×
Ad

ಮಂಗಳೂರು : ಪಿಲಿಕುಳದಲ್ಲಿ ಕರಕುಶಲಕರ್ಮಿಗಳ ಕೈಚಳಕದ ವಿವಿಧ ಝಳಕ್

Update: 2016-03-25 16:45 IST

ಮಂಗಳೂರು, ಮಾ. 25: ಟಿಶ್ಯೂ ಮಾದರಿಯ ಅತಿ ತೆಳುವಿನ ಬಟ್ಟೆಯಲ್ಲಿ ಚಿನ್ನದ ದಾರದಿಂದ ಮಾಡಿದ ಅತಿ ನಾಜೂಕಿನ ಕಸೂತಿ ಕಾರ್ಯ. ನಾಲ್ಕು ಮಂದಿ ಕರಕುಶಲ ಕರ್ಮಿಗಳಿಂದ ಸುಮಾರು ಒಂದೂವರೆ ವರ್ಷದ ಕಠಿಣ ಪರಿಶ್ರಮದೊಂದಿಗೆ ತಯಾರಾದ ಅತ್ಯಂತ ಆಕರ್ಷಕ ಒಂದು ಸೆಟ್ (ಮೂರು ಪೀಸ್‌ಗಳು) ಟೇಬಲ್ ಮ್ಯಾಟ್. ಅಂದಾಜು ಬೆಲೆ 2.40 ಲಕ್ಷ ರೂ.ಗಳು!

ಇದು ನಗರದ ಪಿಲಿಕುಳದ ಡಾ. ಶಿವರಾಮ ಕಾರಂತ ನಿಸರ್ಗಧಾಮದ ಅರ್ಬನ್ ಹಾತ್‌ನಲ್ಲಿ ಇಂದಿನಿಂದ ಆರಂಭಗೊಂಡಿರುವ ರಾಷ್ಟ್ರೀಯ ಕ್ರಾಫ್ಟ್ ಬಜಾರ್‌ನಲ್ಲಿ ಕಂಡು ಬಂದ ಪ್ರದರ್ಶನದ ಒಂದು ಝಲಕ್.

ಉತ್ತರ ಪ್ರದೇಶದ ಬರೇಲಿಯ ಕರಕುಶಲಕರ್ಮಿ ಮುಹಮ್ಮದ್ ತಹ್‌ಸೀನ್ ಕಮರ್ ಅವರು ಈ ನೈಜ ಚಿನ್ನದ ದಾರದ ಕಸೂತಿಯ ಬಗ್ಗೆ ವಿವರ ನೀಡುತ್ತಾ, ‘ರಾಜ್ಯ ಮಟ್ಟದ ಈ ಟೇಬಲ್ ಮ್ಯಾಟ್ ಆಯ್ಕೆಯಾಗಿದೆ’ ಎಂದು ಹೇಳುತ್ತಾರೆ.

ಬಾಸುಮತಿ ಅಕ್ಕಿ ಕಾಳಿನಲ್ಲಿ ಪ್ರಧಾನಿ ನರೇಂದ್ರ ಮೋದಿ, ಅಬ್ದುಲ್ ಕಲಾಂ!

ಬಾಸುಮತಿ ಅಕ್ಕಿಯಲ್ಲಿ ಸುಭಾಶ್ ಚಂದ್ರ ಬೋಸ್, ಛತ್ರಪತಿ ಶಿವಾಜಿ, ಮಹಾತ್ಮಗಾಂಧಿ, ಪ್ರಧಾನಿ ನರೇಂದ್ರ ಮೋದಿ, ಬಾಲಗಂಗಾಧರ ತಿಲಕ್‌ರವರ ಚಿತ್ರಗಳು ತಿರುಪತಿಯ ಪಲ್ಲಿ ಚಿರಂಜೀವಿ ಅವರ ವಿಶೇಷತೆ.

ಅಕ್ಕಿ ಕಾಳಿನಲ್ಲಿ ಸುಮಾರು ಐದು ಗಂಟೆಗಳ ಕಾಲ ಪರಿಶ್ರಮದೊಂದಿಗೆ ಮಹಾನ್ ವ್ಯಕ್ತಿಗಳ ಚಿತ್ರಗಳನ್ನು ಬಿಡಿಸುವ ಚಿರಂಜೀವಿ, ಸ್ಥಳದಲ್ಲೇ ಅಕ್ಕಿ ಕಾಳಿನಲ್ಲಿ ಹೆಸರನ್ನೂ ಬರೆದು ಕೊಡುತ್ತಾರೆ. ಅಕ್ಕಿಕಾಳಿನಲ್ಲಿ ಬರೆದ ಮಹಾನ್ ವ್ಯಕ್ತಿಗಳ ಕಲಾಕೃತಿಗಳನ್ನು ಕಿರಿದಾದ ಗಾಜಿನ ಪೆಟ್ಟಿಗೆಯಲ್ಲಿ ಭದ್ರಗೊಳಿಸಿ ಪೆಟ್ಟಿಗೆಯ ಮೇಲಿನಿಂದ ಭೂತಕನ್ನಡಿಯನ್ನು ಅಳವಡಿಸಿ ನೋಡುಗರು ಅಕ್ಕಿಕಾಳಿನಲ್ಲಿರುವ ಚಿತ್ರಗಳನ್ನು ದೊಡ್ಡದಾದ ಆಕೃತಿಯಲ್ಲಿ ನೋಡುವ ವ್ಯವಸ್ಥೆಯನ್ನು ಮಾಡಿದ್ದಾರೆ. ಗ್ರಾಹಕರಿಗೆ ಇದು ಒಂದು ಸಾವಿರ ರೂ. ವೌಲ್ಯದಲ್ಲಿ ಮಾರಾಟ ಮಾಡುತ್ತೇನೆ. ಉಳಿದಂತೆ ಅಕ್ಕಿಕಾಳಿನಲ್ಲಿ ಹೆಸರು ಬರೆಸಲು ಕೇವಲ 50 ರೂ. ಎನ್ನುತ್ತಾರೆ ಚಿರಂಜೀವಿ.

ಗಾಜಿನ ಫೋಟೋ ಫ್ರೇಮ್‌ನೊಳಗೆ ತಿರುಪತಿ ತಿಮ್ಮಪ್ಪ- ಮಂತ್ರಘೋಷ!

ತಿರುಪತಿಯ ಸತೀಶ್‌ರವರ ಪ್ರದರ್ಶನ ಮಳಿಗೆಯಲ್ಲಿ ತಿರುಪತಿ ತಿಮ್ಮಪ್ಪನ ದರ್ಶನವನ್ನು ಪಡೆಯಬಹುದು. ಗಾಜಿನೊಳಗೆ ತಿರುಪತಿ ತಿಮ್ಮಪ್ಪನ ಮೂರ್ತಿಗೆ ಲೈಟಿಂಗ್‌ನ ಆಕರ್ಷಣೆಯ ಜತೆಗೆ ಅಮೆರಿಕನ್ ಡೈಮಂಡ್‌ನ ಕಲಾತ್ಮಕ ಶೃಂಗಾರ. ಜತೆಗೆ ಮಂತ್ರಘೋಷದ ರೆಕಾರ್ಡಿಂಗ್.

ಸಂಪೂರ್ಣವಾಗಿ ಕೈಯಲ್ಲೇ ತಯಾರಾಗುವ ಈ ತಿರುಪತಿ ತಿಮ್ಮಪ್ಪನನ್ನು ಅಮೆರಿಕನ್ ಡೈಮಂಡ್‌ನಲ್ಲಿ ಅಲಂಕಾರ ಮಾಡಿ, ಲೈಟಿಂಗ್ ವ್ಯವಸ್ಥೆ ಜತೆ ಚಾಂಟಿಂಗ್ ರೆಕಾರ್ಡಿಂಗ್ ಅಳವಡಿಸಲಾಗಿದೆ. 2000 ರೂ.ಗಳಿಂದ 20,000 ರೂ. ಬೆಲೆ ಬಾಳುವ ತಿಮ್ಮಪ್ಪನ ವಿವಿಧ ರೀತಿಯ ಮೂರ್ತಿಗಳು, ಕಲಾಕೃತಿಗಳು ಲಭ್ಯವಿದೆ ಎನ್ನುತ್ತಾರೆ ಸತೀಶ್.

ಲೋಹದಲ್ಲಿ ಭೂತಕೋಲದ ಶಿಲ್ಪ ವೈವಿಧ್ಯ

ಉಡುಪಿಯ ಕೌಶಲ ಕರಕುಶಲ ಸಂಸ್ಥೆಯ ಲೋಹದ ಶಿಲ್ಪಗಳು ಗಮನ ಸೆಳೆಯುತ್ತಿವೆ. ನಾನಾ ರೀತಿಯ ಲೋಹದ ಶಿಲ್ಪಗಳಲ್ಲಿ ತುಳುನಾಡಿನ ಭೂತಕೋಲದಲ್ಲಿ ಉಪಯೋಗಿಸುವ ಆಲಂಕಾರಿಕ ವಸ್ತುಗಳು ಆಕರ್ಷಣೀಯವಾಗಿವೆ. ತಮ್ಮ ಬೃಹದಾಕಾರದ ಭೂತಕೋಲದ ಸೆಟ್ ಒಂದು ಸ್ವಿಝರ್‌ಲ್ಯಾಂಡ್‌ನ ರಿಟ್‌ಬರ್ಗ್ ಮ್ಯೂಸಿಂನಲ್ಲಿ ಹಾಗೂ ಮದ್ರಾಸ್‌ನ ಮ್ಯೂಸಿಯಂನಲ್ಲೂ ಪ್ರದರ್ಶನದಲ್ಲಿದೆ ಎಂದು ಸಂಸ್ಥೆಯ ಮುಖ್ಯಸ್ಥರು ಹೇಳುತ್ತಾರೆ.

ಗೆರಟೆಯ ಕಿವಿಯೋಲೆ, ಕ್ಲಿಪ್, ಬಳೆಗಳು!

ಪಾಂಡಿಚೇರಿಯ ಕಲೈ ತಮಿಝನ್ ಕೋಕನಟ್ ಕ್ರಾಫ್ಟ್ ಸಂಸ್ಥೆಯ ಮಳಿಗೆಯಲ್ಲಿ ತೆಂಗಿನಕಾಯಿ ಗೆರಟೆಯ ಕಿವಿಯೋಲೆಗಳು, ಬಳೆಗಳು, ಕ್ಲಿಪ್‌ಗಳು, ಧಾನ್ಯಗಳಿಂದ ತಯಾರಿಸಿದ ನಾನಾ ರೀತಿಯ ಕ್ಲಿಪ್‌ಗಳು ಸೇರಿದಂತೆ ಮಹಿಳೆಯರ ಆಲಂಕಾರಿಕ ವಸ್ತುಗಳೂ ಇಲ್ಲಿವೆ.

ರೇಷ್ಮೆಯಲ್ಲಿ ಅರಳಿದ ಹೂವುಗಳು!

ತಮಿಳುನಾಡಿನ ರಾಜ್ಯ ಪ್ರಶಸ್ತಿ ವಿಜೇತರೂ ಆಗಿರುವ ಎ. ಚಿದಂಬರಂ ಅವರ ಮಳಿಗೆಯಲ್ಲಿ ರೇಷ್ಮೆಯ ಎಳೆಗಳಿಂದ ತಯಾರಿಸಿದ ಆಕರ್ಷಕ ಬಣ್ಣ ಬಣ್ಣದ ಹೂವುಗಳನ್ನು ನೋಡಬಹುದು.

ಎಪ್ರಿಲ್ 3ರವರೆಗೆ ನಡೆಯಲಿರುವ ಈ ಪ್ರದರ್ಶನ ಮತ್ತು ಮಾರಾಟದ ರಾಷ್ಟ್ರೀಯ ಕ್ರಾಫ್ಟ್ ಬಜಾರ್‌ನಲ್ಲಿ ಪಾಂಡಿಚೇರಿ, ಕೊಲ್ಕತ್ತಾ, ಸೇರಿದಂತೆ 40ಕ್ಕೂ ಅಧಿಕ ಮಳಿಗೆಗಳಲ್ಲಿ 60ಕ್ಕೂ ಅಧಿಕ ಕರಕುಶಲ ಕರ್ಮಿಗಳು ತಮ್ಮ ಕಲಾವೈಭವವನ್ನು ತೆರೆದಿಟ್ಟಿದ್ದಾರೆ. ಸೆಣಬಿನ ಸೀರೆಗಳು, ಬ್ಯಾಗ್‌ಗಳು, ಮರದ ಆಲಂಕಾರಿಕ ವಸ್ತುಗಳ ಜತೆಗೆ ಕನ್ನಡಿ, ಲ್ಯಾಂಪ್, ಗಂಟೆ, ಅಡುಗೆ ಸಾಮಾಗ್ರಿಗಳು, ಶೇ. 100ರಷ್ಟು ಹತ್ತಿ ಬಟ್ಟೆಯಿಂದ ತಯಾರಿಸಿದ ಶಾಲು, ಬೈರಾಸು ಸೇರಿದಂತೆ ವಿವಿಧ ರಾಜ್ಯಗಳ ಕರಕುಶಲ ವಿಶೇಷತೆಗಳನ್ನು ಕ್ಟಾಫ್ಟ್ ಬಜಾರ್‌ನಲ್ಲಿ ಕಾಣಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News