ಸುಳ್ಯ: ವಿಷಯಾಧರಿತ ಶಿಕ್ಷಣ ಮತ್ತು ಜಾಗೃತಿ ಕಾರ್ಯಕ್ರಮ
ಸುಳ್ಯ: ವಿಷಯಾಧಾರಿತ ಶಿಕ್ಷಣ ಮತ್ತು ಜಾಗೃತಿ ಕಾರ್ಯಕ್ರಮ, ವಿಶ್ವ ಮಹಿಳಾ ದಿನಾಚರಣೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಸುಳ್ಯದ ಮಹಿಳಾ ಮಂಡಲಗಳ ಒಕ್ಕೂಟದ ಸಭಾಂಗಣದಲ್ಲಿ ನಡೆಯಿತು.
ನೆಹರೂ ಯುವ ಕೇಂದ್ರ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಜಿಲ್ಲಾ ಮತ್ತು ತಾಲೂಕು ಮಹಿಳಾ ಮಂಡಲಗಳ ಒಕ್ಕೂಟ, ಜಟ್ಟಿಪಳ್ಳದ ಕಪಿಲಾ ಯುವಕ ಮಂಡಲ, ಕೆವಿಜಿ ಪಾಲಿಟೆಕ್ನಿಕ್‌ನ ಎನ್‌ಎಸ್‌ಎಸ್ ಘಟಕ ಹಾಗೂ ಸುಳ್ಯದ ತುಡರ್ ತುಳು ಕೂಟಗಳ ಆಶ್ರಯದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಉದ್ಯಾನವನ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಸಾಯಿಗೀತಾ ಜ್ಞಾನೇಶ್ ಕಾರ್ಯಕ್ರಮ ಉದ್ಘಾಟಿಸಿದರು. ಸಮಾನತೆ ಎಂಬುದು ಕೇವಲ ಭಾವನೆ ಅಷ್ಟೆ. ಹಲವು ವಿಷಯಗಳಲ್ಲಿ ಮಹಿಳೆಯರು ಪುರುಷರಿಗಿಂತ ಮುಂದಿದ್ದಾರೆ. ಕೆಲವು ವಿಷಯಗಳಲ್ಲಿ ಮಹಿಳೆಯರಿಗೆ ನಿಬರ್ಂಂಧಗಳು ಬೇಕು. ಇಲ್ಲದಿದ್ದರೆ ಸಮಾಜದಲ್ಲಿ ತೊಂದರೆಗೆ ಒಳಗಾಗುತ್ತಾಳೆ. ನಮ್ಮ ಕರ್ತವ್ಯವನ್ನು ಉತ್ತಮ ರೀತಿಯಿಂದ ನಿಸ್ವಾರ್ಥತೆಯಿಂದ ಮಾಡಿದರೆ ಅದು ದೇಶ ಸೇವೆ. ಸಮಾಜ ಗುರುತಿಸುತ್ತದೆ. ಗೌರವ ಸಿಗದೇ ಹೋದರೂ ಆತ್ಮ ತೃಪ್ತಿ ಇರುತ್ತದೆ ಎಂದವರು ಹೇಳಿದರು.
ಅತಿಥಿಯಾಗಿದ್ದ ಜಿಲ್ಲಾ ಮಹಿಳಾ ಮಂಡಲಗಳ ಒಕ್ಕೂಟದ ಅಧ್ಯಕ್ಷೆ ಸವಿತಾ ಜಯದೇವ್ ಮಾತನಾಡಿ, ಮಹಿಳೆಯರು ಸಾಮಾಜಿಕವಾಗಿ ಸುರಕ್ಷಿತವಾಗಿದ್ದಾರೆಯೇ ಎಂದು ನಮ್ಮನ್ನು ನಾವೇ ಪ್ರಶ್ನಿಸಬೇಕಿದೆ. ಸಾಮಾಜಿಕ ಜಾಲತಾಣಗಳ ಬಗ್ಗೆ ಸಾಕಷ್ಟು ಎಚ್ಚರಿಕೆ ಇರಬೇಕು. ಕಾಲ ಬದಲಾಗಿದೆ ಎನ್ನುತ್ತಾರೆ, ಆದರೆ ಕಾಲ ಬದಲಾಗಿಲ್ಲ ದೃಷ್ಠಿಕೋನ ಬದಲಾಗಿದೆ ಎಂದರು.
ತುಳು ಸಾಹಿತ್ಯ ಅಕಾಡೆಮಿ ಸದಸ್ಯ ಕೆ.ಟಿ.ವಿಶ್ವನಾಥ್, ಕೆವಿಜಿ ಪಾಲಿಟೆಕ್ನಿಕ್‌ನ ಎನ್‌ಎಸ್‌ಎಸ್ ಕಾರ್ಯಕ್ರಮಾಧಿಕಾರಿ ಚಂದ್ರಶೇಖರ ಬಿಳಿನೆಲೆ ಮಾತನಾಡಿದರು.
ಪ್ರಶಸ್ತಿ ವಿಜೇತ ಜಾನಪದ ಕಲಾವಿದೆ ಕೊರೊಪೊಳು ಜಯನಗರ ಅವರನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು. ಮಹಿಳೆಯರಿಗೆ ಸ್ಥಳದಲ್ಲಿಯೇ ವಿವಿಧ ಸ್ಪರ್ಧೆಗಳನ್ನು ಆಯೋಜಿಸಿ ಬಹುಮಾನ ನೀಡಲಾಯಿತು. ನಾಯಕತ್ವ ಕುರಿತು ಬಿ.ಎಸ್.ಶರೀಫ್ ಮತ್ತು ಸಂವಹನ ಕಲೆ ಕುರಿತು ಡಾ.ಅನುರಾಧಾ ಕುರುಂಜಿ ಮಾತನಾಡಿದರು. ಸುಳ್ಯ ನಗರ ಪಂಚಾಯತ್ ಅಧ್ಯಕ್ಷ ಪ್ರಕಾಶ್ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಮಹಿಳಾ ಮಂಡಲಗಳ ಒಕ್ಕೂಟದ ಅಧ್ಯಕ್ಷೆ ಪ್ರಫುಲ್ಲ ಪಿ.ರೈ, ಗೌರವಾಧ್ಯಕ್ಷೆ ಹರಿಣಿ ಸದಾಶಿವ, ಕಪಿಲ ಯುವಕ ಮಂಡಲದ ಅಧ್ಯಕ್ಷ ಜೀವನ್ ಕೋಲ್ಚಾರ್, ಸುಳ್ಯ ತುಡರ್ ತುಳು ಕೂಟದ ಅಧ್ಯಕ್ಷ ಜೆ.ಕೆ.ರೈ ವೇದಿಕೆಯಲ್ಲಿದ್ದರು. ಲಲಿತಾ ಸ್ವಾಗತಿಸಿ, ಚಂದ್ರಾಕ್ಷಿ ಜೆ.ರೈ ವಂದಿಸಿದರು. ಚಿತ್ರಲೇಖಾ ಮಡಪ್ಪಾಡಿ ಕಾರ್ಯಕ್ರಮ ನಿರೂಪಿಸಿದರು.