×
Ad

ಹತ್ಯಡ್ಕ ಸಿ.ಎ. ಬ್ಯಾಂಕ್ ಸ್ಥಳ ಪರಿಶೀಲನೆಗೆ ಡಿ.ಸಿ ಭೇಟಿ

Update: 2016-03-25 21:06 IST

 ವಿಕಸುದ್ದಿಲೋಕ ಕೊಕ್ಕಡ ಹತ್ಯಡ್ಕ ಕೃಷಿ ಪತ್ತಿನ ಸೇವಾ ಸಹಕಾರಿ ಸಂಘದ ಕಟ್ಟಡವು ಈ ವರೆಗೆ ರೆಖ್ಯ ಗ್ರಾಮದ ಮೀಸಲು ರಕ್ಷಿತಾರಣ್ಯದ 69-1 ಸ. ನಂ. ನಲ್ಲಿ 0.75 ಸೆಂಟ್ಸ್ ಸ್ಥಳದಲ್ಲಿದ್ದು ಈ ಸ್ಥಳದ ಬಾಬ್ತು ಎರಡು ಪಟ್ಟು ಸರಕಾರಿ ಸ್ಥಳವನ್ನು ಅರಣ್ಯ ಇಲಾಖೆಗೆ ಹಸ್ತಾಂತರಿಸುವ ಕುರಿತ ಪ್ರಕ್ರಿಯೆಗಳು ಚಾಲನೆಯಲ್ಲಿದ್ದು ಈ ಕುರಿತಂತೆ ಸ್ಥಳ ಪರಿಶೀಲನೆಗಾಗಿ ದ.ಕ. ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ ಇವರು ಕಂದಾಯ ಇಲಾಖಾಧಿಕಾರಿಗಳೊಂದಿಗೆ ಗುರುವಾರದಂದು ಅರಸಿನಮಕ್ಕಿಗೆ ಭೇಟಿ ನೀಡಿದರು.

ಹತ್ಯಡ್ಕ ಕೃಷಿ ಪತ್ತಿನ ಸೇವಾ ಸಹಕಾರಿ ಸಂಘದ ಕಟ್ಟಡದ ಸ್ಥಳವು ಮೀಸಲು ರಕ್ಷಿತಾರಣ್ಯದ ವ್ಯಾಪ್ತಿಯಲ್ಲಿ ಬರುತ್ತಿದ್ದು ಇದೀಗ ಹೊಸದಾಗಿ ನಿರ್ಮಾಣಗೊಂಡ ಕಟ್ಟಡಗಳೂ ಸೇರಿದಂತೆ ಈ 75 ಸೆಂಟ್ಸ್ ಸ್ಥಳವು ಸಂಘದ ಹೆಸರಿನಲ್ಲಿರುವುದಿಲ್ಲ ಅನ್ನುವ ಕಾರಣಕ್ಕಾಗಿ ಹಲವಾರು ತಾಂತ್ರಿಕ ತೊಂದರೆಗಳನ್ನು ಎದುರಿಸಿಕೊಂಡಿತ್ತು.
 
ಒಂದು ವೇಳೆ ಮೀಸಲು ಅರಣ್ಯ ಇಲಾಖೆಯ ಸ್ಥಳವು ಸಾರ್ವಜನಿಕ ಉದ್ದೇಶಗಳಿಗೆ ಬಳಕೆಯಾಗುತ್ತಿದ್ದು ತೀರಾ ಅಗತ್ಯವೆಂದಾದಲ್ಲಿ ಎಷ್ಟು ಜಾಗದಲ್ಲಿ ಇದನ್ನು ಬಳಸಿಕೊಳ್ಳಲಾಗುತ್ತಿದೆಯೋ ಅದರ ದುಪ್ಪಟ್ಟು ಸ್ಥಳವನ್ನು ಅರಣ್ಯಕ್ಕೆ ಬಿಟ್ಟುಕೊಟ್ಟಲ್ಲಿ ಈ ಸ್ಥಳವನ್ನು ಸಾರ್ವಜನಿಕ ಉದ್ದೇಶಕ್ಕಾಗಿ ಬಿಟ್ಟುಕೊಡುವ ಒಂದು ವ್ಯವಸ್ಥೆಯಿದ್ದು ಈ ಸಂಘದ ಅಧ್ಯಕ್ಷರ ಮುತುವರ್ಜಿಯಲ್ಲಿ ಈ ಪ್ರಕ್ರಿಯೆಗೆ ಚಾಲನೆ ದೊರಕಿತ್ತು. ಇಲ್ಲಿ ಉಪಯೋಗವಾಗುತ್ತಿದ್ದ ಸ್ಥಳದ ದುಪ್ಪಟ್ಟು ಸ್ಥಳವನ್ನು ಇದೇ ಗ್ರಾಮದ ಪಲಸ್ತಡ್ಕ ಎಂಬಲ್ಲಿ 127 ಸ.ನ. ನಲ್ಲಿ 1.5 ಎಕ್ರೆ ಸ್ಥಳವನ್ನು ಅರಣ್ಯ ಇಲಾಖೆಗೆ ಬಿಟ್ಟುಕೊಡುವ ಪ್ರಕ್ರಿಯೆಯೂ ಆರಂಭವಾಗಿದೆ. ಈ ಪ್ರಕ್ರಿಯೆಯ ಒಂದು ಭಾಗವಾಗಿ ಸಹಕಾರಿ ಸಂಘವಿರುವ ಸ್ಥಳವನ್ನು ಮತ್ತು ಬಿಟ್ಟುಕೊಡಲಿರುವ ಸ್ಥಳವನ್ನು ಪರಿಶೀಲನೆಗಾಗಿ ಗುರುವಾರದಂದು ಜಿಲ್ಲಾಧಿಕಾರಿಯವರು ಆಗಮಿಸಿದ್ದರು. ಈ ಸಂದರ್ಭ ಬೆಳ್ತಂಗಡಿ ತಹಶೀಲ್ದಾರ್ ಪ್ರಸನ್ನ ಮೂರ್ತಿ , ಕಂದಾಯ ಇಲಾಖಾಧಿಕಾರಿಗಳು , ಉಪ್ಪಿನಂಗಡಿ ವಲಯಾರಣ್ಯಾಧಿಕಾರಿ ಸಂಧ್ಯಾ , ಮತ್ತು ಸ್ಥಳೀಯ ಅರಣ್ಯಾಧಿಕಾರಿಗಳು, ಹತ್ಯಡ್ಕ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಅಡ್ಕಾಡಿ ಜಗನ್ನಾಥ ಗೌಡ, ಉಪಾಧ್ಯಕ್ಷ ಎಂ. ಕೇಶವ ರಾವ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ತ್ಯಾಂಪಣ್ಣ ಶೆಟ್ಟಿಗಾರ್, ಸಂಘದ ನಿರ್ದೇಶಕರುಗಳಾದ ಶೀನಪ್ಪ ಗೌಡ, ಶ್ರೀನಿವಾಸ ಗೌಡ, ದೇವಸ್ಯ ಎಂ.,ಎ., ಊರಿನ ಪ್ರಮುಖರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News