ದಯವಿಟ್ಟು ನಿಮ್ಮ ಮಕ್ಕಳಿಗೆ ಬುದ್ದಿ ಹೇಳಿ
ಹೈದರಾಬಾದ್ , ಮಾ. 26 :ರೋಹಿತ್ ವೇಮುಲ ಆತ್ಮಹತ್ಯೆಯ ಬಳಿಕ ವಿದ್ಯಾರ್ಥಿಗಳ ಆಕ್ರೋಶಕ್ಕೆ ಗುರಿಯಾಗಿರುವ ಹೈದರಾಬಾದ್ ವಿವಿಯ ಉಪಕುಲಪತಿ ಅಪ್ಪಾ ರಾವ್ ಇದೀಗ ವಿವಿಯಲ್ಲಿ ಸಾಮಾನ್ಯ ಸ್ಥಿತಿ ತರಲು ವಿದ್ಯಾರ್ಥಿಗಳ ಹೆತ್ತವರ ಮೊರೆ ಹೋಗಿದ್ದಾರೆ.
" ವಿವಿಯ ಆಡಳಿತ ನಿಮ್ಮ ಸಹಕಾರ ಕೋರುತ್ತಿದೆ. ನೀವು ನಿಮ್ಮ ಮಕ್ಕಳಿಗೆ ವಿವಿಗೆ ಕೆಟ್ಟ ಹೆಸರು ತರುವ ಯಾವುದೇ ಚಟುವಟಿಕೆಯನ್ನು ನಡೆಸದಂತೆ ಕಿವಿಮಾತು ಹೇಳಿ. ವಿವಿಯು ಯಾವತ್ತೂ ಅಭಿವ್ಯಕ್ತಿ ಹಾಗು ವಾಕ್ ಸ್ವಾತಂತ್ರ್ಯಕ್ಕೆ ಮನ್ನಣೆ ನೀಡಿದೆ. ಭಿನ್ನಾಭಿಪ್ರಾಯವನ್ನು ಎಂದಿಗೂ ಇಲ್ಲಿ ತಡೆದಿಲ್ಲ. ಆದರೆ ಗೂಂಡಾಗಿರಿ ಹಾಗು ಅಶಿಸ್ತನ್ನು ವಿವಿ ಸಹಿಸಿಕೊಳ್ಳುವುದಿಲ್ಲ. ಇಲ್ಲಿ ಎಲ್ಲ ವಿಭಾಗ ಹಾಗು ಹಂತಗಳಲ್ಲಿ ವಿದ್ಯಾರ್ಥಿಗಳ ಸಮಸ್ಯೆಯನ್ನು ಆಲಿಸಿ , ಪರಿಹರಿಸುವ ವ್ಯವಸ್ಥೆ ಇದೆ. ಹಾಗಾಗಿ ನೀವು ನಿಮ್ಮ ಮಕ್ಕಳೊಂದಿಗೆ ಸಂಪರ್ಕದಲ್ಲಿದ್ದು ಅವರ ಸಮಸ್ಯೆಗಳಿಗೆ ಅವರವರ ವಿಭಾಗಗಳಲ್ಲೇ ಇರುವ ಈ ವ್ಯವಸ್ಥೆಯಲ್ಲಿ ಪರಿಹಾರ ಕಂಡುಕೊಳ್ಳಲು ಉತ್ತೇಜಿಸಿ. ವಿವಿಯು ಯಾವತ್ತೂ ವಿದ್ಯಾರ್ಥಿಗಳ ಪರ ಇದೆ ಹಾಗು ಅದು ತನ್ನ ಜವಾಬ್ದಾರಿಯಿಂದ ನುಣುಚಿಕೊಳ್ಳದು " ಎಂದು ಅಪ್ಪಾ ರಾವ್ ಪ್ರಕಟಣೆಯಲ್ಲಿ ಹೇಳಿದ್ದಾರೆ.