದಲಿತ ಸಂಶೋಧಕನನ್ನು ಮಾನಸಿಕವಾಗಿ ಸರ್ವ ರೀತಿಯಲ್ಲಿ ಹಿಂಸಿಸಿ ಆತ್ಮಹತ್ಯೆಯ ಕಡೆಗೆ ನೂಕುವಲ್ಲಿ ಪ್ರಧಾನ ಪಾತ್ರವಹಿಸಿದ್ದ ಕುಲಪತಿ ಪ್ರೊ. ಅಪ್ಪಾರಾವ್ ಮೇಲೆ ಈಗಾಗಲೇ ಕ್ರಿಮಿನಲ್ ದೂರು ದಾಖಲಾಗಿದೆ. ಕೇಂದ್ರ ಸಚಿವೆ ಸ್ಮತಿ ಇರಾನಿಯ ಒತ್ತಡವೂ ರೋಹಿತ್ ಆತ್ಮಹತ್ಯೆಗೆ ಪರೋಕ್ಷ ಕಾರಣವಾಗಿತ್ತು. ಈವರೆಗೆ ರೋಹಿತ್ ಆತ್ಮಹತ್ಯೆಗೆ ಕಾರಣರಾದವರ ಮೇಲೆ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ. ಇದೀಗ ರಜೆಯ ಮೇಲೆ ತೆರಳಿದ್ದ ಅಪ್ಪಾರಾವ್ ಮತ್ತೆ ವಿಶ್ವವಿದ್ಯಾನಿಲಯ ಪ್ರವೇಶ ಮಾಡಲು ಪ್ರಯತ್ನಿಸಿದಾಗ, ರೋಹಿತ್ ಬೆಂಬಲಿಗ ವಿದ್ಯಾರ್ಥಿಗಳು ಬಂಡೆದ್ದಿದ್ದಾರೆ. ಅಪ್ಪಾರಾವ್ ಮೇಲೆ ಕ್ರಿಮಿನಲ್ ಪ್ರಕರಣವಿರುವುದರಿಂದ ವಿಶ್ವವಿದ್ಯಾನಿಲಯದೊಳಗೆ ಪ್ರವೇಶಿಸಬಾರದು ಎಂದು ಪ್ರತಿಭಟನೆ ನಡೆಸಿದ್ದಾರೆ. ರೋಹಿತ್ ವೇಮುಲಾ ಪ್ರಕರಣ ಮತ್ತು ಆನಂತರದ ಬೆಳಗವಣಿಗೆಗಳನ್ನು ನಿಯಂತ್ರಿಸುವಲ್ಲಿ ಅಪ್ಪಾರಾವ್ ಸಂಪೂರ್ಣ ವಿಲರಾಗಿದ್ದಾರೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಅದರ ಜೊತೆಗೆ ರೋಹಿತ್ ವೇಮುಲಾ ಸಾವಿನ ಕಳಂಕವೂ ಅವರ ಮೇಲಿದೆ. ಅವರು ವಿದ್ಯಾರ್ಥಿಗಳ ವಿಶ್ವಾಸಾರ್ಹತೆಯನ್ನು ಕಳೆದುಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ವಾಪಸಾತಿಯನ್ನು ವಿದ್ಯಾರ್ಥಿಗಳು ಪ್ರತಿಭಟಿಸಿರುವುದು ಸರಿಯಾಗಿಯೇ ಇದೆ. ನೈತಿಕತೆಯನ್ನು ಹೊಂದಿರುವ ಯಾವನೇ ಆದರೂ ಮತ್ತೆ ಆ ವಿಶ್ವವಿದ್ಯಾನಿಲಯಕ್ಕೆ ಕಾಲಿಡುತ್ತಿರಲಿಲ್ಲ. ಆದರೆ ರಾಜಕೀಯ ಶಕ್ತಿಗಳು ಅಪ್ಪಾರಾವ್ ಬೆಂಬಲಕ್ಕೆ ಬಲವಾಗಿ ನಿಂತಿರುವುದರಿಂದಲೇ ಅವರು ಕಳಂಕದ ಜೊತೆಗೇ ಮತ್ತೆ ವಿಶ್ವವಿದ್ಯಾನಿಲಯ ಆವರಣವನ್ನು ಪ್ರವೇಶಿಸಿದ್ದಾರೆ. ಅದೂ ಪೊಲೀಸ್ ಪಡೆಗಳ ಜೊತೆಗೆ. ಯಾವ ಪೊಲೀಸರು ವಿಶ್ವವಿದ್ಯಾನಿಲಯದಂತಹ ಘನತೆಯ ಜಾಗಕ್ಕೆ ಕಾಲಿಡಬಾರದಿತ್ತೋ, ಅದೇ ಪೊಲೀಸರ ಪಡೆಗಳನ್ನು ಕಟ್ಟಿಕೊಂಡು ಅವರು ವಿವಿ ಆವರಣಕ್ಕೆ ಕಾಲಿಟ್ಟಿದ್ದಾರೆ. ಅಷ್ಟೇ ಅಲ್ಲ, ತನ್ನ ವಿರುದ್ಧ ಪ್ರತಿಭಟಿಸಿದಂತಹ ವಿದ್ಯಾರ್ಥಿಗಳ ಮೇಲೆ ಜಲಿಯನ್‌ವಾಲಾಬಾಗ್ ರೀತಿಯಲ್ಲಿ ಪೊಲೀಸರನ್ನು ಬಳಸಿಕೊಂಡು ಸೇಡು ತೀರಿಸಿಕೊಂಡಿದ್ದಾರೆ. ಕುಲಪತಿಯಾಗಿ ಅವರು ವಿಶ್ವವಿದ್ಯಾನಿಲಯದ ಆತ್ಮಕ್ಕೇ ಘಾಸಿ ಮಾಡಿದ್ದಾರೆ. ನಿಜಕ್ಕೂ ವೈಚಾರಿಕ ಲೋಕಕ್ಕೆ ಆದ ಅತೀ ದೊಡ್ಡ ಆಘಾತವಾಗಿದೆ ಇದು.

ಇಂದು ಹೈದರಾಬಾದ್ ವಿಶ್ವವಿದ್ಯಾನಿಲಯ ಸಂಪೂರ್ಣ ಪೊಲೀಸರ ವಶದಲ್ಲಿದೆ. ನಾಲ್ಕು ದಿನಗಳ ಕಾಲ ವಿಶ್ವವಿದ್ಯಾನಿಲಯವನ್ನು ಮುಚ್ಚಲು ನಿರ್ಧರಿಸಲಾಗಿದೆ. ಇದೇ ಸಂದರ್ಭದಲ್ಲಿ 3,000ಕ್ಕೂ ಅಕ ವಿದ್ಯಾರ್ಥಿಗಳು ದಿಗ್ಬಂಧನದ ಸ್ಥಿತಿಯಲ್ಲಿದ್ದಾರೆ. ಅನ್ನಾಹಾರವಿಲ್ಲದೆ ಕಂಗಾಲಾಗಿದ್ದಾರೆ. ಇಂಟರ್ನೆಟ್ ಸಂಪರ್ಕವನ್ನು ಕಡಿತಗೊಳಿಸಲಾಗಿದೆ. ಹೈದರಾಬಾದ್ ವಿಶ್ವವಿದ್ಯಾನಿಲಯ ಹೊರಗಿನ ಸಂಪರ್ಕ ಕಳೆದುಕೊಂಡ ದ್ವೀಪದಂತಾಗಿದೆ. ಘಟನೆಯನ್ನು ಖಂಡಿಸಲು ಜೆಎನ್‌ಯುವಿನಿಂದ ಬಂದಿರುವ ವಿದ್ಯಾರ್ಥಿ ನಾಯಕ ಕನ್ಹಯ್ಯಾ ಮೇಲೂ ದಾಳಿ ನಡೆದಿದೆ. ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡುವ ಅವಕಾಶವನ್ನು ಅವರಿಗೆ ನೀಡಲಾಗಿಲ್ಲ. ದುಷ್ಕರ್ಮಿಗಳ ಮೂಲಕ ಅವರಿಗೆ ಶೂ ಎಸೆದು ಬೆದರಿಸಲಾಗಿದೆ. ತನ್ನದೇ ವಿದ್ಯಾರ್ಥಿಗಳ ಮೇಲೆ ಸರಕಾರವೊಂದು ಈ ಪರಿಯ ದೌರ್ಜನ್ಯ ಎಸಗಿರುವುದು ಇದೇ ಮೊದಲಬಾರಿ ಇರಬೇಕು. ಹೈದರಾಬಾದ್ ವಿಶ್ವವಿದ್ಯಾನಿಲಯದಲ್ಲಿ ಪೊಲೀಸರನ್ನು ಬಳಸಿಕೊಂಡು ಸರಕಾರ ದಾಳಿ ನಡೆಸಿರುವುದು ಈ ದೇಶದ ಪ್ರಜಾಸತ್ತೆಯ ಮೇಲೆ ನಡೆದ ಬರ್ಬರ ದಾಳಿಯಾಗಿದೆ. ಪ್ರತಿಭಟನೆ, ಪ್ರಶ್ನೆಗಳನ್ನು ವಿಶ್ವವಿದ್ಯಾನಿಲಯದೊಳಗಿಂದ ಶಾಶ್ವತವಾಗಿ ದಮನಿಸುವ ಹುನ್ನಾರ ಇದರ ಹಿಂದಿದೆ. ಸಾಮಾಜಿಕ ನ್ಯಾಯಕ್ಕಾಗಿ ಬೀದಿಗಿಳಿಯುವ ತರುಣರ ಎದೆಯಲ್ಲಿ ಭೀತಿಯನ್ನು ಬಿತ್ತಿ, ಅವರ ಬಾಯಿ ಮುಚ್ಚಿಸುವ ಸಂಚು ಇದರ ಹಿಂದಿದೆ. ನಾವು ಇತಿಹಾಸ ಪುಸ್ತಕದಲ್ಲಿ ‘ನಳಂದಾ ವಿಶ್ವವಿದ್ಯಾನಿಲಯ’ದ ಮೇಲೆ ವಿದೇಶಿ ಆಕ್ರಮಣಕಾರರು ದಾಳಿ ನಡೆಸಿರುವುದನ್ನು ಓದಿದ್ದೇವೆ. ಇದೀಗ ಅದನ್ನು ಕಣ್ಣಾರೆ ಕಾಣುತ್ತಿದ್ದೇವೆ. ವಿಶ್ವವಿದ್ಯಾನಿಲಯಗಳ ಮೇಲೆ ಪ್ರಜಾಸತ್ತಾತ್ಮಕವಾಗಿ ಆರಿಸಿ ಬಂದ ಸರಕಾರವೊಂದು ಈ ಪರಿಯ ದಾಳಿಯನ್ನು ನಡೆಸುತ್ತಿರುವುದು, ನಳಂದಾ ದಾಳಿಗಿಂತ ಭಿನ್ನವಾಗಿಯೇನೂ ಇಲ್ಲ. ಅಂದು ಪರಕೀಯರು ನಡೆಸಿದ ದಾಳಿ ಅದಾಗಿದ್ದರೆ, ಇಂದು ನಮ್ಮವರ ಮುಖವಾಡದಲ್ಲಿರುವ ಪರಕೀಯರು ವಿಶ್ವವಿದ್ಯಾನಿಲಯಗಳನ್ನು ಧ್ವಂಸಗೊಳಿಸುವ ಯೋಜನೆಯನ್ನು ಹಾಕಿಕೊಂಡಿದ್ದಾರೆ. ಇದರ ವಿರುದ್ಧ ಇಡೀ ದೇಶ ಒಂದಾಗಿ ಧ್ವನಿಯೆತ್ತದೇ ಇದ್ದರೆ, ಮುಂದಿನ ದಿನಗಳಲ್ಲಿ ನಳಂದಾ ವಿಶ್ವವಿದ್ಯಾನಿಲಯದ ಸಾಲುಗಳಲ್ಲಿ ನಮ್ಮ ವಿಶ್ವವಿದ್ಯಾನಿಲಯಗಳು ಒಂದೊಂದಾಗಿ ಸೇರ್ಪಡೆಗೊಳ್ಳುವ ದುರಂತವನ್ನು ವೀಕ್ಷಿಸಲು ಸಿದ್ಧರಾಗಬೇಕಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News