×
Ad

ದ.ಕ. ಜಿಲ್ಲೆಯ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಉದಾಸೀನ ಬೇಡ: ಸಚಿವ ರೈ ಎಚ್ಚರಿಕೆ

Update: 2016-03-26 19:49 IST

ಮಂಗಳೂರು, ಮಾ. 26: ದ.ಕ. ಜಿಲ್ಲೆಯ ಯಾವುದೇ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾದಾಗ ಆದ್ಯತೆ ನೆಲೆಯಲ್ಲಿ ಬಗೆಹರಿಸಲು ಪ್ರಯತ್ನಿಸಬೇಕು. ಯಾವುದೇ ರೀತಿಯಲ್ಲಿ ಉದಾಸೀನ ತೋರಬಾರದು ಎದು ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಅಧಿಕಾರಿಗಳನ್ನು ಎಚ್ಚರಿಸಿದ್ದಾರೆ.

ದ.ಕ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಪರಿಹರಿಸುವ ಕುರಿತಂತೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ತುರ್ತು ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು 6.39 ಕೋ.ರೂ. ಸರಕಾರದಿಂದ ಮಂಜೂರಾಗಿದೆ. ಪ್ರತೀ ವಿಧಾನಸಭಾ ಕ್ಷೇತ್ರಗಳಿಗೆ ತಲಾ 50 ಲಕ್ಷ ರೂ.ಗಳಂತೆ ಒಟ್ಟು 3.50 ಕೋ.ರೂ. ಹಾಗೂ ಜಿಲ್ಲೆಯ ನಗರಾಡಳಿತ ಪ್ರದೇಶಗಳಿಗೆ 2.89 ಕೋ.ರೂ. ಬಿಡುಗಡೆ ಮಾಡಲಾಗಿದೆ ಎಂದರು.

ಇನ್ನೆರಡು ತಿಂಗಳು ಕುಡಿಯುವ ನೀರಿನ ಸಮಸ್ಯೆ ತಲೆದೋರಲಿದೆ. ನೀರು ಬಿಡುವ ಸಿಬ್ಬಂದಿಗಳು ಕೂಡಾ ಎಚ್ಚರಿಕೆಯಿಂದ ಕಾರ್ಯ ನಿರ್ವಹಿಸಬೇಕು. ನೀರಿನ ಸಮಸ್ಯೆ ಉಂಟಾದ ಬಗ್ಗೆ ದೂರು ಬಂದಲ್ಲಿ ಪುರಸಭೆ, ನಗರಸಭೆ, ಪಾಲಿಕೆ ಆಯುಕ್ತರನ್ನೇ ಜವಾಬ್ಧಾರನ್ನಾಗಿಸಲಾಗುವುದು ಎಂದು ಅವರು ಹೇಳಿದರು.

ಮಂಗಳೂರು ತಾಲೂಕಿನಲ್ಲಿ ನೀರಿನ ಸಮಸ್ಯೆ ಕಂಡುಬಂದಿರುವ ಕೊಣಾಜೆ, ಅಸೈಗೋಳಿ ಹಾಗೂ ಮನ್ನಬೆಟ್ಟುವಿಗೆ ಟ್ಯಾಂಕರ್ ನೀರು ಈಗ ನೀಡಲಾಗುತ್ತಿದೆ. ಬಂಟ್ವಾಳ ತಾಲೂಕಿನ ನರಿಂಗಾನ ಬಾಳೆಪುಣಿ, ಕಾವಳ ಪಡೂರುವಿನಲ್ಲಿ ನೀರಿನ ಸಮಸ್ಯೆ ಕಾಡಲಾರಂಭಿಸಿದೆ. ಪುರಸಭೆ ವ್ಯಾಪ್ತಿಯ ಪುತ್ತೂರು, ಉಳ್ಳಾಲದಲ್ಲಿಯೂ ನೀರಿನ ಕೊರತೆ ಉಂಟಾಗಿದೆ ಎಂದವರು ಹೇಳಿದರು.

ಕೊಳವೆ ಬಾವಿ ದುರಸ್ತಿಗೆ ಸೂಚನೆ

ಕೋಟೆಕಾರು, ವಿಟ್ಲ ಪಟ್ಟಣ ಪಂಚಾಯತ್, ಬೆಳ್ತಂಗಡಿ ತಾ.ಪಂ. ಸೇರಿದಂತೆ ಕೆಲವು ಭಾಗಗಳಲ್ಲಿ ಈಗಾಗಲೇ ತೆರೆದಿರುವ ಕೊಳವೆಬಾವಿಗಳು ಬತ್ತಿ ಹೋಗಿದೆ. ಅದನ್ನು ದುರಸ್ತಿಗೊಳಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಚಿವ ರೈ ಸಭೆಯಲ್ಲಿ ಸೂಚಿಸಿದರು. ಪಂಪ್‌ಗಳ ದುರಸ್ತಿ, ಇದಕ್ಕೆ ವಿದ್ಯುತ್ ಜೋಡಣೆ ಸೇರಿದಂತೆ ಎಲ್ಲಾ ಮೂಲಭೂತ ಅಂಶಗಳು ತುರ್ತು ನೆಲೆಯಲ್ಲಿ ಆದ್ಯತೆಗೆ ಆನುಗುಣವಾಗಿ ಮಾಡಬೇಕು ಎಂದು ಸಚಿವ ರಮಾನಾಥ ರೈ ಸೂಚಿಸಿದರು.

ಸಚಿವ ಅಭಯಚಂದ್ರ ಜೈನ್, ಶಾಸಕ ಮೊದಿನ್ ಬಾವ, ಮೇಯರ್ ಹರಿನಾಥ್, ಮೂಡಾ ಅಧ್ಯಕ್ಷ ಇಬ್ರಾಹಿಂ ಕೋಡಿಜಾಲ್, ದ.ಕ. ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ, ಜಿ.ಪಂ. ಸಿಇಓ ಶ್ರೀವಿದ್ಯಾ ಉಪಸ್ಥಿತರಿದ್ದರು.

ನೀರಿನ ಸಮಸ್ಯೆ ಸಭೆಯಲ್ಲಿ ಮಂಗಳೂರು ಡೇ ಔಟ್‌ನ ಚರ್ಚೆ!

ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಆಯೋಜಿಸಲಾದ ಸಭೆಯಲ್ಲಿ ‘ಮಂಗಳೂರು ಡೇ ಔಟ್’ ಎಂಬ ವಿಶೇಷ ಕಾರ್ಯಕ್ರಮವೊಂದನ್ನು ನಡೆಸುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು.

ಬೆಂಗಳೂರಿನಲ್ಲಿ ಇತ್ತೀಚೆಗೆ ಪ್ರವಾಸೋದ್ಯಮ ಇಲಾಖೆ ಆಶ್ರಯದಲ್ಲಿ ರಸ್ತೆಯೊಂದನ್ನು ಸಂಪೂರ್ಣ ಒಂದು ದಿನ ಸಂಚಾರ ಮುಕ್ತಗೊಳಿಸಿ ವಿವಿಧ ಕಾರ್ಯಕ್ರಮಗಳನ್ನು ಏರ್ಪಡಿಸುವ ಮೂಲಕ ಮಂಗಳೂರು ಹಬ್ಬದ ರೀತಿಯಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳುವ ಚಿಂತನೆ ಇದು ಎಂದು ಜಿಲ್ಲಾಧಿಕಾರಿ ಎ.ಬಿ. ಇಬ್ರಾಹೀಂ ಆರಂಭದಲ್ಲಿ ಮಾಹಿತಿ ನೀಡಿದರು.

ಬೆಂಗಳೂರಿನ ಪ್ರತಿನಿಧಿಯೊಬ್ಬರು, ಮಂಗಳೂರಿನಲ್ಲಿ ಯಾವ ರೀತಿಯಲ್ಲಿ ಈ ‘ಮಂಗಳೂರು ಡೇ ಔಟ್’ ಹೆಸರಿನಲ್ಲಿ ಈ ಉತ್ಸವವನ್ನು ಮಾಡಬಹುದು ಎಂಬ ಬಗ್ಗೆ ಮಾಹಿತಿ ನೀಡಿದರು. ತುಳುನಾಡಿನ ವಿವಿಧ ಸಂಸ್ಕೃತಿ, ಕಲೆ, ಆಚಾರ ವಿಚಾರಗಳ ಜತೆ ಮನರಂಜನೆಯ ಕಾರ್ಯಕ್ರಮವನ್ನು ಒದಗಿಸುವುದು ಈ ಉತ್ಸವದ ಉದ್ದೇಶವಾಗಿದೆ. ಬೆಂಗಳೂರಿನಲ್ಲಿ ಸುಮಾರು 3 ಕೋಟಿ ರೂ. ವೆಚ್ಚದಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದ್ದು, ಮಂಗಳೂರಿನಲ್ಲಿ 39 ಲಕ್ಷ ರೂ. ವೆಚ್ಚದಲ್ಲಿ ವಿವಿಧ ಸಂಸ್ಥೆಗಳ ಸಹಕಾರದೊಂದಿಗೆ ಮಾಡಲು ಅಂದಾಜಿಸಲಾಗಿದೆ ಎಂದು ಅವರು ತಿಳಿಸಿದರು.

ಲೇಡಿಹಿಲ್‌ನಿಂದ ಸಾಯಿಬೀನ್ ಕಾಂಪ್ಲೆಕ್ಸ್‌ವರೆಗಿನ ರಸ್ತೆಯನ್ನು ಒಂದು ರವಿವಾರದಂದು ಸಂಪೂರ್ಣ ಸಂಚಾರ ಮುಕ್ತಗೊಳಿಸಿ ವಾಹನಗಳ ಸಂಚಾರಕ್ಕೆ ಪರ್ಯಾಯ ವ್ಯವಸ್ಥೆಯನ್ನು ಕಲ್ಪಿಸುವ ಮೂಲಕ ಈ ಉತ್ಸವವನ್ನು ಹಮ್ಮಿಕೊಳ್ಳಬಹುದು ಎಂದು ಜಿಲ್ಲಾಧಿಕಾರಿ ಎ.ಬಿ. ಇಬ್ರಾಹೀಂ ಸಲಹೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News