×
Ad

ಕೃಷಿ ಪ್ರವಾಸೋದ್ಯಮ-ಹಳ್ಳಿಯ ಹೊಸ ಸಾಧ್ಯತೆಗಳು!

Update: 2026-01-25 11:18 IST

ಕೃಷಿ ಪ್ರವಾಸೋದ್ಯಮ ಅಂದರೆ ಎಂದಿಗೂ ರೈತನ ಭೂಮಿಯನ್ನು ಮಾರಾಟಕ್ಕಿಡುವ ಪ್ರಯತ್ನವಲ್ಲ. ಅದು ರೈತನ ಬದುಕನ್ನು ಗೌರವದಿಂದ ತೋರಿಸುವ ಪ್ರಯತ್ನವಾಗಬೇಕು. ಅಲ್ಲಿ ರೈತ ಮಾರಾಟಗಾರನಲ್ಲ - ಆತಿಥೇಯನಾಗಬೇಕು. ಹಳ್ಳಿ ಮತ್ತೆ ಹಳ್ಳಿಯಂತೆ ಉಳಿಯಬೇಕಾದರೆ, ಹಳ್ಳಿ ತನ್ನ ಬದುಕನ್ನು ಹಂಚಿಕೊಳ್ಳಬೇಕು. ಅಲ್ಲೇ ಈ ಉದ್ಯಮಕ್ಕೆ ಭವಿಷ್ಯ ಇದೆ.

ಕೃಷಿಯಲ್ಲಿ ಸಾಮಾನ್ಯವಾಗಿ ಎರಡು ಬಗೆಯ ಜನರು ಕಾಣಿಸುತ್ತಾರೆ. ಮೊದಲನೆಯವರು, ತಾನು ಮಾಡುತ್ತಿರುವುದನ್ನು ಇನ್ನೊಬ್ಬರೂ ನೋಡಲಿ, ಕಲಿಯಲಿ, ಅನುಸರಿಸಲಿ ಎಂದು ಹೃದಯ ತೆರೆದವರು. ಇನ್ನೊಬ್ಬರು - ತೋಟದ ಸುತ್ತ ಗೋಡೆ ಕಟ್ಟಿಕೊಂಡು, ಯಾರಿಗೂ ಗೊತ್ತಾಗದಂತೆ ತಮ್ಮ ಕೃಷಿಯನ್ನು ನಿಗೂಢವಾಗಿ ಕಾಯುವವರು. ತಾನು ಮಾಡಿದ ಪ್ರಯೋಗವನ್ನು ಮತ್ತೊಬ್ಬನು ನೋಡಿ ಮಾಡಲಿ ಎಂದು ಬಯಸುವ ಕೃಷಿಕರು ಅಷ್ಟಾಗಿ ಕಾಣಿಸದಿರುವುದು ಕೇವಲ ಸ್ವಾರ್ಥದ ಕಾರಣದಿಂದಲ್ಲ.

‘ತಾನೇನು ಮಹಾ ಸಾಧನೆ ಮಾಡಿದ್ದೇನೆ? ನನ್ನ ಕೃಷಿಯನ್ನು ನೋಡಿ ಇನ್ನೊಬ್ಬರು ಕಲಿಯುವುದು ಏನಿದೆ?’ ಎನ್ನುವ ಮುಗ್ಧತೆಯ ನಡೆ.

ತಾನೂ ಕೂಡ ಇನ್ನೊಬ್ಬರ ಹೊಲ, ತೋಟ ನೋಡಿ ಕಲಿತವನೇ ಆಗಿದ್ದರೂ, ಅದನ್ನು ಮತ್ತೆ ಸಮಾಜಕ್ಕೆ ಹಂಚಿಕೊಳ್ಳುವ ಸಹೃದಯತೆ ಬೆಳೆಸಿಕೊಳ್ಳಲಾಗದ ಅಸಮರ್ಥತೆ ಇನ್ನೊಂದು ಕಡೆ. ಇನ್ನು ಕೆಲವರದ್ದು ಪ್ರದರ್ಶನದ ಕೃಷಿ. ತೋಟದೊಳಗೆ ಕಾಲಿಟ್ಟ ಕ್ಷಣದಿಂದಲೇ ಎಲ್ಲರ ಕಣ್ಣು ತನ್ನ ಮೇಲಿರಬೇಕು, ತಾನು ನೆಟ್ಟಗಿಡ ಬಳ್ಳಿಗಳ ಮೇಲಿರಬೇಕು ಎಂಬ ಆಸೆ. ಜನ ಬರಬೇಕು, ನೋಡಬೇಕು, ಮೆಚ್ಚಬೇಕು, ಬೇರೆ ಎಲ್ಲೂ ಇಲ್ಲದ್ದು ತನ್ನಲ್ಲೇ ಇರಬೇಕು, ಹಸಿರು ಕೇವಲ ಬೆಳೆಯಾಗಿ ಅಲ್ಲ, ಕಲಾಕೃತಿಯಾಗಿಯೂ ಕಾಣಬೇಕು. ತೋಟವೆಂದರೆ ಬರೀ ಹೊಲವಲ್ಲ-ಒಂದು ಮ್ಯೂಸಿಯಂ, ಒಂದು ಪ್ರವಾಸಿ ತಾಣ ಎಂಬ ಕಲಾ ರಸಿಕ ಕೃಷಿಕರವರು.

ಆದರೆ ಇಂಥ ಪ್ರದರ್ಶನಾತ್ಮಕ ಕೃಷಿ ಎಲ್ಲರ ಪಾಲಿಗೆ ಸಾಧ್ಯವಿಲ್ಲ. ಅದರ ಹಿಂದೆ ಹಣ ಹೂಡಲು ಸಿದ್ಧವಾದ ಆರ್ಥಿಕ ಶಕ್ತಿ ಅವರಲ್ಲಿರಬೇಕು. ಅದು ಇಲ್ಲದಿದ್ದರೆ ಹಸಿರು ಕನಸುಗಳು ಮಧ್ಯದಲ್ಲೇ ಒಣಗುತ್ತವೆ.

ಇಂಥ ಯೋಚನೆಯ ನಡುವೆಯೇ ಕೃಷಿಗೆ ಒಂದು ಹೊಸ ದಾರಿ ತೆರೆದಿದೆ. ಅದೇ ಕೃಷಿ ಪ್ರವಾಸೋದ್ಯಮ.

ಇಲ್ಲಿ ಕೃಷಿ ಕೇವಲ ಉತ್ಪಾದನೆಯ ವಿಷಯವಲ್ಲ.

ಅದು ಅನುಭವ. ಹಣ್ಣು ಬೆಳೆಗಳ ವೈವಿಧ್ಯ, ಮೂಲಿಕೆಗಳ ಸುವಾಸನೆ, ಹೊಲ-ಗದ್ದೆ-ತೋಟಗಳ ನಡುವಿನ ಮೌನ -ಇವೆಲ್ಲವನ್ನೂ ನಗರದ ಕಲುಷಿತ ಉಸಿರಿಗೆ ವಿರಾಮ ಕೊಡುವ ವಿಶ್ರಾಂತಿ ತಾಣಗಳಾಗಿ ರೂಪಿಸುವ ಆಲೋಚನೆಯಿದು. ಭೂಮಿಯ ಮಧ್ಯೆ ಹರಿಯುವ ಚಿಕ್ಕ ಹೊಳೆ, ಪಕ್ಕದಲ್ಲಿ ಎರಡು-ಮೂರು ಕುಟೀರಗಳು, ವಿಶಾಲ ಕೆರೆ, ಹಿಂದೆ ಬೆಟ್ಟಗುಡ್ಡಗಳು, ಬೆಳಗ್ಗೆ ಸೂರ್ಯೋದಯ, ಸಂಜೆ ಚಂದ್ರೋದಯ, ರಾತ್ರಿ ಬೆಳದಿಂಗಳು....ಮರ ಕಡಿಯದೆ, ಬಂಡೆ ಒಡೆಯದೆ, ಪ್ರಕೃತಿಯ ರೂಪ ಕೆಡಿಸದೆ ಕಟ್ಟಿದ ವಾಸ್ತವ್ಯ ವ್ಯವಸ್ಥೆ. ಶುದ್ಧ ಸಾವಯವ ಊಟ. ಪಕ್ಷಿಗಳ ಕಲರವ.

ತೋಟದೊಳಗೆ ಓಡಾಡಲು ಹಳೆಯ ಕಾಲದ ಎತ್ತಿನ ಗಾಡಿ, ಅಥವಾ ಸರಳ ಸೈಕಲ್.

ಇವೆಲ್ಲವನ್ನೂ ಒಂದೇ ಕಡೆ ನೆಲೆಗೊಳಿಸಿ, ಉಸಿರುಗಟ್ಟುತ್ತಿರುವ ಪೇಟೆಯ ಬದುಕಿನಲ್ಲಿ ಸಿಲುಕಿರುವ ಜನರನ್ನು ಒಂದು-ಎರಡು ದಿನ ಹಳ್ಳಿಗೆ ಕರೆತಂದು, ಆತಿಥ್ಯಕ್ಕಾಗಿ ಒಂದಷ್ಟು ಶುಲ್ಕ ಪಡೆದು ಆರ್ಥಿಕವಾಗಿ ಬಲಗೊಳ್ಳುವ ಪ್ರಯತ್ನ ಇಂದು ನಿಧಾನವಾಗಿ ಉದ್ಯಮದ ರೂಪ ಪಡೆಯುತ್ತಿದೆ. ಉತ್ತರದಲ್ಲಿ ಇದು ಈಗಾಗಲೇ ಗಟ್ಟಿಯಾಗಿ ಬೇರುಬಿಟ್ಟಿದೆ. ಹೋಂ ಸ್ಟೇ ನಂತರದ ಸ್ವಲ್ಪ ವಿಸ್ತರಿತ ರೂಪವಿದು.

ಹಾಗೆ ನೋಡಿದರೆ ಶೃಂಗೇರಿ, ಕೊಪ್ಪ, ತೀರ್ಥಹಳ್ಳಿ ಈ ಭಾಗದಲ್ಲಿ ಇತ್ತೀಚೆಗೆ ತಲೆಯೆತ್ತಿರುವ ಹೋಂ ಸ್ಟೇಗಳೆಲ್ಲ ತುಂಡು ತುಂಡು ಹಸಿರು ಭೂಭಾಗದಲ್ಲೇ ಇವೆ. ಸಮಸ್ಯೆ ಎಂದರೆ ಒಂದು ಕಾಲಕ್ಕೆ ಸುತ್ತಲೂ ಪೊರೆ ಕಟ್ಟಿದ ಹಸಿರು ಅಡಿಕೆ ತೋಟವೀಗ ತೂತು ಬಿದ್ದಿದೆ. ಕೆಲವರು ಇದೇ ಅಡಿಕೆಯ ಹಣದಿಂದಲೇ ಹೋಂ ಸ್ಟೇಗಳನ್ನು ಕಟ್ಟಿದವರು. ಇನ್ನು ಕೆಲವರು ಅಡಿಕೆ ನಾಶ ಆದಮೇಲೆ ಬದುಕಿಗಾಗಿ ಸಾಲ ಮಾಡಿ ಈ ದಾರಿಯನ್ನು ಹುಡುಕಿಕೊಂಡವರು.

ತಮ್ಮ ಮನೆಯಂಗಳದಲ್ಲಿ ಚಿಗುರಿದ ಇಂಥ ಹೋಂ ಸ್ಟೇಗಳಿಗೆ ನಗರಗಳಿಂದ ಬರುವ ಅತಿಥಿಗಳನ್ನು ಪ್ರಬಲವಾಗಿ ಆಕರ್ಷಿಸುವವರು ಇದೇ ಮಲೆನಾಡಿನ ಹುಡುಗರು. ನಿಮಗೆ ಗೊತ್ತಿರಲಿ, ಇಲ್ಲೆಲ್ಲ ಹೋಂಸ್ಟೇಗಳನ್ನು ನಿರ್ವಹಿಸುವ ಹಿರಿಯರನ್ನುಳಿದು ಕಿರಿಯರೆಲ್ಲ ಈಗಾಗಲೇ ಉದ್ಯೋಗ ನಿಮಿತ್ತ ಬೆಂಗಳೂರಿಗೆ ಸೇರಿ ಆಗಿದೆ ಎಂದು ಮೊನ್ನೆಯೇ ನನ್ನ ಅಂಕಣದಲ್ಲಿ ಹೇಳಿದ್ದೆ. ನೀವು ನಂಬುತ್ತಿರೋ ಇಲ್ಲವೋ, ಮಲೆನಾಡು ಭಾಗದ ಎಷ್ಟೊಂದು ಯುವಕರು ಈಗ ರಾಜಧಾನಿ ಸೇರಿಕೊಂಡಿದ್ದಾರೆ ಎಂದರೆ ಕಳೆದ ಎರಡು ವರ್ಷದಿಂದ ಹಬ್ಬಗಳು ಬಂದು ಎರಡು ಮೂರು ದಿನಗಳ ಜೋಡಿ ರಜೆಗಳು ಲಭ್ಯವಾದಾಗಳೆಲ್ಲ ರಾಜ್ಯ ಸಾರಿಗೆ ಸಂಸ್ಥೆ ಬೆಂಗಳೂರಿನಿಂದ ವಿಶೇಷ ಬಸ್ಸುಗಳನ್ನು ಈ ಭಾಗಕ್ಕೆ ಓಡಿಸುತ್ತಿದೆ!

ಊರು ಖಾಲಿ ಮಾಡಿಕೊಂಡು ಬೆಂಗಳೂರು ಸೇರಿಕೊಂಡ ತಮ್ಮ ಮನೆಯ ಯುವಕರ ಬಗ್ಗೆ ಹಿರಿಯರಿಗೀಗ ಧನ್ಯತೆ ಇದೆ. ಸರ್ವನಾಶ ಹೊಂದುತ್ತಿರುವ ಕೃಷಿಯ ಆವರಣದ ಒಳಗಡೆಯೇ ವಾಸದ ಮನೆಗೆ ಅಂಟಿಕೊಂಡೇ ವಿಸ್ತರಿಸಿಕೊಂಡ ಹೋಂ ಸ್ಟೇಗಳಿಗೆ ಇದೇ ಮನೆಮಕ್ಕಳು ತಮ್ಮ ಸಿಸ್ಟಮ್‌ನಿಂದಲೇ ಪ್ರವಾಸಿಗರನ್ನು ಆಕರ್ಷಿಸುವ ಆನ್‌ಲೈನ್ ವ್ಯವಸ್ಥೆಯನ್ನು ಮಾಡಿಕೊಂಡಿದ್ದಾರೆ. ಊರಲ್ಲಿ ಉಳಿದ ಮನೆಯ ಹಿರಿಯರು ತಿಮರೆ, ಕಣಿಲೆ, ತಂಬುಳಿ, ಚಟ್ನಿ, ಕಡ್ಲೆ ಅವಲಕ್ಕಿ, ಪುಂಡಿ.. ಹೀಗೆಲ್ಲ ರುಚಿ-ರುಚಿಯಾದ ನಾಟಿ ತಿಂಡಿಗಳನ್ನು ಮಾಡಿ ನಗರದ ಪ್ರವಾಸಿಗರಿಗೆ ಬಡಿಸುತ್ತಾರೆ.

ಇನ್ನೊಂದು ಕಡೆ ಖಾಯಂ ವಾಪಸಾತಿಗೆ ನಿರ್ಧರಿಸಿದವರು. ಐಟಿ-ಬಿಟಿ ಉದ್ಯೋಗಗಳಲ್ಲಿ ಬದುಕುತ್ತಿರುವ ಅನೇಕ ಯುವಕರು ಹಳ್ಳಿ, ಮಣ್ಣು, ಕೆಸರು, ಹಸಿರು ಎಂಬ ಪದಗಳಿಗೆ ಒಳಗೊಳಗೇ ಅಲೆಯುತ್ತಿದ್ದಾರೆ. ನಗರದ ಉದ್ಯೋಗ ಅವರಿಗೀಗ ಬಚ್ಚಿದೆ. ಕೈಯಲ್ಲಿ ಸ್ವಲ್ಪ ಹಣ ಇದೆ, ಒಂದು ತುಂಡು ಭೂಮಿ, ಒಂದು ಹಸಿರು ಮನೆ, ಸ್ವಲ್ಪ ಸ್ವಚ್ಛ ಗಾಳಿ, ನೀರು ಅಷ್ಟೇ ಸಾಕು ಎಂದು ಕನಸು ಕಾಣುವವರು ಇವತ್ತು ಕಡಿಮೆಯಿಲ್ಲ. ಹಾಗಂತ ಇವರು ಇದ್ದಕ್ಕಿದ್ದಂತೆ ದೂರದ ಹಳ್ಳಿ ಕಡೆ ರೈಲು-ಬಸ್-ವಿಮಾನ ಹತ್ತುವರಲ್ಲ.

ನಗರದ ಉದ್ಯೋಗ ಬಿಡುವ ಮುನ್ನ, ಹಳ್ಳಿಗೆ ಮರಳುವ ಮುನ್ನ, ಸಾವಿರ ಸಲ ಯೋಚಿಸಿದವರು.

ಕಂಪ್ಯೂಟರ್, ಮೊಬೈಲ್, ವೈಫೈಗೆ ಅಂಟಿಕೊಂಡವರು ಆ ಬದುಕಿನಿಂದ ಒಮ್ಮೆಲೇ ಹೊರಬರುವುದು ಸುಲಭವಲ್ಲ. ಅವರ ಜೊತೆ ನಗರಕ್ಕೆ ಹೊಂದಿಕೊಂಡ ಮಡದಿ, ಪೇಟೆಯೊಳಗೇ ಓದುತ್ತಿರುವ ಮಕ್ಕಳ ಮನಸ್ಸು-ಇವೆಲ್ಲ ಬದಲಿಸುವುದು ಇನ್ನೂ ಕಷ್ಟ. ಒಂದು ದಿನ ಮೊಬೈಲ್‌ಗೆ ರೇಂಜ್ ಸಿಗಲಿಲ್ಲವೆಂದು ಅಜ್ಜನ ಮನೆ ಬಿಟ್ಟು ತಕ್ಷಣ ನಗರಕ್ಕೆ ಬಸ್ಸು ಹತ್ತಿದ ಮಕ್ಕಳನ್ನು ನಾನು ನೋಡಿದ್ದೇನೆ.ಮೊಬೈಲ್ ಸಿಗ್ನಲ್ ಸಿಗಲಿಲ್ಲವೆಂದು ಭೂತದ ಮನೆಯಲ್ಲಿ ಅಸಹನೀಯವಾಗಿ ವರ್ತಿಸಿದವರನ್ನು ಕಂಡಿದ್ದೇನೆ.

ಅದಕ್ಕಾಗಿಯೇ ಐಟಿ-ಬಿಟಿ ಯುವಕರು ಹಳ್ಳಿಗೆ ಹೊರಡುವ ಮುನ್ನ ಗಂಭೀರವಾಗಿ ಯೋಚಿಸುತ್ತಾರೆ.

ಇದೀಗ ‘ವರ್ಕ್ ಫ್ರಮ್ ಹೋಂ’ ಎಂಬ ಮಧ್ಯಮ ದಾರಿಯೊಂದು ಕೊರೋನೋತ್ತರ ಅವಧಿಯಲ್ಲಿ ತೆರೆದಿದೆ. ದೇಹ ಹಳ್ಳಿಯಲ್ಲಿ, ಮನಸ್ಸು ಕಂಪ್ಯೂಟರ್ ಕೊಂಡಿಯ ಮೂಲಕ ನಗರದಲ್ಲಿ. ಸಂಜೆ ಹಳ್ಳಿ ದಾರಿಯಲ್ಲಿ ನಡೆದು ಹೋಗುವಾಗ, ದಪ್ಪ ಕನ್ನಡಕ ಹಾಕಿಕೊಂಡು ಅನ್ಯಮನಸ್ಕರಾಗಿರುವ ಆ ಮುಖಗಳು ಕಿವಿಗೆ ವಯರ್ ಸಿಕ್ಕಿಸಿಕೊಂಡು, ಬರ್ಮುಡಾ ಧರಿಸಿಕೊಂಡು ಅರೆ ಹಳ್ಳಿಗರಾಗಿಯೂ ಮತ್ತೊಂದಿಷ್ಟು ಪೇಟೆಯವರಾಗಿಯೂ ಸುಲಭದಲ್ಲಿ ಗುರುತಿಸುವಂತಿರುತ್ತಾರೆ. ಸಡನ್ನಾಗಿ ಮಳೆ ಬಂದರೆ ಅಡಿಕೆ ರಾಶಿ ಮಾಡಲು ಈ ಮಗ ಬರುವುದಿಲ್ಲ. ಅವನು ಈಗಲೂ ಹಳ್ಳಿಯಲ್ಲಲ್ಲ, ಬೆಂಗಳೂರಲ್ಲೇ ಇದ್ದಾನೆ ಎಂಬುವುದು ಮಗನ ಮೇಲೆ ಕೂಡುಕಟ್ಟೆ ರಂಗಣ್ಣನ ಆರೋಪ.

ಅದಿರಲಿ, ಈಗ ನಮ್ಮ ಹಳ್ಳಿ ಮನೆಗಳು, ತೋಟಗಳು, ಹೊಲ-ಗದ್ದೆಗಳು ಈ ದೇಶದ ಉಸಿರುಗಟ್ಟುತ್ತಿರುವ ಪೇಟೆಯ ಮಂದಿಗೆ ನೆಮ್ಮದಿಯ ಉಸಿರು ಕೊಡಬಹುದೇ? ಪೇಟೆಯ ಜೀವಗಳು ಹಳ್ಳಿಗೆ ಬರುವುದರಿಂದ ಗ್ರಾಮಗಳ ಮನಸ್ಸು ಬದಲಾಗಬಹುದೇ?

ಕೃಷಿ ಪ್ರವಾಸೋದ್ಯಮ ಅಂದರೆ ಎಂದಿಗೂ ರೈತನ ಭೂಮಿಯನ್ನು ಮಾರಾಟಕ್ಕಿಡುವ ಪ್ರಯತ್ನವಲ್ಲ. ಅದು ರೈತನ ಬದುಕನ್ನು ಗೌರವದಿಂದ ತೋರಿಸುವ ಪ್ರಯತ್ನವಾಗಬೇಕು. ಅಲ್ಲಿ ರೈತ ಮಾರಾಟಗಾರನಲ್ಲ-ಆತಿಥೇಯನಾಗಬೇಕು. ಹಳ್ಳಿ ಮತ್ತೆ ಹಳ್ಳಿಯಂತೆ ಉಳಿಯಬೇಕಾದರೆ, ಹಳ್ಳಿ ತನ್ನ ಬದುಕನ್ನು ಹಂಚಿಕೊಳ್ಳಬೇಕು. ಅಲ್ಲೇ ಈ ಉದ್ಯಮಕ್ಕೆ ಭವಿಷ್ಯ ಇದೆ.

ಕೃಷಿ ಪ್ರವಾಸೋದ್ಯಮ ಆರಂಭಿಸಬೇಕೆಂದು ಯೋಚಿಸುವ ರೈತ ಮೊದಲು ಕಟ್ಟಬೇಕಾದದ್ದು ಕೊಠಡಿಯಲ್ಲ, ಗೋಡೆಯಲ್ಲ; ನನ್ನ ತೋಟಕ್ಕೆ ಹೊರಗಿನವರು ಬರಬಹುದೇ? ಎಂಬ ಪ್ರಶ್ನೆಗೆ ಆತ ಹೌದು ಎನ್ನುವ ಕ್ಷಣದಿಂದಲೇ ಈ ಪ್ರಯಾಣ ಶುರುವಾಗುತ್ತದೆ. ಬಹುತೇಕ ರೈತರು ತಮ್ಮ ಹೊಲ-ತೋಟಗಳನ್ನು ಪ್ರೀತಿಯಿಂದ ನೋಡಿಕೊಳ್ಳುತ್ತಾರೆ; ಆದರೆ ಅದೇ ಪ್ರೀತಿಯನ್ನು ಹೊರಗಿನವರಿಗೆ ತೋರಿಸಲು ಹೆದರುತ್ತಾರೆ. ಬೆಳೆ ಹಾನಿಯಾಗಬಹುದು, ಕ್ರಮ ತಪ್ಪಬಹುದು, ಪ್ರಶ್ನೆಗಳು ಕಿರಿಕಿರಿ ಕೊಡಬಹುದು ಎಂಬ ಭಯಗಳು ಸಹಜ.

ಆದರೆ ಕೃಷಿ ಪ್ರವಾಸೋದ್ಯಮದಲ್ಲಿ ಪ್ರವಾಸಿಗರು ಯಾವತ್ತೂ ಪರಿಶೀಲಕರಲ್ಲ, ಅನುಭವ ಹುಡುಕಿಕೊಂಡು ಬಂದ ಅತಿಥಿಗಳು. ಅವರು ಮಣ್ಣಿನ ಪರಿಪೂರ್ಣತೆಯನ್ನು ನೋಡಲು ಬರುವುದಿಲ್ಲ; ಬದುಕಿನ ನಿಜವನ್ನು ನೋಡಲು ಬರುತ್ತಾರೆ. ಹೀಗಾಗಿ ರೈತನು ಮೊದಲು ತನ್ನ ಕೃಷಿ ಪರಿಪೂರ್ಣವೇ ಎನ್ನುವ ಆತಂಕ ಬಿಟ್ಟು, ತನ್ನ ಬದುಕು ನಿಜವಾಗಿದೆಯೇ ಎನ್ನುವುದನ್ನು ತನ್ನೊಳಗೆ ಕೇಳಿಕೊಳ್ಳಬೇಕು.

ಆನಂತರ ಬರುವ ದೊಡ್ಡ ತಪ್ಪು ಯಾವುದೆಂದರೆ ಸೌಕರ್ಯ ಸೌಲಭ್ಯ ಸೇರಿಸುವ ಆತುರ. ಕೃಷಿ ಪ್ರವಾಸೋದ್ಯಮ ಅಂದರೆ ನಗರಕ್ಕೆ ಹಳ್ಳಿಯೊಳಗೆ ಜಾಗ ಕೊಡಿಸುವ ಪ್ರಯತ್ನ ಎಂದು ಹಲವರು ಅರ್ಥ ಮಾಡಿಕೊಂಡಿದ್ದಾರೆ. ಎಸಿ, ಗ್ಲಾಸ್ ಗೋಡೆ, ಸ್ವಿಮ್ಮಿಂಗ್ ಪೂಲ್, ಸೆಲ್ಫಿ ಫೋಟೋ ಸ್ಪಾಟ್‌ಗಳು - ಇವೆಲ್ಲ ಇಲ್ಲದೇ ಕೃಷಿ ಪ್ರವಾಸೋದ್ಯಮ ನಡೆಯುವುದಿಲ್ಲ ಎಂಬ ಭ್ರಮೆ. ಆದರೆ ನಗರದಿಂದ ಬಂದವನು ಹಳ್ಳಿಗೆ ಬರುವುದು ಈ ಎಲ್ಲದರಿಂದ ತಪ್ಪಿಸಿಕೊಳ್ಳಲು ತಾನೆ?

ಅವನಿಗೆ ಬೇಕಾಗಿರುವುದು ತಂಪಾದ ಗಾಳಿ, ಮರದ ನೆರಳು, ಸ್ವಚ್ಛ ನೆಲ ಮತ್ತು ರಾತ್ರಿ ಕಾಣುವ ನಿಜವಾದ ಕತ್ತಲೆ. ಹೀಗಾಗಿ ಸೇರಿಸಬೇಕಾದ ಸೌಲಭ್ಯಗಳಿಗಿಂತ ಮೊದಲು ತೆಗೆದು ಹಾಕಬೇಕಾದ ಅತಿರೇಕಗಳನ್ನು ರೈತ ಗಮನಿಸಬೇಕು. ಅಗತ್ಯವಿಲ್ಲದ ಗೋಡೆಗಳು, ಕಾಂಕ್ರಿಟ್, ಪ್ರದರ್ಶನದ ಅಲಂಕಾರಗಳು - ಇವೆಲ್ಲ ಹಳ್ಳಿಯ ಉಸಿರನ್ನು ಕಟ್ಟುತ್ತವೆ. ಒಂದು ಸರಳ ಕೊಠಡಿ, ಒಂದು ಕಿಟಕಿ, ಸ್ವಚ್ಛ ಶೌಚಾಲಯ, ತೋಟದ ತರಕಾರಿಯಿಂದ ಮಾಡಿದ ಊಟ-ಇಷ್ಟಿದ್ದರೆ ಸಾಕು. ಇದರಿಂದ ಹಳ್ಳಿ ಉಳಿಯುತ್ತದೆ, ರೈತನ ಖರ್ಚೂ ನಿಯಂತ್ರಣದಲ್ಲಿ ಇರುತ್ತದೆ.

ಬಹುಮುಖ್ಯವಾಗಿ ಕೃಷಿ ಪ್ರವಾಸೋದ್ಯಮದ ಯಶಸ್ಸು ಕೊಠಡಿಗಳಲ್ಲಿ ಅಳೆಯುವುದಲ್ಲ; ಅದು ಸಂಬಂಧಗಳಲ್ಲಿ ಅಳೆಯುತ್ತದೆ. ಪ್ರವಾಸಿಗನನ್ನು ಗ್ರಾಹಕನಂತೆ ನೋಡಿದ ಕ್ಷಣದಿಂದಲೇ ಈ ಪ್ರಯತ್ನ ಕುಸಿಯಲು ಶುರುವಾಗುತ್ತದೆ. ಸಮಯಕ್ಕೆ ಊಟ, ಸಮಯಕ್ಕೆ ಕಾರ್ಯಕ್ರಮ, ಸಮಯಕ್ಕೆ ನಡಿಗೆ ಎಂದು ಪಟ್ಟಿ ಮಾಡಿಬಿಟ್ಟರೆ ಅದೂ ಕೂಡ ಮತ್ತೊಂದು ಹಳ್ಳಿ ಹೋಟೆಲ್ ಆಗುತ್ತದೆ. ಹಳ್ಳಿ ಅಂಥದ್ದೂ ಅಲ್ಲವೇ ಅಲ್ಲ. ಹಳ್ಳಿ ನಿಧಾನ.

ಪ್ರವಾಸಿಗನಿಗೆ ಕಾರ್ಯಕ್ರಮಗಳಿಗಿಂತ ಪಾಲ್ಗೊಳ್ಳುವಿಕೆ ಬೇಕು. ಅವನಿಗೆ ಒಂದು ಗಿಡ ನೆಡಲು, ಹಸುವಿಗೆ ಮೇವು ಹಾಕಲು ಅವಕಾಶಕೊಟ್ಟರೆ, ತೋಟದೊಳಗೆ ತಾನಾಗಿಯೇ ಒಂದು ಬೊಂಡ ತೆಗೆದು ಕುಡಿಯಲು, ಹಣ್ಣು ಕೊಯ್ದು ತಿನ್ನಲು, ಹೊಳೆಯಲ್ಲಿ ಈಜಲು, ಗುಡ್ಡ ಏರಲು, ಬೆಟ್ಟ- ಕಾಡು ತಿರುಗಾಡಲು ಕಲ್ಪಿಸಿದರೆ-ಅವನೊಳಗಿನ ನಗರವಿಷ ನಿಧಾನವಾಗಿ ಕರಗುತ್ತದೆ.

ಅದೇ ಪೇಟೆಯ ಆಟಿಕೆಗಳನ್ನು ಹಳ್ಳಿಗೆ ಬಂದ ಮಕ್ಕಳೆದುರು ಹರಡಿದರೆ ಅದು ಯಾವ ಸುಖ? ಮಣ್ಣು, ನೀರು, ಮರ ಇದ್ದರೆ ಸಾಕು. ರಾತ್ರಿ ಅಂಗಳದಲ್ಲಿ ಕೂತು ಮಾತಾಡಲು ಒಂದು ದೀಪ ಇದ್ದರೆ, ಅದೇ ದೊಡ್ಡ ಮನರಂಜನೆ. ಕೊತ್ತಲಿಂಗೆಯ ಬ್ಯಾಟು, ಕುಂಡೆ ಊರಿಕೂತು ಎಳೆಯಲು ಅಡಿಕೆಯ ಹಾಳೆ. ಆಟಕ್ಕೆ ಒಂದಷ್ಟು ಗೋಲಿ, ಸೆಗಣಿ ಸಾರಿಸಿದ ನೆಲ, ಅದರ ಮೇಲೆ ರಂಗೋಲಿ.... ಇವೆಲ್ಲ ಇದ್ದಾಗ ಮಾತ್ರ ಮನಸ್ಸು ಮತ್ತೊಮ್ಮೆ ಬರುವ ಎಂದು ಹಠ ಹಿಡಿಯುತ್ತವೆ.

ಪ್ರವಾಸಿಗನು ಹಳ್ಳಿ ಬಿಡುವಾಗ ಇಲ್ಲಿಗೆ ಮತ್ತೆ ಬರಬೇಕು ಎಂದು ಅಂದುಕೊಂಡರೆ, ಅದೇ ಕೃಷಿ ಪ್ರವಾಸೋದ್ಯಮದ ಲಾಭ. ಅದು ಹಣಕ್ಕಿಂತ ದೊಡ್ಡದು. ಏಕೆಂದರೆ ಕೃಷಿ ಪ್ರವಾಸೋದ್ಯಮ ಒಂದು ವ್ಯಾಪಾರ ಮಾದರಿಯಲ್ಲ; ಅದು ಒಂದು ಮನಸ್ಥಿತಿ. ಇದು ದೊಡ್ಡದಾಗಿ ಬೆಳೆಯಬೇಕಿಲ್ಲ. ಐದು ಕೊಠಡಿಗಳೇ ಸಾಕು. ಐದು ಕುಟುಂಬಗಳೇ ಸಾಕು. ಹಳ್ಳಿ ತನ್ನಂತೆಯೇ ಉಳಿಯಬೇಕು, ರೈತ ತನ್ನ ಗೌರವದೊಂದಿಗೆ ಬದುಕಬೇಕು, ನಗರದಿಂದ ಬಂದವನಿಗೆ ಒಂದು ಉಸಿರು ಸಿಗಬೇಕು. ಈ ಮೂರೂ ಒಂದೇ ಜಾಗದಲ್ಲಿ ಸಿಕ್ಕರೆ, ಅಲ್ಲಿ ಕೃಷಿ ಪ್ರವಾಸೋದ್ಯಮ ಯಶಸ್ವಿಯಾಗುತ್ತದೆ. ಉಳಿದದ್ದೆಲ್ಲ ಪ್ರದರ್ಶನ ಮಾತ್ರ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ನರೇಂದ್ರ ರೈ ದೇರ್ಲ

contributor

Similar News