×
Ad

ಹವಾಮಾನ ಪರಿವರ್ತನೆ ಪರಿಹಾರದ ಹೊರೆ ಬಡವರ ಮೇಲೆ ಬೇಡ: ಭಾರತ

Update: 2016-03-25 19:43 IST

ವಿಶ್ವಸಂಸ್ಥೆ, ಮಾ. 25: ಹವಾಮಾನ ಬದಲಾವಣೆಗೆ ಬಡ ರಾಷ್ಟ್ರಗಳು ಕನಿಷ್ಠ ದೇಣಿಗೆ ನೀಡುವುದಾದರೂ, ಅದರ ಅತ್ಯಂತ ಕೆಟ್ಟ ಪರಿಣಾಮಗಳನ್ನು ಈ ದೇಶಗಳು ಅನುಭವಿಸುತ್ತಿವೆ ಎಂದು ಭಾರತ ವಿಶ್ವಸಂಸ್ಥೆಯಲ್ಲಿ ಹೇಳಿದೆ.

ಹವಾಮಾನ ಬದಲಾವಣೆಯ ಗತಿಯನ್ನು ಕಡಿಮೆಗೊಳಿಸುವ ಕ್ರಮಗಳ ಹೊರೆಯನ್ನು ಬಡದೇಶಗಳ ಮೇಲೆ ಹೊರಿಸಬಾರದು ಎಂದು ವಿಶ್ವಸಂಸ್ಥೆಗೆ ಭಾರತದ ಖಾಯಂ ನಿಯೋಗದ ಸಲಹಾಕಾರ ಅಮಿತ್ ನಾರಂಗ್ ಹೇಳಿದರು.

ಅವರು ಮಂಗಳವಾರ ಇಲ್ಲಿ ನಡೆದ ರಾಷ್ಟ್ರೀಯ ಮಾದರಿ ವಿಶ್ವಸಂಸ್ಥೆ ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.

ಮುಖ್ಯವಾಗಿ ಶ್ರೀಮಂತ ದೇಶಗಳ ಅನಿರ್ಬಂಧಿತ ಇಂಧನ ಬಳಕೆ ಮತ್ತು ಜೀವನ ಶೈಲಿಗಳಿಗೆ ಕಡಿವಾಣ ಹಾಕಲು ಅಂತಾರಾಷ್ಟ್ರೀಯ ಸಮುದಾಯಕ್ಕೆ ಸಾಧ್ಯವಾಗದಿದ್ದರೆ, ಹವಾಮಾನ ಬದಲಾವಣೆ ಪರಿಸ್ಥಿತಿಯನ್ನು ನಿಭಾಯಿಸಲು ಅದಕ್ಕೆ ಸಾಧ್ಯವಾಗುವುದಿಲ್ಲ ಎಂದರು.

''ಹಾಗಾಗಿ, ಸಹ್ಯ ಜಗತ್ತಿನ ನಿರ್ಮಾಣ ನಮ್ಮ ಗುರಿಯಾದರೆ, ಈ 'ಅಭಿವೃದ್ಧಿ ಕೊರತೆ'ಯನ್ನು ನಿಭಾಯಿಸುವುದು ಪ್ರಥಮ ಹಾಗೂ ಅಗತ್ಯ ಶರತ್ತಾಗಬೇಕು'' ಎಂದು ಅವರು ಅಭಿಪ್ರಾಯಪಟ್ಟರು.

''ಕರಾವಳಿಗಳಲ್ಲಿ ಗುಡಿಸಲುಗಳಲ್ಲಿ ಕೋಟ್ಯಂತರ ಮಂದಿ ಬದುಕುತ್ತಿದ್ದಾರೆ. ನೀವು ಕಾಂಕ್ರೀಟ್ ಮನೆಗಳನ್ನು ಕಟ್ಟಿದರೆ ಅದರಿಂದ ಪರಿಸರ ಹಾಳಾಗುತ್ತದೆ ಎಂದು ನೀವು ಅವರಿಗೆ ಹೇಳುವುದು ಸಾಧ್ಯವಿಲ್ಲ. ನಿಮಗೆ ಆಧುನಿಕ ಇಂಧನ ಒದಗಿಸಿದರೆ ಅದು ಭೂಮಿಗೆ ಹಾನಿಕರ ಎಂಬುದಾಗಿ ಕತ್ತಲಿನಲ್ಲಿ ಅಧ್ಯಯನ ನಡೆಸುತ್ತಿರುವ ಮಗುವಿಗೆ ಅಥವಾ ಕಟ್ಟಿಗೆ ಅಥವಾ ಬೆರಣಿಯಲ್ಲಿ ಅಡುಗೆ ಮಾಡುತ್ತಿರುವ ಮಹಿಳೆಗೆ ಹೇಳುವುದು ಸಾಧ್ಯವಿಲ್ಲ. ಅಂದರೆ, ಈ ಸಹನಶೀಲತೆಯ ಹೊರೆಯನ್ನು ಬಡವರ ಹೆಗಲ ಮೇಲೆ ಹೊರಿಸಲಾಗದು'' ಎಂದು ನಾರಂಗ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News