ಮಂಗಳೂರು : ಗುಡ್‌ಫ್ರೈಡೆ; ವಿವಿಧ ಚರ್ಚ್‌ಗಳಲ್ಲಿ ವಿಶೇಷ ಪ್ರಾರ್ಥನೆ
ಮಂಗಳೂರು,ಮಾ.25: ವಿಶ್ವಕ್ಕೆ ಶಾಂತಿ ಸಂದೇಶ ಸಾರಿದ ಏಸು ಕ್ರಿಸ್ತನನ್ನು ಭಯ ಭಕ್ತಿಯಿಂದ ಆರಾಧಿಸಿ ಪೂಜಿಸುವ ‘ಗುಡ್ ಫ್ರೈಡೆ ’ಯನ್ನು ನಗರದ ವಿವಿಧ ಚರ್ಚ್‌ಗಳಲ್ಲಿ ಶುಕ್ರವಾರ ಭಾರಿ ಭಕ್ತಸಾಗರದ ನಡುವೆ ಆಚರಿಸಲಾಯಿತು.
ನಗರದ ಪ್ರಮುಖ ಚರ್ಚ್‌ಗಳಲ್ಲಿ ಒಂದಾದ ರೋಸಾರಿಯೋ ಕ್ಯಾಥಡ್ರಲ್ ಚರ್ಚ್‌ನಲ್ಲಿ ಮಂಗಳೂರು ಕ್ರೈಸ್ತ ಧರ್ಮಪ್ರಾಂತ್ಯದ ಧರ್ಮಗುರು ರೆ.ಫಾ.ಅಲೋಶಿಯಸ್ ಪೌಲ್ ಡಿಸೋಜ ನೇತೃತ್ವದಲ್ಲಿ ಪ್ರಾರ್ಥನ ಸಭೆ ನಡೆಯಿತು.
ಯೇಸು ಕ್ರಿಸ್ತರಿಗೆ ಶಿಲುಬೆಯ ಮರಣ ಶಿಕ್ಷೆ ವಿಧಿಸಿದಲ್ಲಿಂದ ತೊಡಗಿ ಅವರು ಶಿಲುಬೆಯಲ್ಲಿ ಮರಣಿಸಿ ಅವರ ಶರೀರವನ್ನು ಸಮಾಧಿ ಮಾಡುವ ವರೆಗಿನ 14 ಪ್ರಮುಖ ಘಟನಾವಳಿಗೆ ಸಂಬಂಧಿಸಿದ ‘ಶಿಲುಬೆಯ ಹಾದಿ’(ವೇ ಆ್ ಕ್ರಾಸ್) ಆಚರಣೆಯ ಮೂಲಕ ಯೇಸು ಕ್ರಿಸ್ತರು ಅನುಭವಿಸಿದ ಕಷ್ಟ- ಸಂಕಷ್ಟಗಳನ್ನು ಕ್ರೈಸ್ತರು ಸ್ಮರಣೆ ಮಾಡಿದರು.
ಕ್ರೈಸ್ತ ಸಮುದಾಯದವರು ಪೂರ್ತಿ ದಿನ ಉಪವಾಸ ಮಾಡಿ, ಪ್ರಾರ್ಥನೆ, ಧ್ಯಾನ, ಶಿಲುಬೆಯ ಆರಾಧನೆ, ಲೋಕ ಕಲ್ಯಾಣಕ್ಕಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಏಸುಕ್ರಿಸ್ತ ಮರಣ ಹೊಂದಿದ ಇಡೀ ಘಟನೆಯನ್ನು ಸ್ಮರಿಸುವುದು, ಶಿಲುಬೆಯನ್ನು ಗೌರವಿಸುವುದು ಮತ್ತು ಪರಮಪ್ರಸಾದವನ್ನು ಸ್ವೀಕರಿಸುವುದು ಗುಡ್‌ಪ್ರೈಡೆಯ ದಿನದಲ್ಲಿ ಮಂಗಳೂರಿನ ಎಲ್ಲಾ ಚರ್ಚ್‌ಗಳಲ್ಲಿ ನೆರವೇರಿತು.
ಎಲ್ಲ ಚರ್ಚ್‌ಗಳಲ್ಲಿ ವೇ ಆ್ ಕ್ರಾಸ್ ಕಾರ್ಯಕ್ರಮ, ಬೈಬಲ್ ವಾಚನ, ವಿಶೇಷ ಪ್ರಾರ್ಥನೆ, ಆರಾಧನೆ, ಧ್ಯಾನ ನಡೆದಿದ್ದು, ಸ್ಥಳೀಯ ಧರ್ಮಗುರುಗಳು ನೇತೃತ್ವ ವಹಿಸಿದ್ದರು.
ಮಂಗಳೂರಿನ ಪ್ರಮುಖ ಚರ್ಚ್‌ಗಳಾದ ಮಿಲಾಗ್ರಿಸ್ ಚರ್ಚ್, ಕುಲಶೇಖರ ಚರ್ಚ್, ಬೆಂದೂರು ಚರ್ಚ್, ಬೋಂದೆಲ್ ಚರ್ಚ್, ಬಜ್ಪೆ ಚರ್ಚ್, ಶಕ್ತಿನಗರ ಚರ್ಚ್ ಸೇರಿದಂತೆ ವಿವಿಧ ಚರ್ಚ್‌ಗಳಲ್ಲಿ ನಡೆದ ಪ್ರಾರ್ಥನಾ ಸಭೆಯಲ್ಲಿ ಮಕ್ಕಳು, ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.