×
Ad

ಮಂಗಳೂರು : ತುಂಬೆಯಲ್ಲಿ 50 ದಿನಕ್ಕೆ ಬೇಕಾದಷ್ಟು ನೀರು ಸಂಗ್ರಹ:ಜಿಲ್ಲಾಧಿಕಾರಿ

Update: 2016-03-26 18:47 IST

 ಮಂಗಳೂರು, ಮಾ.26:ಮಂಗಳೂರು ಮಹಾನಗರಪಾಲಿಕೆ ನೀರು ಸರಬರಾಜು ಮಾಡುವ ತುಂಬೆ ವೆಂಟೆಡ್ ಡ್ಯಾಮ್‌ನಲ್ಲಿ ನೀರಿನ ಮಟ್ಟ 8.3 ಮಿಲಿಯನ್ ಕ್ಯೂಬಿಕ್ ಮೀಟರ್‌ನಷ್ಟಿದೆ.ಈ ಹಿನ್ನೆಲೆಯಲ್ಲಿ ಎ ಎಂ ಆರ್ ಡ್ಯಾಮ್‌ನಲ್ಲಿರುವ 11.25 ಮಿಲಿಯನ್ ಕ್ಯೂಬಿಕ್ ನೀರನ್ನು ತುಂಬೆ ವೆಂಟೆಡ್ ಡ್ಯಾಮ್‌ಗೆ ತರಿಸಿದರೆ ಸುಮಾರು 50 ದಿನಕ್ಕೆ ಬೇಕಾಗುವಷ್ಟು ನೀರು ಸಂಗ್ರಹವಾಗಲಿದೆ ಎಂದು ಜಿಲ್ಲಾಧಿಕಾರಿ ಎ.ಬಿ.ಇಬ್ರಾಹೀಂ ಹೇಳಿದರು.

 ಅವರು ದ.ಕ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಮಹಾನಗರಪಾಲಿಕೆಯ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

   ಸೋಮವಾರ ಸಂಜೆಯಿಂದ ಹಂತಹಂತವಾಗಿ ಎ ಎಂ ಆರ್ ಡ್ಯಾಮ್‌ನಿಂದ ತುಂಬೆ ವೆಂಟೆಡ್ ಡ್ಯಾಮ್‌ಗೆ ನೀರು ಹರಿಸಲಾಗುತ್ತಿದ್ದು ನದಿಪಾತ್ರದಲ್ಲಿ ಮಕ್ಕಳು ಆಟವಾಡದಂತೆ, ಸಾರ್ವಜನಿಕರು ಮುನ್ನೆಚ್ಚರಿಕೆ ವಹಿಸುವಂತೆ ಅವರು ಸೂಚಿಸಿದರು.

ಸಾರ್ವಜನಿಕರು ನೀರಿಗೆ ಆತಂಕ ಪಡಬೇಕಾಗಿಲ್ಲ. ಕುಡಿಯುವ ನೀರಿಗೆ ಆತಂಕವಾಗದ ರೀತಿಯಲ್ಲಿ ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದರು.

ಪ್ರತಿದಿನ 0.16 ಮಿಲಿಯನ್ ಕ್ಯೂಬಿಕ್ ಮೀಟರ್ ನೀರು ನಗರಕ್ಕೆ ಅಗತ್ಯವಿದೆ. ಜನರಲ್ಲಿ ನೀರು ಪೋಲು ಮಾಡದಂತೆ ಜಾಗೃತಿ ಮೂಡಿಸಬೇಕಾದ ಕೆಲಸವನ್ನು ಮಾಡಬೇಕಾಗಿದೆ ಎಂದು ಹೇಳಿದರು.

  ಎಡಿಬಿ ಎರಡನೆ ಹಂತದ ಯೋಜನೆಯಲ್ಲಿ ನೀರು ಸರಬರಾಜು ಯೋಜನೆ 160 ಕೋಟಿ ಮತ್ತು ಒಳಚರಂಡಿ ಅಭಿವೃದ್ದಿಗಾಗಿ 120 ಕೋಟಿ ಮಂಜೂರಾಗಿದ್ದು ಇದಕ್ಕೆ ಸಂಬಂಧಪಟ್ಟಂತೆ ಸರ್ವೇ ಕಾರ್ಯ ಪೂರ್ಣಗೊಂಡಿದೆ. ನೀರು ಸರಬರಾಜು ಯೋಜನೆಗೆ ಗುರುತಿಸಿರುವ 18 ಸ್ಥಳಗಳಲ್ಲಿ 10 ಖಾಸಗಿ ಜಾಗವಿದ್ದು ಒಳಚರಂಡಿ ಯೋಜನೆಗೆ ಗುರುತಿಸಿರುವ 26 ಸ್ಥಳಗಳಲ್ಲಿ 20 ಖಾಸಗಿ ಜಾಗದಲ್ಲಿದೆ.ಇಲ್ಲಿ ಯೋಜನೆ ರೂಪಿಸಲು ಖಾಸಗಿ ಜಾಗವನ್ನು ಬಿಟ್ಟುಕೊಡಲು ತಕರಾರು ಇದೆ ಎಂದು ಅಧಿಕಾರಿಗಳು ಜಿಲ್ಲಾಧಿಕಾರಿಗಳ ಗಮನಸೆಳೆದಾಗ ಜಿಲ್ಲಾಧಿಕಾರಿಗಳು ಯೋಜನೆಗೆ ಅಗತ್ಯವಿದ್ದರೆ ಅದನ್ನು ಸ್ವಾಧೀನಪಡಿಸಿಕೊಳ್ಳಿ ಎಂದು ಸೂಚಿಸಿದರು.

   ಅಮೃತ್ ಯೋಜನೆಯಲ್ಲಿ 3 ಕೋಟಿ ಮಳೆ ನೀರು ಚರಂಡಿಗೆ ನಾಲ್ಕು ಕಾಮಗಾರಿ ಮತ್ತು 0.25 ಕೋಟಿ ಪಾರ್ಕ್ ಅಭಿವೃದ್ದಿಗೆ 2 ಕಾಮಾಗಾರಿ ವರದಿಯನ್ನು ಸಲ್ಲಿಸಲಾಗಿದ್ದು ಮುಖ್ಯಮಂತ್ರಿಗಳು ಮೇ ತಿಂಗಳಲ್ಲಿ ಮಂಗಳೂರು ಪ್ರವಾಸ ಮಾಡುವ ಸಂದರ್ಭದಲ್ಲಿ ಈ ಕಾಮಗಾರಿಗೆ ಚಾಲನೆ ನೀಡಲು ಸಭೆಯಲ್ಲಿ ನಿರ್ಧರಿಸಲಾಯಿತು.

  ಜೆಪ್ಪಿನಮೊಗರು ಮತ್ತು ಸುರತ್ಕಲ್ ತ್ಯಾಜ್ಯ ನೀರು ಸಂಸ್ಕರಣಾ ಘಟಕಕ್ಕೆ ಸಂಬಂಧಪಟ್ಟಂತೆ ನಡೆದ ಪ್ರಗತಿ ಪರಿಶೀಲನೆ ಸಭೆಯಲ್ಲಿ ಜೆಪ್ಪಿನಮೊಗರು ತ್ಯಾಜ್ಯ ನೀರು ಸಂಸ್ಕರಣಾ ಘಟಕದ ಸಮಸ್ಯೆ ಬಗ್ಗೆ ಜಿಲ್ಲಾಧಿಕಾರಿಗಳು ಅಸಮಾಧಾನ ವ್ಯಕ್ತಪಡಿಸಿ ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ಪ್ರಯೋಜನವಿಲ್ಲದಂತಾಗಿದೆ ಎಂದು ಹೇಳಿದರು.ಈ ಸಂದರ್ಭದಲ್ಲಿ ಮಾತನಾಡಿದ ಅಧಿಕಾರಿಗಳು 6 ಹಂತದಲ್ಲಿ ಮಾಡಬೇಕಾದ ಕಾಮಾಗಾರಿಗಳಲ್ಲಿ 3 ಹಂತದ ಕಾಮಗಾರಿ ಪೂರ್ಣಗೊಂಡಿದೆ. ವಿದ್ಯುತ್ ಸಂಪರ್ಕದ ಸಮಸ್ಯೆ ಪರಿಹಾರವಾಗಬೇಕಾಗಿದೆ ಎಂದು ಹೇಳಿದರು. ಸುರತ್ಕಲ್ ತ್ಯಾಜ್ಯ ನೀರು ಸಂಸ್ಕರಣಾ ಘಟಕ ನೂತನವಾಗಿ ನಿರ್ಮಾಣವಾಗಿದ್ದರೂ ಅದರಲ್ಲಿ ಸೋರಿಕೆಯಾಗುತ್ತಿರುವುದನ್ನು ಶೀಘ್ರ ಪರಿಹರಿಸಬೇಕಾಗಿದೆ ಎಂದು ಹೇಳಿದರು.ಕಾವೂರು ತ್ಯಾಜ್ಯ ನೀರು ಸಂಸ್ಕರಣಾ ಘಟಕದಿಂದ ತ್ಯಾಜ್ಯ ನೀರು ಮಳವೂರು ನದಿಗೆ ಹೋಗುತ್ತಿದೆ ಎನ್ನುವ ಬಗ್ಗೆ ಮೇಯರ್ ಹರಿನಾಥ್ ಅಧಿಕಾರಿಗಳಲ್ಲಿ ವಿಚಾರಿಸಿದಾಗ ಅಧಿಕಾರಿಗಳು ಕೆಲವೊಮ್ಮೆ ಈ ರೀತಿ ಆಗುತ್ತಿದೆ ಎಂಬ ಮಾಹಿತಿಯನ್ನು ನೀಡಿದರು. ಈ ಬಗ್ಗೆ ಜಿಲ್ಲಾಧಿಕಾರಿಗಳು ಕೂಡಲೆ ಸಮಸ್ಯೆ ಪರಿಹರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಪಂಪ್‌ವೆಲ್ ಬಸ್ ನಿಲ್ದಾಣಕ್ಕೆ ಸಂಬಂಧಪಟ್ಟಂತೆ ವಿಳಂಬವಾಗುತ್ತಿರುವುದಕ್ಕೆ ಜಿಲ್ಲಾಧಿಕಾರಿಗಳು ಅಸಮಾಧಾನ ವ್ಯಕ್ತಪಡಿಸಿದರು. ಈಗಾಗಲೆ ಜಾಗ ಒತ್ತುವರಿ ಮಾಡಿದ್ದರೂ ಕಾಮಗಾರಿಗೆ ಸಂಬಂಧಪಟ್ಟಂತೆ ವಿಳಂಬ ನೀತಿ ಅನುಸರಿಸುತ್ತಿರುವ ಬಗ್ಗೆ ಅವರು ಅಧಿಕಾರಿಗಳನ್ನು ಪ್ರಶ್ನಿಸಿದರು. ಹೊಸ ಕಾಯ್ದೆ ಪ್ರಕಾರ ಯಾವುದೆ ಯೋಜನೆಗೆ ಭೂಮಿಯನ್ನು ಸ್ವಾಧೀನಪಡಿಸಿಕೊಂಡ ಐದು ವರ್ಷದೊಳಗೆ ಯೋಜನೆ ಆರಂಭಿಸದಿದ್ದರೆ ಭೂಮಿಯನ್ನು ಮೂಲ ವಾರಸುದಾರರಿಗೆ ನೀಡಬೇಕಾಗುತ್ತದೆ. ಈ ಬಗ್ಗೆ ಶೀಘ್ರ ನಿರ್ಧಾರವನ್ನು ತೆಗೆದುಕೊಳ್ಳುವಂತೆ ಸೂಚಿಸಿದರು.

ನಗರದಲ್ಲಿ ಪುಟ್‌ಪಾತ್ ನಿರ್ಮಾಣದ ಕಾಮಾಗಾರಿಯ ವಿಳಂಬದ ಬಗ್ಗೆಯೂ ಸಭೆಯಲ್ಲಿ ಅವರು ತರಾಟೆಗೆ ತೆಗೆದುಕೊಂಡರು.

 ಸಭೆಯಲ್ಲಿ ಮನಪಾ ಕಮೀಷನರ್ ಗೋಪಾಲಕೃಷ್ಣ, ಮನಪಾ ಮೇಯರ್ ಹರಿನಾಥ್, ಉಪಮೇಯರ್ ಸುಮಿತ್ರಾ ಕರಿಯ ಮೊದಲಾದವರು ಉಪಸ್ಥಿತರಿದ್ದರು.

ಕಾರ್‌ಸ್ಟೀಟ್ ರಸ್ತೆ ಮಧ್ಯೆ ಪ್ರತಿಭಟಿಸುತ್ತೇನೆ:ಮೇಯರ್

ಕೆಲಸ ಮಾಡದಿದ್ದರೆ ಕೆಲಸದಿಂದ ತೆರವುಗೊಳಿಸಿ:ಜಿಲ್ಲಾಧಿಕಾರಿ

ಮೇಲಾಧಿಕಾರಿಗೆ ಏರುಧ್ವನಿಯಲ್ಲಿ ಮಾತನಾಡಿದ ಇ.ಇ

  ನಗರದ ವಿವಿಧೆಡೆ ಆರಂಭಿಸಲಾಗಿದ್ದ ರಸ್ತೆ ಕಾಮಾಗಾರಿ ಅರ್ಧಕ್ಕೆ ನಿಂತಿರುವ ಬಗ್ಗೆ ಸಭೆಯಲ್ಲಿ ಭಾರೀ ಆಕ್ರೋಶ ವ್ಯಕ್ತವಾಯಿತು. ರಸ್ತೆ ಕಾಮಗಾರಿಗೆ ಮರಳು ಪೂರೈಕೆಯ ಸಮಸ್ಯೆಯನ್ನು ನಿವಾರಿಸಿ ಜಿಲ್ಲಾಧಿಕಾರಿಗಳು ಆದೇಶಿಸಿ 15 ದಿನಗಳಾದರೂ ಅದನ್ನು ಬಗೆಹರಿಸದೆ ಇರುವ ಬಗ್ಗೆ ಆಕ್ರೋಶ ವ್ಯಕ್ತವಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಸುಪರಿಡೆಂಟ್ ಇಂಜಿನಿಯರ್ ಶಿವಶಂಕರ ಸ್ವಾಮಿ ಈ ಬಗ್ಗೆ ಟೆಂಡರ್ ಕರೆಯಲು ಎಕ್ಸಿಕ್ಯೂಟಿವ್ ಇಂಜಿನಿಯರ್ ನಿಂಗೇಗೌಡ ಅವರಿಗೆ ಸೂಚಿಸಲಾಗಿದ್ದರೂ ಅವರು ಟೆಂಡರ್ ಕರೆಯದೆ ಇರುವ ಬಗ್ಗೆ ಸಭೆಗೆ ವರದಿ ನೀಡಿದರು. ಇ.ಇ ಅವರು ಇತರ ಎಲ್ಲಾ ಕಾಮಗಾರಿಗಳ ಕೆಲಸವನ್ನು ತಮಗೆ ನೀಡುವಂತೆ ಹೇಳುತ್ತಾರೆ. ಆದರೆ ಮರಳಿಗೆ ಸಂಬಂಧಪಟ್ಟಂತೆ ಟೆಂಡರ್ ಕರೆಯುತ್ತಿಲ್ಲವೆಂದು ಸುಪರಿಡೆಂಟ್ ಇಂಜಿನಿಯರ್ ಸಭೆಗೆ ತಿಳಿಸಿದಾಗ ಎದ್ದು ನಿಂತು ತಮ್ಮ ಮೇಲಾಧಿಕಾರಿಗೆ ಏರುಧ್ವನಿಯಲ್ಲಿ ಮಾತನಾಡಿದ ಇ.ಇ ನಿಂಗೇಗೌಡ ನನಗೆ ಈ ಕೆಲಸ ಮಾಡಲು ಆಗುವುದಿಲ್ಲ ಎಂದು ಹೇಳಿದರು.

     ಈ ಸಂದರ್ಭದಲ್ಲಿ ಮಾತನಾಡಿದ ಮನಪಾ ಮೇಯರ್ ಹರಿನಾಥ್ ಅಧಿಕಾರಿಗಳು ಕೆಲಸ ಮಾಡದಿದ್ದರೆ ನಾನು ಮೇಯರ್ ಆಗಿ ಕಾರ್‌ಸ್ಟ್ರೀಟ್ ರಸ್ತೆಯ ಮಧ್ಯೆ ಕುಳಿತು ಪ್ರತಿಭಟಿಸುತ್ತೇನೆ . ನಿಮಗೆ ಕೆಲಸ ಮಾಡಲು ಸಾಧ್ಯವಾಗದಿದ್ದರೆ ರಾಜೀನಾಮೆ ಕೊಟ್ಟು ಹೋಗಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ಮಂಗಳೂರು ಮಹಾನಗರಪಾಲಿಕೆಯಲ್ಲಿ ಯಾವುದೆ ಅಭಿವೃದ್ದಿ ಕೆಲಸ ವಾಗದಂತೆ ಯಾರಾದರೂ ಸೂಚಿಸಿದ್ದಾರೆಯೆ ಎಂದು ಪ್ರಶ್ನಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿಗಳು ಮಾ.27 ಬೆಳಿಗ್ಗೆ ಸಮಸ್ಯೆ ಬಗೆಹರಿಯಬೇಕು. ಈ ಕೆಲಸವನ್ನು ಮಾಡಲು ಸಾಧ್ಯವಾಗದಿದ್ದರೆ ಅವರನ್ನು ಕೆಲಸದಿಂದ ತೆರವುಗೊಳಿಸಿ ಕಳುಹಿಸಿ ಮತ್ತು ಅವರಿಗೆ ಕೊಟ್ಟಿರುವ ಎಲ್ಲಾ ಕೆಲಸವನ್ನು ಹಿಂದೆಗೆದುಕೊಳ್ಳಿ ಎಂದು ಮನಪಾ ಕಮೀಷನರ್‌ಗೆ ಸೂಚಿಸಿದರು.

ಮನಪಾಕ್ಕೆ ಕಾಮಗಾರಿಗೆ ಅವಿಶ್ವಾಸ: ಸಂಸದ ಶಾಸಕರಿಂದ ಅನುದಾನವಿಲ್ಲ!

  ಮಂಗಳೂರು ಮಹಾನಗರಪಾಲಿಕೆಗೆ ಶಾಸಕರುಗಳು, ಸಂಸದರು ತಮ್ಮ ಅನುದಾನದ ಮೂಲಕ ಕೆಲಸ ಮಾಡಿಸುವುದು ಸಾಮನ್ಯವಾಗಿರುತ್ತದೆ. ಆದರೆ ಮನಪಾದ ಕಾಮಗಾರಿಯ ಮೇಲಿನ ಅವಿಶ್ವಾಸದಿಂದ ಶಾಸಕರುಗಳು, ಸಂಸದರು ಮನಪಾಗೆ ಕಾಮಗಾರಿಗೆ ಅನುದಾನ ನೀಡುತ್ತಿಲ್ಲ ಎಂದು ಸಭೆಗೆ ಜಿಲ್ಲಾಧಿಕಾರಿಗಳು ಹೇಳಿದರು. ಮನಪಾ ಗೆ ಕೆಲಸ ಕೊಟ್ಟರೆ ಅದು ಆಗುವುದಿಲ್ಲ ಎಂಬ ಭಾವನೆ ಸಂಸದರು ಮತ್ತು ಶಾಸಕರಲ್ಲಿದೆ. ಈ ರೀತಿಯ ವಿಶ್ವಾಸದ ಕೊರತೆ ಯಾವತ್ತಿಗೂ ಆಗಬಾರದು ಎಂದು ಹೇಳಿದರು.

ಪೈಪ್‌ಲೈನ್ ಭೂಮಿಯನ್ನು ಒತ್ತುವರಿ ತೆರವುಗೊಳಿಸಲು ಏಳು ದಿನದೊಳಗೆ ಯೋಜನೆ ರೂಪಿಸಿ:ಜಿಲ್ಲಾಧಿಕಾರಿ

 ತುಂಬೆ ವೆಂಟೆಡ್ ಡ್ಯಾಮ್‌ನಿಂದ ಮಂಗಳೂರಿಗೆ ಬರುವ ನೀರಿನ ಪೈಪ್‌ಲೈನ್ ಭೂಮಿಯನ್ನು ಒತ್ತುವರಿ ಮಾಡಿಕೊಂಡಿರುವ ವಿಷಯಕ್ಕೆ ಸಂಬಂಧಪಟ್ಟಂತೆ ನಡೆದ ಚರ್ಚೆಯಲ್ಲಿ ಒತ್ತುವರಿಯನ್ನು ಏಳು ದಿನಗಳೊಳಗೆ ತೆರವುಗೊಳಿಸಲು ಬೇಕಾದ ಯೋಜನೆಯನ್ನು ರೂಪಿಸುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದರು.

 ಪಡೀಲ್ ನಿಂದ ತುಂಬೆಗೆ ಹೋಗುವಾಗ ಪೈಪ್‌ಲೈನ್ ಸ್ಪಷ್ಟವಾಗಿ ಕಾಣಿಸುವಂತಿರಬೇಕು. ಪಡೀಲ್ ನಿಂದ ಕಾಮಗಾರಿಯನ್ನು ಕೂಡಲೆ ಆರಂಭಿಸುವ ಯೋಜನೆಯನ್ನು ರೂಪಿಸಬೇಕು . ಗಂಭಿರವಾಗಿ ಈ ಬಗ್ಗೆ ಯೋಜನೆಯನ್ನು ರೂಪಿಸಿ ಎಂದು ಅವರು ಹೇಳಿದರು. ಇದಕ್ಕೆ ಸಂಬಂಧಪಟ್ಟಂತೆ ತಂಡ ಮಾಡಿ ಕಾರ್ಯ ಯೋಜನೆ ರೂಪಿಸಿಕೊಳ್ಳಿ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News