ಪುತ್ತೂರು : ಖಾಸಗಿ ದೂರಿಗೆ ಸಂಬಂಧಿಸಿ ನ್ಯಾಯಾಲಯದ ಆದೇಶದಂತೆ ಇನ್ವೆಸ್ಟ್‌ಮೆಂಟ್ ಕಂಪನಿಯ ವಿರುದ್ಧ ಪ್ರಕರಣ ದಾಖಲು
ಪುತ್ತೂರು : ಇನ್ವೆಸ್ಟ್‌ಮೆಂಟ್ ಕಂಪನಿಯೊಂದು ವಂಚಿಸಿದ ಕುರಿತು ವ್ಯಕ್ತಿಗಳಿಬ್ಬರು ಸಲ್ಲಿಸಿದ ಖಾಸಗಿ ದೂರಿನ ವಿಚಾರಣೆ ನಡೆಸಿದ ನ್ಯಾಯಾಲಯ ನೀಡಿರುವ ಆದೇಶದಂತೆ ಪುತ್ತೂರು ನಗರ ಠಾಣೆಯಲ್ಲಿ ಇದೀಗ ಪ್ರಕರಣ ದಾಖಲಾಗಿದೆ. ಬೆಂಗಳೂರಿನ ಹಿಂದೂಸ್ಥಾನ್ ಇನ್ವೆಸ್ಟ್‌ಮೆಂಟ್ ಇಂಡಿಯಾ ಕಂಪನಿಯ ಕುಶಾಲನಗರದಲ್ಲಿರುವ ಶಾಖೆಯ ವಿರುದ್ದ ಪ್ರಕರಣ ದಾಖಲಾಗಿದೆ.
ಬೆಳ್ತಂಗಡಿಯ ಗಣೇಶ್ ಸಪಲ್ಯ ಅವರು 2001ರಲ್ಲಿ ಬೆಂಗಳೂರಿನ ಹಿಂದೂಸ್ಥಾನ್ ಇನ್ವೆಸ್ಟ್‌ಮೆಂಟ್ ಇಂಡಿಯಾ ಕಂಪನಿಯ ಕುಶಾಲನಗರದಲ್ಲಿರುವ ಶಾಖೆಯಿಂದ ರೂ.15ಲಕ್ಷ ವಂಚನೆಯಾಗಿದೆ ಎಂದು ನ್ಯಾಯಾಲಯಕ್ಕೆ ಖಾಸಗಿ ದೂರು ಸಲ್ಲಿಸಿದ್ದರು.
ಬೆಳ್ತಂಗಡಿ ತಾಲೂಕಿನ ಕನ್ಯಾಡಿ ನಿವಾಸಿ ಪ್ರಶಾಂತ್ ಶೆಟ್ಟಿ ಅವರು 2013ರಲ್ಲಿ ಕಂಪನಿಯು ತನಗೆ ರೂ.3,07,660 ವಂಚಿಸಿದೆ ಎಂದು ದೂರು ನೀಡಿದ್ದರು. ಇವರಿಬ್ಬರು ನೀಡಿದ್ದ ಖಾಸಗಿ ದೂರಿನ ವಿಚಾರಣೆ ನಡೆಸಿದ ನ್ಯಾಯಾಲಯ ಆರೋಪಿ ಸಂಸ್ಥೆಯ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳುವಂತೆ ಪುತ್ತೂರು ನಗರ ಪೊಲೀಸರಿಗೆ ಆದೇಶಿಸಿದೆ. ಈ ಹಿನ್ನಲೆಯಲ್ಲಿ ಪೊಲೀಸರು ಇದೀಗ ಪ್ರಕರಣ ದಾಖಲಿಸಿಕೊಂಡಿದ್ದಾರೆ.