ಅಂಬೇಡ್ಕರ್ ಹೋರಾಟದ ತಾಯಿಬೇರು: ಜಯನ್ ಮಲ್ಪೆ
ಕಲ್ಯಾಣಪುರ, ಮಾ.25: ಬುದ್ಧ, ಬಸವ, ಫುಲೆ ಅವರ ಕಾಲದಲ್ಲಿ ಧಾರ್ಮಿಕವಾಗಿದ್ದ ದಲಿತರ ಆಂದೋಲನಕ್ಕೆ ರಾಜಕೀಯ ಮತ್ತು ಸಾಮಾಜಿಕ ಸ್ವರೂಪ ಬಂದಿದ್ದೇ ಅಂಬೇಡ್ಕರ್ ಚಳುವಳಿ ಸೂತ್ರ ಹಿಡಿದಾಗ. ಹೀಗಾಗಿ ಅಂಬೇಡ್ಕರ್ ನಮ್ಮೆಲ್ಲಾ ಹೋರಾಟದ ತಾಯಿಬೇರು ಎಂದು ದಲಿತ ಚಿಂತಕ ಹಾಗೂ ಜನಪರ ಹೋರಾಟಗಾರ ಜಯನ್ ಮಲ್ಪೆಅಭಿಪ್ರಾಯಪಟ್ಟಿದ್ದಾರೆ.
ಕಲ್ಯಾಣಪುರ ಮಿಲಾಗ್ರಿಸ್ ಕಾಲೇಜಿನ ಸಮಾನ ಅವಕಾಶ ಕೇಂದ್ರ, ಮಂಗಳೂರು ವಿವಿ ಡಾ.ಅಂಬೇಡ್ಕರ್ ಅಧ್ಯಯನ ಕೇಂದ್ರ ಹಾಗೂ ಬೆಂಗಳೂರಿನ ಭಾರತ ವಿಶ್ವವಿದ್ಯಾನಿಲಯದ ರಾಷ್ಟೀಯ ಕಾನೂನು ಶಾಲೆಗಳ ಸಹಯೋಗದೊಂದಿಗೆ ಕಾಲೇಜಿನಲ್ಲಿ ಆಯೋಜಿಸಿದ ಅಂಬೇಡ್ಕರ್: ಭಾರತದ ಬೆಳಕು ಕಾರ್ಯಾಗಾರದ ಸಮಾರೋಪ ಸಮಾರಂದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡುತ್ತಿದ್ದರು. ದಲಿತರ ವಿಮೋಚನೆಯು ರಾಜಕೀಯ ಅಧಿಕಾರವನ್ನು ಪಡೆಯುವುದರಲ್ಲಿದೆ. ಆದರೆ ದೇಶ ಅಂಬೇಡ್ಕರ್‌ರ 125ನೆ ಜನ್ಮದಿನಾಚರಣೆ ಆಚರಿಸುವ ಹೊತ್ತಿನಲ್ಲಿದ್ದರೂ, ಅಂಬೇಡ್ಕರ್ ಇದುವರೆಗೂ ಭಾಷಣದ ವಸ್ತುವಾಗಿದ್ದಾರೆಯೇ ಹೊರತು, ನಮ್ಮ ಬದುಕಿನ ಭಾಗವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಚಿಂತಕ ಬೆಂಗಳೂರಿನ ಶಿವಸುಂದರ್, ಅಂಬೇಡ್ಕರ್ ಅಭಿಯಾನದ ಸಂಚಾಲಕ ಪ್ರದೀಪ್ ರಾಮದತ್, ಮಂಗಳೂರು ವಿವಿ ಡಾ.ಅಂಬೇಡ್ಕರ್ ಅಧ್ಯಯನ ಕೇಂದ್ರದ ನಿರ್ದೇಶಕ ಡಾ.ವಿಶ್ವನಾಥ್, ಸಿರಿಲ್ ಮಥಾಯಸ್, ಸಮಾನ ಅವಕಾಶ ಕೇಂದ್ರದ ನಯನಾ ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.