ಮುಸ್ಲಿಮರು ಸೋಲಲು, ಬಿಜೆಪಿ ಗೆಲ್ಲಲು ಎಸ್ ಡಿಪಿಐ ಕಾರಣ : ಕೋಡಿಜಾಲ್ ಆರೋಪ
ಮಂಗಳೂರು, ಮಾ.26: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್‌ಗಳಲ್ಲಿ ಕಾಂಗ್ರೆಸ್ ಪಕ್ಷದ ಮುಸ್ಲಿಂ ಅಭ್ಯರ್ಥಿಗಳ ಸೋಲಿಗೆ ಎಸ್‌ಡಿಪಿಐ ಕಾರಣವಾಗಿದ್ದು, ಈ ಮೂಲಕ ಆ ಪಕ್ಷವು ಪರೋಕ್ಷವಾಗಿ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಿವೆ ಎಂದು ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೋಡಿಜಾಲ್ ಇಬ್ರಾಹೀಂ ಆರೋಪಿಸಿದ್ದಾರೆ.
ಜಮೀಯ್ಯತುಲ್ ಫಲಾಹ್‌ದಿಂದ ಕಂಕನಾಡಿಯ ಜಮೀಯ್ಯತುಲ್ ಫಲಾಹ್ ಸಭಾಂಗಣದಲ್ಲಿ ಇಂದು ಸಂಜೆ ಏರ್ಪಡಿಸಲಾದ ಉಡುಪಿ ಮತ್ತು ದ.ಕ. ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್‌ನ ಚುನಾಯಿತ ಸಮುದಾಯದ ಸದಸ್ಯರಿಗೆ ಅಭಿನಂದನಾ ಸಮಾರಂಭವನ್ನುದ್ದೇಶಿಸಿ ಅವರು ಮಾತನಾಡಿದರು.
‘‘ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್‌ಗಳಲ್ಲಿ ಸ್ಪರ್ಧಿಸಬೇಡಿ. ಈ ಕ್ಷೇತ್ರಗಳಲ್ಲಿ ನಿಮಗೆ ಗೆಲುವು ಅಸಾಧ್ಯ’’ ಎಂದು ಎಸ್‌ಡಿಪಿಐ ಪಕ್ಷದವರಿಗೆ ಕಿವಿಮಾತು ಹೇಳಿದ್ದೆ. ಆದರೆ, ಅವರು ನನ್ನ ಮಾತಿಗೆ ಮನ್ನಣೆ ನೀಡಿಲ್ಲ. ಇದರಿಂದಾಗಿ ಬಿಜೆಪಿ ಅಭ್ಯರ್ಥಿಗಳು ನಿರಾಯಾಸವಾಗಿ ಗೆಲುವು ಸಾಧಿಸುವಂತಾಯಿತು. ಈ ಬಗ್ಗೆ ಆ ಪಕ್ಷದವರು ಮತ್ತು ಬೆಂಬಲಿತರು ಮರುಚಿಂತನೆ ನಡೆಸಬೇಕಾದ ಅಗತ್ಯವಿದೆ ಎಂದರು.
ಸಮುದಾಯದಲ್ಲಿ ಒಗ್ಗಟ್ಟಿನ ಅಗತ್ಯದ ಬಗ್ಗೆ ಒತ್ತಿ ಹೇಳಿದ ಕೋಡಿಜಾಲ್, ಸಮುದಾಯದಲ್ಲಿ ಎಲ್ಲಿಯವರೆಗೆ ಒಗ್ಗಟ್ಟು ಇರುವುದಿಲ್ಲವೋ ಅಲ್ಲಿಯವರೆಗೆ ಗಂಡಾಂತರವನ್ನು ಎದುರಿಸಬೇಕಾದೀತು. ಆದ್ದರಿಂದ ಒಗ್ಗಟ್ಟಿನ ಮೂಲಕ ನಮ್ಮ ಹಕ್ಕನ್ನು ನಾವು ಪಡೆದುಕೊಳ್ಳುವಂತಾಗಬೇಕು ಎಂದು ಸಲಹೆ ನೀಡಿದರು.
ಚುನಾವಣೆಯಲ್ಲಿ ಗೆಲುವು ಸಾಧಿಸಿರುವ ಜನಪ್ರತಿನಿಧಿಗಳು ಜನಸೇವೆ ಮಾಡಲು ನಮಗೆ ದೊರೆತ ಸದಾವಕಾಶ ಎಂದು ಅರಿತು ಸಮಾಜದ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕೆಂದು ಅಭಿನಂದನೆ ಸ್ವೀಕರಿಸಿರುವ ಜನಪ್ರತಿನಿಧಿಗಳಿಗೆ ಅವರು ಇದೇ ಸಂದರ್ಭದಲ್ಲಿ ಕರೆ ನೀಡಿದರು.
ಉಡುಪಿ ಜಿಲ್ಲೆಯಲ್ಲಿ ಕಾಂಗ್ರೆಸ್‌ನಿಂದ ಮುಸ್ಲಿಮರಿಗೆ ಟಿಕೆಟ್ ನೀಡದಿದ್ದುದರಿಂದ ಪಕ್ಷ ಹೀನಾಯ ಸೋಲನ್ನು ಅನುಭವಿಸಬೇಕಾಯಿತು. ಈ ಬಗ್ಗೆಮ ನಾನು ಪಕ್ಷದ ಅಧ್ಯಕ್ಷರಿಗೆ ಮತ್ತು ಮುಖ್ಯಮಂತ್ರಿಯವರಿಗೆ ಮನವರಿಕೆ ಮಾಡಿದ್ದೇನೆ. ಪಕ್ಷದಿಂದ ಮುಸ್ಲಿಮರು ಸ್ಪರ್ಧಿಸುವುದನ್ನು ಕಡೆಗಣಿಸದಂತೆ ಅವರಿಗೆ ಮನವಿ ಮಾಡಿದ್ದೇನೆ. ಅದಕ್ಕೆ ಅವರು ಒಪ್ಪಿಕೊಂಡಿದ್ದಾರೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಮೀಯ್ಯತುಲ್ ಫಲಾಹ್ ದ.ಕ. ಮತ್ತು ಉಡುಪಿ ಜಿಲ್ಲಾಧ್ಯಕ್ಷ ಅಬ್ದುಲ್ ಲತೀಫ್ ಸಾಹೇಬ್, ರಾಜ್ಯ ವಕ್ಫ್ ಸಮಿತಿ ಸದಸ್ಯ ವೈ.ಮುಹಮ್ಮದ್ ಕುಂಞಿ, ವಕ್ಫ್ ಸಲಹಾ ಸಮಿತಿಯ ದ.ಕ. ಜಿಲ್ಲಾಧ್ಯಕ್ಷ ಎಸ್.ಎಂ.ರಶೀದ್ ಹಾಜಿ, ಮುಸ್ಲಿಂ ಸೆಂಟ್ರಲ್ ಕಮಿಟಿಯ ಅಧ್ಯಕ್ಷ ಕೆ.ಎಸ್.ಮುಹಮ್ಮದ್ ಮಸೂದ್, ವಕ್ಫ್ ಸಲಹಾ ಸಮಿತಿಯ ಉಡುಪಿ ಜಿಲ್ಲ್ಲಾಧ್ಯಕ್ಷ ನಕ್ವಾ ಯಹ್ಯಾ, ಸಾದುದ್ದೀನ್ ಸ್ವಾಲಿಹ್, ಜಮೀಯ್ಯತುಲ್ ಫಲಾಹ್ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಶರೀಫ್ ಮೊದಲಾದವರು ಉಪಸ್ಥಿತರಿದ್ದರು.
ದ.ಕ. ಜಿಲ್ಲಾ ಪಂಚಾಯತ್ ಸದಸ್ಯರಾದ ಶಾಹುಲ್ ಹಮೀದ್, ರಶೀದಾ ಬಾನು, ಎಂ.ಎಸ್.ಮುಹಮ್ಮದ್, ಯು.ಬಿ.ಇಬ್ರಾಹೀಂ, ಮಂಗಳೂರು ತಾಲೂಕು ಪಂಚಾಯತ್ ಸದಸ್ಯರಾದ ಬಶೀರ್ ಅಹ್ಮದ್, ಅಪ್ಸತ್, ಬಿ.ಕೆ.ಅಬ್ದುಲ್ ಜಬ್ಬಾರ್, ಅಬೂಬಕರ್ ಸಿದ್ದೀಕ್, ಬಂಟ್ವಾಳ ತಾ.ಪಂ. ಸದಸ್ಯರಾದ ನಸೀಮಾ ಬೇಗಂ, ಅಬ್ಬಾಸ್ ಅಲಿ ಬಿ.ಎಂ., ಆದಂ ಕುಂಞಿ, ಉಸ್ಮಾನ್ ಕರೋಪಾಡಿ, ಪುತ್ತೂರು ತಾ.ಪಂ. ಸದಸ್ಯ ಫಝಲ್ ಕೋಡಿಂಬಾಳ, ಸುಳ್ಯ ತಾ.ಪಂ. ಸದಸ್ಯ ಅಬ್ದುಲ್ ಗಫೂರ್, ಉಡುಪಿ ತಾ.ಪಂ. ಸದಸ್ಯ ದಸ್ತಗೀರ್‌ವೌಲಾನಾ ಅವರನ್ನು ಕಾರ್ಯಕ್ರಮದಲ್ಲಿ ಅಭಿನಂದಿಸಲಾಯಿತು.