ಮಹಾ ಸಿ. ಎಂ. ಕಾರ್ಯಕ್ರಮದಲ್ಲಿ ಸುಖದೇವ್ ಆದ ಭಗತ್ ಸಿಂಗ್ !
Update: 2016-03-25 18:21 IST
ಮುಂಬೈ , ಮಾ. ೨೫ : ಹುತಾತ್ಮ ದಿನಾಚರಣೆಯಂದು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫ಼ಡ್ನವಿಸ್ ಅವರು ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಹುತಾತ್ಮ ಭಗತ್ ಸಿಂಗ್ ಹಾಗು ಸುಖದೇವ್ ಅವರ ಭಾವಚಿತ್ರಗಳಲ್ಲಿ ಹೆಸರುಗಳು ಅದಲು ಬದಲಾಗುವ ಮೂಲಕ ವಿವಾದ ಸೃಷ್ಟಿಯಾಗಿದೆ. ಹುತಾತ್ಮರನ್ನು ಗೌರವಿಸುವ ವಿಷಯದಲ್ಲಿ ಸರಕಾರದ " ನಿರ್ಲಕ್ಷ್ಯ " ಧೋರಣೆಯನ್ನು ಖಂಡಿಸಿ ವಿಪಕ್ಷಗಳು ಪ್ರತಿಭಟನೆಗಿಳಿದಿವೆ.
ಹುತಾತ್ಮರ ದಿನ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಫ಼ಡ್ನವಿಸ್ ಭಾಗವಹಿಸಿ ಭಗತ್ ಸಿಂಗ್ , ಸುಖದೇವ್ ಹಾಗು ರಾಜ್ ಗುರು ಅವರ ಭಾವಚಿತ್ರಗಳಿಗೆ ಗೌರವ ಸಲ್ಲಿಸಿದರು. ಆದರೆ ಅಲ್ಲೊಂದು ದೊಡ್ಡ ಎಡವಟ್ಟು ಆಗಿತ್ತು. ಸುಖದೇವ್ ಎಂದು ಬರೆದ ಭಾವಚಿತ್ರ ನಿಜವಾಗಿ ಭಗತ್ ಸಿಂಗ್ ಅವರ ಚಿತ್ರವಾಗಿತ್ತು.
ಈ ಸರಕಾರಕ್ಕೆ ಹುತಾತ್ಮರು ಹಾಗು ಸ್ವಾತಂತ್ರ್ಯ ಹೋರಾಟದ ಬಗ್ಗೆ ಯಾವುದೇ ಗೌರವ ಇಲ್ಲ. ಇನ್ನು ಮುಂದೆಯೂ ಇಂತಹ ನಿರ್ಲಕ್ಷ್ಯ ಮುಂದುವರಿಯಬಹುದು ಎಂದು ಎನ್ ಸಿ ಪಿ ವಕ್ತಾರ ನವಾಬ್ ಮಲಿಕ್ ಟೀಕಿಸಿದ್ದಾರೆ.