ಮಂಗಳೂರು : ಪಡುಮಲೆಯಲ್ಲಿ ‘ದೇಯಿಬೈದೆದಿ’ ಔಷಧಿವನ ಶೀಘ್ರ ಉದ್ಘಾಟನೆ: ಸಚಿವ ರೈ
ಮಂಗಳೂರು, ಮಾ.27: ಕೋಟಿ ಚೆನ್ನಯ್ಯರ ಜನ್ಮ ಸ್ಥಳವಾದ ಪಡು ಮಲೆಯಲ್ಲಿ ದೇಯಿ ಬೈದೆದಿ ಹೆಸರಿನಲ್ಲಿ ಔಷಧಿ ವನ ನಿರ್ಮಾಣಗೊಂಡು ಉದ್ಘಾಟನೆಗೆ ಸಜ್ಜಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ತಿಳಿಸಿದರು.
ಅವರು ಇಂದು ನಗರದ ತಣ್ಣೀರು ಬಾವಿಯಲ್ಲಿ ಅರಣ್ಯ ಇಲಾಖೆಯ ಮಂಗಳೂರು ವಿಭಾಗದ ವತಿಯಿಂದ ನಿರ್ಮಿಸಲಾದ ಸಸ್ಯೋದ್ಯಾನ (ಟ್ರೀಪಾರ್ಕ್)ವನ್ನು ಉದ್ಘಾಟಿಸಿ ಅಲ್ಲಿನ ವಿವಿಧ ಸೌಲಭ್ಯ ಹಾಗೂ ಆಕರ್ಷಣೆಗಳಿಗೆ ಚಾಲನೆ ನೀಡಿ ಮಾತನಾಡಿದರು.
ಕುಂದಾಪುರದ ವಂಡಾರುವಿನಲ್ಲೂ ಸಿರಿಚಂದನ ವನ, ಬಡಗಬೆಟ್ಟುವಿನಲ್ಲಿ ಟ್ರೀಪಾರ್ಕ್ ಮಾಡಲಾಗುತ್ತಿದೆ. ಪಿಲಿಕುಳದ ಡಾ. ಶಿವರಾಮ ಕಾರಂತ ನಿಸರ್ಗಧಾಮದಲ್ಲಿ 5 ಕೋಟಿ ರೂ. ವೆಚ್ಚದ ಅರ್ಬನ್ ಇಕೋ ಪಾರ್ಕ್‌ಗೆ ಇನ್ನಷ್ಟು ಅನುದಾನದ ಅಗತ್ಯವಿರುವ ಬೇಡಿಕೆ ಬಂದಿದ್ದು, 10 ಕೋಟಿ ರೂ. ವೆಚ್ಚದಲ್ಲಿ ಆ ಕಾಮಗಾರಿಯನ್ನು ಮಾಡಲಾಗುವುದು ಎಂದು ಅವರು ಈ ಸಂದರ್ಭ ತಿಳಿಸಿದರು.
ಕ್ರೀಡಾ ಸಚಿವ ಅಭಯಚಂದ್ರ ಜೈನ್ ಮಾತನಾಡಿ, ಕರಾವಳಿ ಜಿಲ್ಲೆಗಳಲ್ಲಿ ಸಾಹಸ ಕ್ರೀಡೆಗಳಿಗೆ ಪ್ರಸಕ್ತ ಬಜೆಟ್‌ನಲ್ಲಿ 6 ಕೋಟಿ ರೂ ಒದಗಿಸಲಾಗಿದೆ. 1 ಕೋಟಿ ರೂ. ವೆಚ್ಚದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸರ್ಫಿಂಗ್, ಬೋಟಿಂಗ್ ಯೋಜನೆಗೆ ಪೂರಕವಾದ ಕ್ರಮ ಕೈಗೊಳ್ಳಲಾಗುವುದು ಎಂದರು.
ಪಿಲಿಕುಳದಲ್ಲಿ 20 ಕೋಟಿ ರೂ. ವೆಚ್ಚದಲ್ಲಿ ಮೆರಿನ್ ಅಕ್ವೇರಿಯಂ ರಚನೆಯಾಗಲಿದ್ದು, ಹೆಚ್ಚಿನ ಅನುದಾನ ಬೇಕಿದ್ದಲ್ಲಿ ಮುಂದಿನ ಬಜೆಟ್‌ನಲ್ಲಿ ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.
ಶಾಸಕರಾದ ಜೆ.ಆರ್.ಲೋಬೊ, ಐವನ್ ಡಿಸೋಜ, ಮೂಡಾ ಅಧ್ಯಕ್ಷ ಇಬ್ರಾಹಿಂ ಕೋಡಿಜಾಲ್, ಪಾಲಿಕೆ ಸದಸ್ಯ ರಘವೀರ್, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಾದ ವಿನಯ ಲೂಥ್ರ, ಡಾ. ರವಿರಾಲ್ಫ್, ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಕಿಶನ್ ಸಿಂಗ್ ಸುಗಾರ, ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ, ಎಪಿಎಂಸಿ ಅಧ್ಯಕ್ಷ ಮೋನಪ್ಪ ಶೆಟ್ಟಿ, ಕೆಎಫ್‌ಡಿಸಿ ಕಾರ್ಯನಿರ್ವಾಹಕ ನಿರ್ದೇಶಕಿ ಸ್ಮಿತಾ ಬಿಜ್ಜೂರು, ಬ್ಯಾರಿ ಅಕಾಡೆಮಿ ಅಧ್ಯಕ್ಷ ಮುಹಮ್ಮದ್ ಹನೀಫ್ ಮೊದಲಾದವರು ಉಪಸ್ಥಿತರಿದ್ದರು.
ಮಂಗಳೂರು ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಡಾ. ಸಂಜಯ್ ಎಸ್ ಬಿಜ್ಜೂರು ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ.ಕೆ.ಟಿ. ಹನುಮಂತಪ್ಪ ಸ್ವಾಗತಿಸಿದರು.
ಎಪ್ರಿಲ್ 5ರವರೆಗೆ ಮುಕ್ತ ಪ್ರವೇಶ
ಟ್ರೀಪಾರ್ಕ್‌ಗೆ ಸಾರ್ವಜನಿಕರಿಗೆ ಏಪ್ರಿಲ್ 5ರವರೆಗೆ ಮುಕ್ತ ಪ್ರವೇಶಾವಕಾಶವಿದೆ. ಬಳಿಕ ನಿರ್ವಹಣೆಯ ಬಗ್ಗೆ ಸ್ಥಳೀಯ ಜನಪ್ರತಿನಿಧಿಗಳು, ಅಧಿಕಾರಿಗಳು, ಸರಕಾರತೇತರ ಸಂಸ್ಥೆಗಳ ಸಮಿತಿ ರಚಿಸಿ ಯಾವ ರೀತಿಯಲ್ಲಿ ನಿರ್ವಣೆ ಮಾಡಬೇಕೆಂಬ ಬಗ್ಗೆ ತೀರ್ಮಾನಿಸಲಾಗುವುದು ಎಂದು ಸಚಿವ ರೈ ತಿಳಿಸಿದ್ದಾರೆ.
ನಿಸರ್ಗ- ಸಾಹಸ- ಸಂಸ್ಕೃತಿ- ಜಾಗೃತಿಯನ್ನು ಮೇಳೈಸುವ ಟ್ರೀಪಾರ್ಕ್!
ಸುಮಾರು 35 ಎಕರೆ ಭೂ ಪ್ರದೇಶದಲ್ಲಿ ತುಳುನಾಡಿನ ಸಂಸ್ಕೃತಿ, ಪಾಕೃತಿಕ ವೈಭವ, ಸಾಹಸ ಕ್ರೀಡೆಗಳು ಹಾಗೂ ಜಾಗೃತಿಯನ್ನು ಮೇಳೈಸುವ ಕೇಂದ್ರವಾಗಿ ರೂಪುಗೊಂಡಿದೆ ಟ್ರೀಪಾರ್ಕ್ (ಸಸ್ಯೋದ್ಯಾನ).
ಟ್ರೀಪಾರ್ಕ್ ಪ್ರವೇಶಿಸುತ್ತಿರುವಂತೆಯೇ ಮರಗಳನ್ನು ಮಹತ್ವದ ಬಗ್ಗೆ ಜಾಗೃತಿ ಮೂಡಿಸುವ ಸುಂದರವಾದ ಮರದ ಕೆತ್ತನೆಯಂತಹ ಚಿತ್ರಣ, ವೀಕ್ಷಣಾ ಗೋಪುರ, ಕಾಡುಜನರ ವಿಶೇಷ ಸ್ತಬ್ದಚಿತ್ರ, ಅರಣ್ಯದೊಳಗೆ ಪ್ರವೇಶವಾದಂತೆ ಭಾಸವಾಗುವ ಕಾಲುನಡಿಗೆಯಲ್ಲಿ ಸಾಗಲು ದಾರಿ, ಸಾಗುತ್ತಿರುವಂತೆಯೇ ಋಷಿವನ, ಸುತ್ತಮುತ್ತ ಔಷಧೀಯ ಗಿಡಗಳಳನ್ನು ಕಾಣಬಹುದು. ಉದ್ಯಾವನದ ಒಟ್ಟು 9 ಎಕರೆ ಜಾಗದಲ್ಲಿ ವಿವಿಧ ಸಸ್ಯ ಪ್ರಭೇದಗಳಿವೆ. 3 ಎಕರೆ ಪ್ರದೇಶದಲ್ಲಿ ಔಷಧೀಯ ಸಸ್ಯಗಳಿವೆ. ಸಾರ್ವಜನಿಕರಿಗೆ ಫುಟ್‌ಪಾತ್, ಕುಳಿತುಕೊಳ್ಳುವ ಆಸನಗಳು ಮತ್ತಿತರ ಸೌಕಾರ್ಯಗಳು, ಲಘ ಉಪಹಾರ ಕೇಂದ್ರಗಳು, ಮಕ್ಕಳಿಗಾಗಿ ವಿಶೇಷ ಪಾರ್ಕ್ ಸೌಲಭ್ಯ, ಸಮುದ್ರ ವೀಕ್ಷಣೆಯ ಅವಕಾಶ, ವಾಲಿಬಾಲ್ ಕೋರ್ಟ್, ಉದ್ಯಾನವನದಲ್ಲಿರುವ ಎಲ್ಲಾ ವೈವಿಧ್ಯತೆಗಳು, ಸಸ್ಯಗಳ ಬಗ್ಗ ಸಮಗ್ರ ಮಾಹಿತಿಯೂ ಇಲ್ಲಿ ಲಭ್ಯವಿದೆ. ತುಳುನಾಡಿನ ವಿಶೇಷ ಸಾಂಸ್ಕೃತಿಕ ವೈಭವವಾದ ಕಂಬಳ, ಯಕ್ಷಗಾನ ಹಾಗೂ ಭೂತಾರಾಧಾನೆಯನ್ನು ಪ್ರತಿಬಿಂಬಿಸುವ ಸ್ತಬ್ಧ ಚಿತ್ರಗಳು ಜೀವತಳೆದಂತಿವೆ.
ಉದ್ಯಾನವದದಿಂದ ಸಮುದ್ರ ಕಿನಾರೆಗೆ ಸಾಗಲು ದ್ವಾರವನ್ನು ಕಲ್ಪಿಸಲಾಗಿದ್ದು, ಇಲ್ಲಿ ಜಲಸಾಹಸ ಕ್ರೀಡೆಗಳಿಗೂ ಅವಕಾಶವಿದೆ. ಬೀಚ್ ವಾಲಿಬಾಲ್‌ಗೆ ಕೋರ್ಟ್ ಕೂಡಾ ರಚಿಸಲಾಗಿದೆ.