ಮಂಗಳೂರು ವಿ.ವಿ ಗೆ 210 ಕಾಲೇಜುಗಳ ಸಂಯೋಜನೆ; ನಾಲ್ಕು ಹೊಸ ಕಾಲೇಜುಗಳಿಗೆ ಮಾನ್ಯತೆ
ಮಂಗಳೂರು, ಮಾ, 26: ಮಂಗಳೂರು ವಿಶ್ವ ವಿದ್ಯಾನಿಲಯಕ್ಕೆ ಸಂಬಂಧಿಸಿದಂತೆ ಕುಲಪತಿ ಕೆ.ಭೈರಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಶೈಕ್ಷಣಿಕ ಮಂಡಳಿಯ ಸಭೆಯಲ್ಲಿ ಹೊಸದಾಗಿ ನಾಲ್ಕು ಕಾಲೇಜುಗಳಿಗೆ ಮಾನ್ಯತೆ ನೀಡಲಾಯಿತು.
ಇಂದು ನಡೆದ ವಿಶ್ವ ವಿದ್ಯಾನಿಲಯದ ಶೈಕ್ಷಣಿಕ ಮಂಡಳಿಯ ಸಭೆಯಲ್ಲಿ ವಿವಿಧ ಕಾಲೇಜುಗಳ ಸಂಯೋಜನೆಯನ್ನು ನವೀಕರಿಸಲು ಸಭೆಯಲ್ಲಿ ಅನುಮೋದನೆ ನೀಡಲಾಯಿತು.ಇದರೊಂದಿಗೆ ನಾಲ್ಕು ಹೊಸ ಕಾಲೇಜುಗಳನ್ನು ಸಂಯೋಜನೆ ಗಳಿಸುವ ಮೂಲಕ ಮಂಗಳೂರು ವಿಶ್ವ ವಿದ್ಯಾನಿಲಯ ಪ್ರಸಕ್ತ 214 ಕಾಲೇಜುಗಳ ಸಂಯೋಜನೆಯನ್ನು ಹೊಂದಿದಂತಾಗಿದೆ ಎಂದು ಕುಲಪತಿ ಕೆ.ಭೈರಪ್ಪ ತಿಳಿಸಿದರು.
ಹೊಸ ಸಂಯೋಜನೆಗಾಗಿ ಸಲ್ಲಿಸಲಾಗಿದ್ದ ಏಳು ಕಾಲೇಜುಗಳ ಪೈಕಿ ತೋನ್ಸೆಯ ಸಾಲಿಹತ್ ಮಹಿಳಾ ಪ್ರಥಮ ದರ್ಜೆ ಕಾಲೇಜು, ಮಿಲಾಗ್ರಿಸ್‌ನ ಸಂಧ್ಯಾ ಕಾಲೇಜು,ಗೋಣಿ ಕೊಪ್ಪಲಿನ ಹಿಲ್ ಗ್ರೋವ್ಸ್ ಕಾಲೇಜು,ಕಾಟಿಪಳ್ಳದ ಮಿಸ್‌ಬಾ ಮಹಿಳಾ ಕಾಲೇಜು ಸೇರಿದಂತೆ ನಾಲ್ಕು ಕಾಲೇಜುಗಳ ಸಂಯೋಜನೆಗೆ ಮಂಡಳಿಯ ಸಭೆಯಲ್ಲಿ ಅನುಮೋದನೆ ನೀಡಲಾಯಿತು.ವಿಶ್ವ ವಿದ್ಯಾನಿಲಯ ವ್ಯಾಪ್ತಿಯಲ್ಲಿರುವ ಕಾಲೇೆಜುಗಳ ಪೈಕಿ ಸಾಕಷ್ಟು ಕಾಲೇಜುಗಳು ಹೊಸ ಕೋರ್ಸುಗಳು ಹಾಗೂ ಹೆಚ್ಚು ಸೀಟುಗಳಿಗಾಗಿ ಅನುಮತಿ ಕೋರುತ್ತವೆ.ಈ ಸಂದರ್ಭದಲ್ಲಿ ಶಿಕ್ಷಣದ ಗುಣಮಟ್ಟ ಹಾನಿಯಾಗದಂತೆ ಎಚ್ಚರ ವಹಿಸಿ ನಿರ್ದಿಷ್ಟ ಮಾನದಂಡವನ್ನು ನಿಗದಿಪಡಿಸಬೇಕು ಎಂಬ ಚರ್ಚೆ ನಡೆದು ಈ ಬಗ್ಗೆ ಮುಂದಿನ ಸಭೆಯಲ್ಲಿ ನಿರ್ಣಯ ಕೈಗೊಳ್ಳಲು ಸಭೆಯಲ್ಲಿ ನಿಧರ್ರಿಸಲಾಯಿತು.
ಕೆಲವು ಕಾಲೇಜುಗಳಲ್ಲಿ ಉಪನ್ಯಾಸಕರಿಗೆ ಅತ್ಯಂತ ಕನಿಷ್ಟ ಸಂಬಳ ನೀಡಿ ದುಡಿಸಲಾಗುತ್ತಿದೆ ಈ ಬಗ್ಗೆ ವಿಶ್ವ ವಿದ್ಯಾನಿಲಯ ಗಮನಹರಿಸಬೇಕು ಎಂದು ಸದಸ್ಯರೊಬ್ಬರು ಸಭೆಯ ಗಮನ ಸೆಳೆದರು ಈ ಬಗ್ಗೆ ಸಭೆಯಲ್ಲಿ ಚರ್ಚೆ ನಡೆದು ಅತಿಥಿ ಉಪನ್ಯಾಸಕರು,ಅರೆಕಾಲಿಕ ಉಪನ್ಯಾಸಕರಿಗೆ ಕನಿಷ್ಠ ವೇತನ ನಿಗದಿಪಡಿಸುವ ಬಗ್ಗೆ ಸರಕಾರದ ಹಿಂದಿನ ಸುತ್ತೋಲೆಯ ಪ್ರಕಾರ ಸೂಕ್ತ ಕ್ರಮ ಕೈ ಗೊಳ್ಳುವ ಬಗ್ಗೆ ಪರಿಶೀಲನೆ ನಡೆಸುವುದಾಗಿ ಕುಲಪತಿ ಭೈರಪ್ಪ ತಿಳಿಸಿದರು.
ಮಂಗಳೂರು ವಿಶ್ವ ವಿದ್ಯಾನಿಲಯದಲ್ಲಿ ಕೊಂಕಣಿ ಅಧ್ಯಯನ ಪೀಠ ಸ್ಥಾಪನೆಗೆ ಸರಕಾರ ಎರಡು ಕೋಟಿ ರೂ ಮಂಜೂರು ಮಾಡಿದೆ.ಈ ಬಗ್ಗೆ ರಚಿಸಲಾದ ಕರಡು ನಿಯಮಾವಳಿಗಳನ್ನು ಮುಂದಿನ ಶೈಕ್ಷಣಿಕ ಮಂಡಳಿಯ ಸಭೆಗೆ ಮಂಡಿಸಲು ಅಧ್ಯಕ್ಷರು ಸೂಚಿಸಿದರು.
ವೇದಿಕೆಯಲ್ಲಿ ಆಡಳಿತ ಕುಲಸಚಿವ ಕೆಂಪೇಗೌಡ,ಪರೀಕ್ಷಾಂಗ ಕುಲಸಚಿವ ಎ.ಎಂ. ಖಾನ್ ಉಪಸ್ಥಿತರಿದ್ದರು.