ಸುಳ್ಯ: ಮೈನಾರಿಟಿ ಕಾಂಗ್ರೆಸ್ ಕರಾವಳಿ ವಲಯ ಅಧ್ಯಕ್ಷರಾಗಿ ಇಸ್ಮಾಯಿಲ್ ನೇಲ್ಯಮಜಲು
ಸುಳ್ಯ: ಕರಾವಳಿ ಜಿಲ್ಲೆಗಳಲ್ಲಿ ಕಾಂಗ್ರೆಸ್ ಪಕ್ಷವನ್ನು ಮತ್ತಷ್ಟು ಬಲಿಷ್ಟಗೊಳಿಸಲು ನಿಸ್ವಾರ್ಥವಾಗಿ ಶ್ರಮಿಸಲಾಗುವುದು ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಲ್ಪಸಂಖ್ಯಾತರ ವಿಭಾಗದ ಕರಾವಳಿ ವಲಯ ಅಧ್ಯಕ್ಷರಾಗಿ ನೂತನವಾಗಿ ಆಯ್ಕೆಗೊಂಡಿರುವ ಕಾಂಗ್ರೆಸ್ ನಾಯಕ ಇಸ್ಮಾಯಿಲ್ ನೇಲ್ಯಮಜಲುರವರು ಹೇಳಿದ್ದಾರೆ.
ಸುಳ್ಯದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಈ ಬಾರಿ ಅಲ್ಪಸಂಖ್ಯಾತರ ಸಮಿತಿಯಲ್ಲಿ 4 ವಲಯಗಳನ್ನಾಗಿ ಮಾಡಿದ್ದು, ದ.ಕ., ಉಡುಪಿ, ಚಿಕ್ಕಮಗಳೂರು, ಶಿವಮೊಗ್ಗ ಹಾಗೂ ಉತ್ತರಕನ್ನಡ ಜಿಲ್ಲೆಗಳನ್ನೊಳಗೊಂಡ ಕರಾವಳಿ ವಲಯ ಅಧ್ಯಕ್ಷರಾಗಿ ನನ್ನನ್ನು ರಾಜ್ಯಾಧ್ಯಕ್ಷ ಖುರ್ಷಿದ್ ಅಹ್ಮದ್ ಸಯ್ಯದ್ ನೇಮಕ ಮಾಡಿದ್ದಾರೆ. 30 ವರ್ಷಕ್ಕೂ ಹೆಚ್ಚು ಕಾಂಗ್ರೆಸ್‌ನಲ್ಲಿ ಸಕ್ರಿಯ ಕಾರ್ಯಕರ್ತನಾಗಿದ್ದ ನನಗೆ ಈ ದೊಡ್ಡ ಜವಾಬ್ದಾರಿ ದೊರಕಿದ್ದು, ಇದನ್ನು ಪಕ್ಷ ಸಂಘಟನೆಗೆ ವಿನಿಯೋಗಿಸುತ್ತೇನೆ. ಸ್ವಾರ್ಥ ರಾಜಕಾರಣ ಬಿಟ್ಟು ಸೇವಾ ಮನೋಭಾವನೆಯಿಂದ ಪಕ್ಷ ಸಂಘಟನೆ ಮಾಡುವಂತೆ ಎಲ್ಲರಲ್ಲೂ ಮನವಿ ಮಾಡುತ್ತೇನೆ. ರಾಜ್ಯದ ಕಾಂಗ್ರೆಸ್ ಸರಕಾರ ಪ್ರಣಾಳಿಕೆಯಲ್ಲಿ ಘೋಷಿಸಿದ್ದ ಶೇ.90ರಷ್ಟು ಯೋಜನೆಗಳನ್ನು ಜಾರಿಗೆ ತಂದಿದ್ದು, ಇದನ್ನು ಜನರಿಗೆ ತಲುಪಿಸುವ ಹೊಣೆ ನಮ್ಮ ಮೇಲಿದೆ ಎಂದರು. ಪುತ್ತೂರು ಮಹಾಲಿಂಗೇಶ್ವರ ದೇಗುಲದ ಆಮಂತ್ರಣ ಪತ್ರಿಕೆ ವಿವಾದಕ್ಕೆ ಪ್ರತಿಕ್ರಿಯಿಸಿದ ಅವರು, ಯಾವುದೇ ಹುದ್ದೆಗೆ ಜಾತಿ, ಧರ್ಮ ಭೇದವಿರುವುದಿಲ್ಲ. ಶಿಷ್ಟಾಚಾರದ ಪ್ರಕಾರ ಎ.ಬಿ.ಇಬ್ರಾಹಿಂ ಹೆಸರು ಉಲ್ಲೇಖವಾಗಿದ್ದು, ಇದನ್ನು ತಪ್ಪಾಗಿ ಅರ್ಥೈಸುವುದು ಸರಿಯಲ್ಲ. ಧರ್ಮವನ್ನು ಯಾರೂ ರಾಜಕೀಯಕ್ಕೆ ಬಳಸಿಕೊಳ್ಳಬಾರದು ಎಂದು ಇಸ್ಮಾಯಿಲ್ ಹೇಳಿದರು. ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ತಾಲೂಕು ಅಧ್ಯಕ್ಷ ಅಬ್ದುಲ್ ಮಜೀದ್ ನಡುವಡ್ಕ, ಮಾಜಿ ಅಧ್ಯಕ್ಷ ಇಸಾಕ್ ಹಾಜಿ ಪಾಜಪಳ್ಳ, ಕಾಂಗ್ರೆಸ್ ನಾಯಕರಾದ ರಾಜೀವಿ ಆರ್. ರೈ, ಕೆ.ಎಂ.ಮುಸ್ತಫ, ವಹೀದಾ ಇಸ್ಮಾಯಿಲ್, ಹಸೈನಾರ್ ಹಾಜಿ ಗೋರಡ್ಕ, ಕೆ.ಎಸ್.ಪೂಜಾರಿ, ಸುನಿಲ್ ರೈ ಪುಡ್ಕಜೆ, ಜೂಲಿಯಾನ ಕ್ರಾಸ್ತಾ, ಶಾಫಿ ಎಲಿಮಲೆ, ಸವಾದ್ ಗೂನಡ್ಕ, ಮಹಮ್ಮದ್ ಬೆಳ್ಳಾರೆ, ನಂದರಾಜ್ ಸಂಕೇಶ ಉಪಸ್ಥಿತರಿದ್ದರು.