ಪಾಕ್‌ನಲ್ಲಿ ಬಂಧಿತ ಮಾಜಿ ಅಧಿಕಾರಿ ‘ರಾ’ ಏಜೆಂಟ್ ಅಲ್ಲ: ಭಾರತ ಸ್ಪಷ್ಟನೆ
ಹೊಸದಿಲ್ಲಿ, ಮಾ.26: ಪಾಕಿಸ್ತಾನವು ಬಲೂಚಿಸ್ತಾನದಲ್ಲಿ ಬಂಧಿಸಿದೆಯೆಂದು ಪ್ರತಿಪಾದಿಸಿರುವ ಭಾರತೀಯ ನೌಕಾದಳದ ಮಾಜಿ ಅಧಿಕಾರಿ ತನ್ನ ವಿದೇಶಿ ಗುಪ್ತಚರ ಸಂಸ್ಥೆ ‘ರಾ’ದ ಅಧಿಕಾರಿಯೆಂಬ ಆರೋಪವನ್ನು ಭಾರತ ತಳ್ಳಿಹಾಕಿದೆ. ಬಂಧಿತ ವ್ಯಕ್ತಿಗೆ ಭಾರತೀಯ ರಾಯಭಾರಿಗಳೊಂದಿಗೆ ಮಾತನಾಡಲು ಅವಕಾಶ ನೀಡುವಂತೆ ಅದು ಪಾಕಿಸ್ತಾನವನ್ನು ಆಗ್ರಹಿಸಿದೆ.
ಪ್ರಕೃತ ದುಬೈಯಲ್ಲಿ ಸಣ್ಣದೊಂದು ಕಾರ್ಗೊ ವ್ಯವಹಾರವನ್ನು ನಡೆಸುತ್ತಿರುವ ನೌಕಾದಳದ ಮಾಜಿ ಅಧಿಕಾರಿಯನ್ನು ಬಲೂಚಿಸ್ತಾನದಲ್ಲಿ ಬಂಧಿಸಿರುವ ಬಗ್ಗೆ ಯಾವುದೇ ಪುರಾವೆಯಿಲ್ಲ. ಆತ ಪಾಕಿಸ್ತಾನದ ಜಲದೊಳಗೆ ಪ್ರವೇಶಿಸಿದ ಬಳಿಕ ಬಹುಶಃ ಅವರು ಬಂಧಿಸಿರಬಹುದು. ಸತ್ಯವೇನೆಂದು ತಿಳಿಯಲು ಭಾರತವು ಆ ಮಾಜಿ ಅಧಿಕಾರಿಯನ್ನು ಪ್ರಶ್ನಿಸಬಯಸಿದೆಯೆಂದು ಸರಕಾರಿ ಮೂಲಗಳು ಎನ್‌ಡಿಟಿವಿಗೆ ತಿಳಿಸಿವೆ.
ಬಂಧಿತ ವ್ಯಕ್ತಿ ನೌಕಾ ಪಡೆಯಲ್ಲಿ ಕೆಲಸ ಮಾಡುತ್ತಿದ್ದರೆಂದು ಭಾರತವು ನಿನ್ನೆ ಒಪ್ಪಿಕೊಂಡಿದ್ದರೂ ಆತ ‘ರಾ’ ಏಜೆಂಟ್ ಎಂಬುದನ್ನು ನಿರಾಕರಿಸಿತ್ತು.
ಆ ವ್ಯಕ್ತಿ ಭಾರತೀಯ ನೌಕಾದಳದಿಂದ ಅವಧಿಪೂರ್ವ ನಿವೃತ್ತಿ ಪಡೆದಿದ್ದಾರೆ. ಆದುದರಿಂದ, ಅವರಿಗೂ ಸರಕಾರಕ್ಕೂ ಯಾವುದೇ ಸಂಬಂಧವಿಲ್ಲವೆಂದು ವಿದೇಶಾಂಗ ಸಚಿವಾಲಯವು ಹೇಳಿಕೆಯೊಂದರಲ್ಲಿ ಸ್ಪಷ್ಟಪಡಿಸಿತ್ತು.
ಬಲೂಚಿಸ್ತಾನದಲ್ಲಿ ಗುರುವಾರ ನಡೆಸಿದ ದಾಳಿಯೊಂದರಲ್ಲಿ ಕುಲಭೂಷಣ ಜಾಧವ್ ಎಂಬ ಮಾಜಿ ಅಧಿಕಾರಿಯನ್ನು ಬಂಧಿಸಲಾಗಿದೆಯೆಂದು ಪಾಕಿಸ್ತಾನದ ಮಾಧ್ಯಮಗಳು ಹೇಳಿದ್ದು, ಭಾರತೀಯ ಗೂಢಚಾರ ಬಲೂಚಿಸ್ತಾನದಲ್ಲಿ ಭಯೋತ್ಪಾದನೆ ಹಾಗೂ ಬುಡಮೇಲು ಕೃತ್ಯಗಳನ್ನು ಪ್ರಾಯೋಜಿಸುತ್ತಿದ್ದನೆಂದು ಪ್ರತಿಪಾದಿಸಿವೆ.
ಇಸ್ಲಾಮಾಬಾದ್‌ನಲ್ಲಿ ಭಾರತೀಯ ರಾಯಭಾರಿ ಗೌತಮ್ ಬಿಂಬವಾಲೆಯವರಿಗೆ ಸಮನ್ಸ್ ಕಳುಹಿಸಿದ ಪಾಕಿಸ್ತಾನ, ಕುಲಭೂಷಣ ಜಾಧವ್ ಕರಾಚಿಯಲ್ಲಿ ಭಯೋತ್ಪಾದಕ ದಾಳಿ ಹಾಗೂ ಬಲೂಚಿಸ್ತಾನದಲ್ಲಿ ದಂಗೆಗೆ ಪ್ರಚೋದನೆ ನೀಡುತ್ತಿದ್ದರೆಂದು ಆರೋಪಿಸಿದೆ.