ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ: ಒತ್ತಡ, ಆತಂಕದಲ್ಲಿ ಪ್ರಾಣ ಕಳೆದುಕೊಂಡವರೆಷ್ಟು?
PC : PTI
ಪಶ್ಚಿಮ ಬಂಗಾಳದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಿಂದ ಉಂಟಾಗಿರುವ ಆತಂಕದಿಂದಾಗಿ ರಾಜ್ಯದಲ್ಲಿ 110ಕ್ಕೂ ಹೆಚ್ಚು ಜನರು ಸಾವಿಗೀಡಾಗಿದ್ದಾರೆ. ಪ್ರತಿದಿನ ಮೂರರಿಂದ ನಾಲ್ಕು ಜನರು ಆತ್ಮಹತ್ಯೆಯಿಂದ ಸಾಯುತ್ತಿದ್ದಾರೆ. ಈ ಸಾವುಗಳಿಗೆ ಚುನಾವಣಾ ಆಯೋಗ ಮತ್ತು ಕೇಂದ್ರ ಸರ್ಕಾರ ಹೊಣೆ ಹೊತ್ತುಕೊಳ್ಳಬೇಕು ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ.
ಇತ್ತೀಚಿನ ತಿಂಗಳುಗಳಲ್ಲಿ ಪಶ್ಚಿಮ ಬಂಗಾಳದಲ್ಲಿ ಹಲವಾರು ಬೂತ್ ಮಟ್ಟದ ಅಧಿಕಾರಿಗಳು (BLO) SIR ಪ್ರಕ್ರಿಯೆಯ ಸಮಯದಲ್ಲಿ ಕೆಲಸದ ಒತ್ತಡದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇನ್ನು ಕೆಲವರು ಅನಾರೋಗ್ಯದಿಂದ ಸಾವನ್ನಪ್ಪಿದ್ದಾರೆ ಎಂದು ಆರೋಪಿಸಲಾಗಿದೆ. ಅಕ್ಟೋಬರ್‌ನಲ್ಲಿ ನಡೆದ ಒಂದು ಪ್ರಕರಣದಲ್ಲಿ, 95 ವರ್ಷದ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ. ಮತದಾರರ ಪಟ್ಟಿಯಿಂದ ಹೊರಗಿಡಲಾಗುತ್ತದೆ ಎಂಬ ಆತಂಕದಿಂದಲೇ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೃತರ ಕುಟುಂಬ ಹೇಳಿತ್ತು.
ನವೆಂಬರ್‌ನಲ್ಲಿ ಮಮತಾ ಬ್ಯಾನರ್ಜಿ ಅವರು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರಿಗೆ ಬರೆದ ಪತ್ರದಲ್ಲಿ, ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆ “ಆತಂಕಕಾರಿ” ಮತ್ತು “ಅಪಾಯಕಾರಿ” ಹಂತವನ್ನು ತಲುಪಿದೆ ಎಂದು ಹೇಳಿದ್ದಾರೆ. ಈಗ ನಡೆಯುತ್ತಿರುವ ವಿಧಾನವು ಸರಿಯಾದ ಯೋಜನೆಯಿಂದ ಕೂಡಿಲ್ಲ. ಅದು ಗೊಂದಲಮಯವಾಗಿದ್ದು ನಾಗರಿಕರು ಮತ್ತು ಅಧಿಕಾರಿಗಳನ್ನು ಅಪಾಯಕ್ಕೆ ಸಿಲುಕಿಸಿದೆ ಎಂದು ಅವರು ಉಲ್ಲೇಖಿಸಿದ್ದರು.
► ಏನಿದು SIR?
ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ಅಥವಾ SIR ಮತದಾರರ ಪಟ್ಟಿಯ ನಿಖರತೆಯನ್ನು ಖಚಿತಪಡಿಸಿಕೊಳ್ಳಲು ಚುನಾವಣಾ ಆಯೋಗ ನಡೆಸುವ ದೊಡ್ಡ ಪ್ರಮಾಣದ ಮನೆಮನೆ ತಪಾಸಣೆಯ ಪ್ರಕ್ರಿಯೆಯಾಗಿದೆ. ಚುನಾವಣಾ ಆಯೋಗದ ಪ್ರಕಾರ, ಈ ಕಾರ್ಯದ ಪ್ರಾಥಮಿಕ ಉದ್ದೇಶ ದೋಷರಹಿತ ಮತದಾರರ ಪಟ್ಟಿಯನ್ನು ತಯಾರಿಸುವುದು. ಅಂದರೆ ಮತದಾರರ ಪಟ್ಟಿಯಲ್ಲಿ ಪ್ರತಿಯೊಬ್ಬ ಅರ್ಹ ನಾಗರಿಕನ ಹೆಸರು ಸರಿಯಾಗಿ ನಮೂದಾಗಿರುವುದನ್ನು ಖಚಿತಪಡಿಸಿಕೊಳ್ಳುವುದು ಮತ್ತು ಯಾವುದೇ ಅನರ್ಹ ಅಥವಾ ನಕಲಿ ಹೆಸರುಗಳು ಇರದಂತೆ ನೋಡಿಕೊಳ್ಳುವುದು.
ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (SIR) ಕಾರ್ಯಕ್ಕಾಗಿ ಬೂತ್ ಮಟ್ಟದ ಅಧಿಕಾರಿಗಳನ್ನು (BLO) ನಿಯೋಜಿಸಲಾಗುತ್ತದೆ. ಇವರಿಗೆ ಕಟ್ಟುನಿಟ್ಟಾದ ಡೆಡ್‌ಲೈನ್ ನೀಡಲಾಗಿದ್ದು, ಅದನ್ನು ಪೂರೈಸಲಾಗದೆ ಭಾರೀ ಒತ್ತಡ ಅನುಭವಿಸುತ್ತಿದ್ದಾರೆ. ಕೆಲಸದ ಒತ್ತಡದಿಂದ BLOಗಳು ಸಾವಿಗೀಡಾಗಿರುವ ಪ್ರಕರಣಗಳು ಆಗಾಗ್ಗೆ ವರದಿಯಾಗುತ್ತಿವೆ.
► BLOಗಳು ಯಾರು?
BLOಗಳು ಸ್ಥಳೀಯ ಸರ್ಕಾರ ಅಥವಾ ಅರೆ ಸರ್ಕಾರಿ ನೌಕರರು. ಅವರು ಆ ಪ್ರದೇಶದ ಮತದಾರರನ್ನು ಚೆನ್ನಾಗಿ ಬಲ್ಲವರು. ಸಾಮಾನ್ಯವಾಗಿ ಅವರು ಅದೇ ಪ್ರದೇಶದಲ್ಲಿ ವಾಸಿಸುತ್ತಾರೆ. ಅವರ ಮುಖ್ಯ ಕರ್ತವ್ಯ ತಮ್ಮ ವ್ಯಾಪ್ತಿಯಲ್ಲಿನ ಮತದಾರರ ಪಟ್ಟಿಯನ್ನು ನವೀಕರಿಸುವುದಾಗಿದೆ.
ಜನತಾ ಪ್ರಾತಿನಿಧ್ಯ ಕಾಯ್ದೆ, 1950ರ ಸೆಕ್ಷನ್ 13ಬಿ(2) ಅಡಿಯಲ್ಲಿ, ಸರ್ಕಾರಿ ಶಾಲೆಗಳು, ಕಚೇರಿಗಳು ಮತ್ತು ಇತರ ಸ್ಥಳೀಯ ಸಂಸ್ಥೆಗಳಲ್ಲಿ ಕೆಲಸ ಮಾಡುವ ಸಿಬ್ಬಂದಿಯನ್ನು BLOಗಳಾಗಿ ನಿಯೋಜಿಸಲಾಗುತ್ತದೆ.
► BLOಗಳ ಜವಾಬ್ದಾರಿ ಏನು?
BLOಗಳು ಭಾರತದ ಚುನಾವಣಾ ಆಯೋಗದ ತಳಮಟ್ಟದ ಪ್ರತಿನಿಧಿಗಳಾಗಿದ್ದಾರೆ. ಅವರ ಜವಾಬ್ದಾರಿಗಳು ಇಂತಿವೆ:
ನಿಖರವಾದ, ದೋಷರಹಿತ ಮತದಾರರ ಪಟ್ಟಿಯನ್ನು ಸಿದ್ಧಪಡಿಸುವುದು
ಮತದಾರರ ವಿವರಗಳನ್ನು ದಾಖಲಿಸುವುದು, ಪರಿಶೀಲಿಸುವುದು ಮತ್ತು ನವೀಕರಿಸುವುದು
ಮತದಾರರ ಹೆಸರು ಸೇರಿಸಲು, ಅಳಿಸಲು ಅಥವಾ ತಿದ್ದುಪಡಿ ಮಾಡಲು ಅಗತ್ಯ ಫಾರ್ಮ್‌ಗಳನ್ನು ಒದಗಿಸುವುದು
ಅರ್ಹ ನಾಗರಿಕರು ಮತದಾರರಾಗಿ ನೋಂದಾಯಿಸಿಕೊಳ್ಳಲು ಮತ್ತು ಮತದಾರರ ಗುರುತಿನ ಚೀಟಿ ಪಡೆಯಲು ಸಹಾಯ ಮಾಡುವುದು
ಭೌತಿಕ ಪರಿಶೀಲನೆ ನಡೆಸಿ ಚುನಾವಣಾ ನೋಂದಣಿ ಅಧಿಕಾರಿ (ERO)ಗೆ ವರದಿಗಳನ್ನು ಸಲ್ಲಿಸುವುದು
ಪ್ರಕ್ರಿಯೆಯ ನಂತರ ತೆಗೆದುಹಾಕಬೇಕಾದ ಮೃತ, ಸ್ಥಳಾಂತರಗೊಂಡ ಅಥವಾ ನಕಲಿ ಮತದಾರರನ್ನು ಗುರುತಿಸಲು BLOಗಳು ಸ್ಥಳೀಯರು ಮತ್ತು ರಾಜಕೀಯ ಪಕ್ಷದ ಪ್ರತಿನಿಧಿಗಳೊಂದಿಗೆ ಸಂವಹನ ನಡೆಸುತ್ತಾರೆ. ಇದರಿಂದ ಅವರ ಕೆಲಸ ಇನ್ನಷ್ಟು ಕಷ್ಟಕರವಾಗುತ್ತದೆ.
► ಹೆಚ್ಚುವರಿ ಸಿಬ್ಬಂದಿ ನಿಯೋಜಿಸಲು ಸುಪ್ರೀಂಕೋರ್ಟ್ ನಿರ್ದೇಶನ
ಮತದಾರರ ಪಟ್ಟಿಯ ಸಮಗ್ರ ಪರಿಷ್ಕರಣೆ ಕಾರ್ಯಕ್ಕೆ ನಿಯೋಜಿಸಲಾದ BLOಗಳ ಕೆಲಸದ ಒತ್ತಡ ಕಡಿಮೆಗೊಳಿಸಲು ಹೆಚ್ಚುವರಿ ಸಿಬ್ಬಂದಿ ನಿಯೋಜಿಸುವ ಬಗ್ಗೆ ಪರಿಗಣಿಸಬೇಕು ಎಂದು ಸುಪ್ರೀಂಕೋರ್ಟ್ ರಾಜ್ಯ ಸರ್ಕಾರಗಳಿಗೆ ನಿರ್ದೇಶಿಸಿದೆ.
ಕಳೆದ ಡಿಸೆಂಬರ್‌ನಲ್ಲಿ ನಿಗದಿತ ಅವಧಿಯಲ್ಲಿ ಮುಗಿಸಬೇಕಾದ SIR ಪ್ರಕ್ರಿಯೆಯಿಂದ BLOಗಳ ಮೇಲೆ ಕೆಲಸದ ಒತ್ತಡ ಹೆಚ್ಚಾಗಿದೆ ಎಂದು ನಟ ವಿಜಯ್ ಅವರ ತಮಿಳಗ ವೆಟ್ರಿ ಕಳಗಂ (TVK) ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ಈ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಮತ್ತು ನ್ಯಾಯಮೂರ್ತಿ ಜಾಯ್‌ಮಾಲ್ಯ ಬಾಗ್ಚಿ ಅವರ ಪೀಠ, BLOಗಳ ಕೆಲಸದ ಒತ್ತಡ ಕಡಿಮೆ ಮಾಡಲು ಹೆಚ್ಚುವರಿ ಸಿಬ್ಬಂದಿ ನಿಯೋಜಿಸುವ ನಿಟ್ಟಿನಲ್ಲಿ ರಾಜ್ಯಗಳು ಕ್ರಮ ಕೈಗೊಳ್ಳಬಹುದು ಎಂದು ಸೂಚಿಸಿತು.
►ಕೆಲಸದ ಒತ್ತಡದಿಂದ BLO ಆತ್ಮಹತ್ಯೆ/ಸಾವು ಪ್ರಕರಣಗಳು
ಪಶ್ಚಿಮ ಬಂಗಾಳದ ಬಂಕುರಾ ಜಿಲ್ಲೆಯಲ್ಲಿ 2025 ಡಿಸೆಂಬರ್ 28ರಂದು BLO ಶವವಾಗಿ ಪತ್ತೆಯಾಗಿದ್ದರು. ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ಸಂಬಂಧಿತ ಕೆಲಸದ ಒತ್ತಡವೇ ಇದಕ್ಕೆ ಕಾರಣ ಎಂದು ಆರೋಪಿಸಲಾಗಿತ್ತು.
2025 ನವೆಂಬರ್ 15ರಂದು ಕೇರಳದ ಕಣ್ಣೂರು ಜಿಲ್ಲೆಯಲ್ಲಿ 41 ವರ್ಷದ ಅನೀಶ್ ಜಾರ್ಜ್ ಎಂಬ BLO ಆತ್ಮಹತ್ಯೆ ಮಾಡಿಕೊಂಡಿದ್ದರು. ಶಾಲಾ ಅಟೆಂಡೆಂಟ್ ಆಗಿದ್ದ ಅವರು SIR ಕೆಲಸದ ಒತ್ತಡದಿಂದ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಹೇಳಲಾಗಿದೆ. ಅವರ ಸಾವಿನ ಹಿನ್ನೆಲೆಯಲ್ಲಿ ನವೆಂಬರ್ 17ರಂದು ಕೇರಳದ BLOಗಳು ಮುಷ್ಕರ ಹೂಡಿದ್ದರು.
ಡಿಸೆಂಬರ್‌ನಲ್ಲಿ ಉತ್ತರ ಪ್ರದೇಶದ ಮೊರಾದಾಬಾದ್‌ನಲ್ಲಿ SIR ಕೆಲಸದ ಒತ್ತಡದಿಂದ BLO ಸರ್ವೇಶ್ ಸಿಂಗ್ (46) ಆತ್ಮಹತ್ಯೆ ಮಾಡಿಕೊಂಡಿದ್ದರು. ಸಹಾಯಕ ಶಿಕ್ಷಕರಾಗಿದ್ದ ಅವರು ಆತ್ಮಹತ್ಯೆಗೂ ಮುನ್ನ ದಾಖಲಿಸಿದ ವೀಡಿಯೊದಲ್ಲಿ ಕಳೆದ 20 ದಿನಗಳಿಂದ ನಿದ್ರೆ ಇಲ್ಲದೆ ಕೆಲಸ ಮಾಡುತ್ತಿದ್ದೇನೆ ಎಂದು ಕಣ್ಣೀರು ಹಾಕಿದ್ದರು.
ಕಳೆದ ವರ್ಷ ನವೆಂಬರ್ ಕೊನೆಯ ವಾರದಲ್ಲಿ ರಾಜಸ್ಥಾನದ ಧೋಲ್ಪುರ್‌ನಲ್ಲಿ 42 ವರ್ಷದ ಅನುಜ್ ಗಾರ್ಗ್ ಎಂಬ BLO ಕುಸಿದು ಬಿದ್ದು ಸಾವನ್ನಪ್ಪಿದ್ದರು. ಉತ್ತರ ಪ್ರದೇಶದ ನೆಹರು ನಗರದಲ್ಲಿ BLO ಆಗಿದ್ದ 58 ವರ್ಷದ ಲಾಲ್ ಮೋಹನ್ ಸಿಂಗ್ ಎಂಬವರು SIR ಕೆಲಸದ ಒತ್ತಡದಿಂದ ಸಾವಿಗೀಡಾಗಿದ್ದರು. ನವೆಂಬರ್ 25ರಂದು ಉತ್ತರ ಪ್ರದೇಶದ ಗೊಂಡಾ ಜಿಲ್ಲೆಯಲ್ಲಿ ಸಹಾಯಕ ಶಿಕ್ಷಕರಾಗಿದ್ದ BLO ವಿಪಿನ್ ಯಾದವ್ ಆತ್ಮಹತ್ಯೆ ಮಾಡಿಕೊಂಡಿದ್ದರು.
ಮಧ್ಯಪ್ರದೇಶದ ರಾಯ್ಸೆನ್ ಮತ್ತು ದಾಮೋಹ್ ಜಿಲ್ಲೆಗಳಲ್ಲಿ SIR ಕಾರ್ಯದಲ್ಲಿ ತೊಡಗಿದ್ದ ಇಬ್ಬರು ಶಿಕ್ಷಕರು ಅನಾರೋಗ್ಯದಿಂದ ಸಾವಿಗೀಡಾಗಿದ್ದರು. 2026 ಜನವರಿ 13ರಂದು ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದಲ್ಲಿ ಸರ್ಕಾರಿ ಶಾಲಾ ಶಿಕ್ಷಕರಾಗಿದ್ದ ಧನಂಜಯ (50) ಎಂಬ BLO ಆತ್ಮಹತ್ಯೆಗೆ ಶರಣಾಗಿದ್ದರು.
► ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಕ್ಕೆ ದೂರು
ಹಲವಾರು ರಾಜ್ಯಗಳಲ್ಲಿ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ ವೇಳೆ BLOಗಳು ಮತ್ತು ಇತರ ಚುನಾವಣಾ ಅಧಿಕಾರಿಗಳ ಮೇಲೆ ಅಮಾನವೀಯ ಕೆಲಸದ ಹೊರೆ ಮತ್ತು ಬಲವಂತದ ಒತ್ತಡ ಹೇರಲಾಗಿದೆ. ಇದರ ಪರಿಣಾಮವಾಗಿ ಹಲವರು ಹೃದಯಾಘಾತದಿಂದ ಅಥವಾ ಕುಸಿದು ಬಿದ್ದು ಸಾವಿಗೀಡಾಗಿದ್ದಾರೆ ಎಂದು 2025 ನವೆಂಬರ್ 25ರಂದು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಕ್ಕೆ ದೂರು ಸಲ್ಲಿಸಲಾಗಿದೆ.
ಮುಂಬೈ ಮೂಲದ ವಕೀಲ ಹಿತೇಂದ್ರ ಡಿ. ಗಾಂಧಿ ಈ ದೂರು ಸಲ್ಲಿಸಿದ್ದರು. ಗುಜರಾತ್, ಮಧ್ಯಪ್ರದೇಶ, ಪಶ್ಚಿಮ ಬಂಗಾಳ, ಕೇರಳ ಮತ್ತು ಇತರ ರಾಜ್ಯಗಳಲ್ಲಿ BLOಗಳ ಸಾವಿನ ಪ್ರಕರಣಗಳು ವರದಿಯಾಗುತ್ತಿವೆ. ಆರು ರಾಜ್ಯಗಳಲ್ಲಿ ಕನಿಷ್ಠ 15 BLOಗಳು 19 ದಿನಗಳಲ್ಲಿ ಸಾವಿಗೀಡಾಗಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
► BLO ಸಂಭಾವನೆ ದ್ವಿಗುಣ
ಚುನಾವಣಾ ಆಯೋಗವು ಬೂತ್ ಮಟ್ಟದ ಅಧಿಕಾರಿಗಳ (BLO) ಸಂಭಾವನೆಯನ್ನು ದ್ವಿಗುಣಗೊಳಿಸಿದೆ. ಜೊತೆಗೆ ಮತದಾರರ ಪಟ್ಟಿಗಳ ತಯಾರಿಕೆ ಮತ್ತು ಪರಿಷ್ಕರಣೆಯಲ್ಲಿ ತೊಡಗಿರುವ BLO ಮೇಲ್ವಿಚಾರಕರ ಸಂಭಾವನೆಯನ್ನೂ ಹೆಚ್ಚಿಸಲಾಗಿದೆ.
2025 ಆಗಸ್ಟ್ 2ರಂದು ಚುನಾವಣಾ ಆಯೋಗ ಪ್ರಕಟಿಸಿದ ಅಧಿಸೂಚನೆಯ ಪ್ರಕಾರ, BLOಗಳ ವಾರ್ಷಿಕ ಸಂಭಾವನೆಯನ್ನು 6,000 ರೂ.ಗಳಿಂದ 12,000 ರೂ.ಗಳಿಗೆ ದ್ವಿಗುಣಗೊಳಿಸಲಾಗಿದೆ. ಹೆಚ್ಚುವರಿಯಾಗಿ, ಮತದಾರರ ಪಟ್ಟಿಗಳ ಪರಿಷ್ಕರಣೆಗೆ ನೀಡುತ್ತಿದ್ದ ಪ್ರೋತ್ಸಾಹಧನವನ್ನು 1,000 ರೂ.ಗಳಿಂದ 2,000 ರೂ.ಗಳಿಗೆ ಹೆಚ್ಚಿಸಲಾಗಿದೆ.
ಮತದಾರರ ಪಟ್ಟಿ ತಯಾರಿಕೆ ಪ್ರಕ್ರಿಯೆಯನ್ನು ಮೇಲ್ವಿಚಾರಣೆ ಮಾಡುವಲ್ಲಿ ನಿರ್ಣಾಯಕ ಪಾತ್ರ ವಹಿಸುವ BLO ಮೇಲ್ವಿಚಾರಕರ ವಾರ್ಷಿಕ ಸಂಭಾವನೆಯನ್ನು 12,000 ರೂ.ಗಳಿಂದ 18,000 ರೂ.ಗಳಿಗೆ ಏರಿಸಲಾಗಿದೆ. ಇದೇ ಮೊದಲ ಬಾರಿಗೆ ಚುನಾವಣಾ ನೋಂದಣಿ ಅಧಿಕಾರಿಗಳು (EROಗಳು) ಮತ್ತು ಸಹಾಯಕ ಚುನಾವಣಾ ನೋಂದಣಿ ಅಧಿಕಾರಿಗಳಿಗೆ (AEROಗಳು) ಗೌರವಧನ ನೀಡಲಾಗಿದೆ. ಅದರಂತೆ, EROಗಳಿಗೆ 30,000 ರೂ. ಮತ್ತು AEROಗಳಿಗೆ 25,000 ರೂ.ಗಳನ್ನು ನೀಡಲಾಗುತ್ತದೆ.