×
Ad

ಉಪ್ಪಿನಂಗಡಿ : ಚಿಕಿತ್ಸೆ ಫಲಕಾರಿಯಾಗದೆ ವಿದ್ಯಾರ್ಥಿನಿ ನಿಧನ

Update: 2016-03-26 19:39 IST

ಉಪ್ಪಿನಂಗಡಿ: ಇಲ್ಲಿನ ರೋಯಲ್ ಕಾಂಪ್ಲೆಕ್ಸ್ ನಿವಾಸಿ ಅಬ್ದುಲ್ ಜಲೀಲ್ ಇಫ್ತಿಕಾರ್ ಎಂಬವರ ಪುತ್ರಿ, ಇಂದ್ರಪ್ರಸ್ಥ ವಿದ್ಯಾಲಯದ ಎಸೆಸ್ಸೆಲ್ಸಿ ವಿದ್ಯಾರ್ಥಿನಿ ಫಾತಿಮಾ ಜಸೀಲ (15) ಕೆಲ ದಿನಗಳ ಅನಾರೋಗ್ಯದಿಂದ ಶನಿವಾರ ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಅಪರೂಪದ ಎಸ್‌ಎಲ್‌ಇ ಕಾಯಿಲೆಗೆ ತುತ್ತಾಗಿದ್ದ ಈಕೆ ಕೆಲ ದಿನಗಳಿಂದ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಇಂದು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದರು.

ಪ್ರತಿಭಾವಂತ ವಿದ್ಯಾರ್ಥಿನಿ: ಪ್ರತಿಭಾವಂತ ವಿದ್ಯಾರ್ಥಿನಿಯಾಗಿದ್ದ ಈಕೆ ಕಲಿಕೆಯಲ್ಲಿ ಮುಂದಿದ್ದು, ತನ್ನ ಅನಾರೋಗ್ಯವನ್ನೂ ಲೆಕ್ಕಿಸದೆ ಔಷಧಿಯೊಂದಿಗೆ ಶಾಲೆಗೆ ಬಂದು ಓದಿನಲ್ಲಿ ತೊಡಗಿಸಿಕೊಂಡಿದ್ದಳು. ಅಲ್ಲದೇ, ಈ ಬಾರಿ ನಡೆಯಲಿರುವ ಎಸೆಸ್ಸೆಲ್ಸಿ ಪರೀಕ್ಷೆಗೂ ಸಾಕಷ್ಟ ಪೂರ್ವ ತಯಾರಿಯನ್ನು ನಡೆಸಿದ್ದಲ್ಲದೆ, ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದುವ ಆಶಾಭಾವವನ್ನು ತನ್ನ ಸಹಪಾಠಿಗಳಲ್ಲಿ ವ್ಯಕ್ತಪಡಿಸಿದ್ದಳು ಎಂದು ಹೇಳಲಾಗಿದೆ. ಮೃತಳ ತಂದೆಯ ಮೂಲ ಮನೆಯಾದ ಅಡ್ಡೂರು ಕಣ್ಣೂರಿನಲ್ಲಿ ಮೃತಳ ಅಂತಿಮ ಕಾರ್ಯ ನಡೆಸಲಾಯಿತು. ಮೃತಳು ತಂದೆ, ತಾಯಿ ಹಾಗೂ ಇಬ್ಬರು ಸಹೋದರಿಯರನ್ನು ಅಗಲಿದ್ದಾಳೆ.

ಸಂತಾಪ ಸಭೆ, ವಿದ್ಯಾಲಯಕ್ಕೆ ರಜೆ: ಸಂಸ್ಥೆಯ ವಿದ್ಯಾರ್ಥಿನಿ ಫಾತಿಮಾ ಜಸೀಲ ನಿಧನರಾದ ಸುದ್ದಿ ತಿಳಿದು ಇಂದ್ರಪ್ರಸ್ಥ ವಿದ್ಯಾಲಯದಲ್ಲಿ ಸಂತಾಪ ಸೂಚಕ ಸಭೆ ನಡೆಸಿ, ಮೃತಳ ಗೌರವಾರ್ಥ ಶಾಲೆಗೆ ರಜೆ ಸಾರಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News