ಐಸಿಸ್ ವಿರುದ್ಧ ಸಮರದಲ್ಲಿ ಅಮೆರಿಕನ್ ಮುಸ್ಲಿಮರು ಪ್ರಮುಖ ಪಾಲುದಾರರು: ಬರಾಕ್ ಒಬಾಮ
ವಾಶಿಂಗ್ಟನ್,ಮಾ.26: ಮುಸ್ಲಿಂ ವಿರೋಧಿ ಹೇಳಿಕೆಗಳನ್ನು ನೀಡುತ್ತಿರುವ ಅಮೆರಿಕದ ಅಧ್ಯಕ್ಷೀಯ ಚುನಾವಣೆಯ ಆಕಾಂಕ್ಷಿ ಅಭ್ಯರ್ಥಿಗಳಾದ ಡೊನಾಲ್ಟ್ ಟ್ರಂಪ್ ಹಾಗೂ ಟೆಡ್ ಕ್ರೂಝ್ ವಿರುದ್ಧ ಶುಕ್ರವಾರ ಪರೋಕ್ಷವಾಗಿ ವಾಗ್ದಾಳಿ ನಡೆಸಿರುವ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ, ‘‘ಐಸಿಸ್ ವಿರುದ್ಧದ ಸಮರದಲ್ಲಿ ಅಮೆರಿಕನ್ ಮುಸ್ಲಿಮರು ಅತ್ಯಂತ ಪ್ರಮುಖ ಪಾಲುದಾರರಾಗಿದ್ದಾರೆ ಹಾಗೂ ಆ ಸಮುದಾಯಕ್ಕೆ ಕಳಂಕ ಹಚ್ಚುವ ಯಾವುದೇ ಪ್ರಯತ್ನವನ್ನು ನಾವು ತಿರಸ್ಕರಿಸಬೇಕಾಗಿದೆ ಎಂದು ಹೇಳಿದ್ದಾರೆ.‘‘ ಅಮೆರಿಕನ್ ಮುಸ್ಲಿಮರು, ನಮ್ಮ ದೇಶಕ್ಕೆ ಹಾಗೂ ನಮ್ಮ ಜೀವನಕ್ರಮಕ್ಕೆ ಅಪಾರ ಕೊಡುಗೆಗಳನ್ನು ನೀಡಿದ್ದಾರೆ ಎಂದಿದ್ದಾರೆ.
ಐಸಿಸ್‌ನ ದ್ವೇಷಯುತ ಹಾಗೂ ಹಿಂಸಾವಾದದ ವಿರುದ್ಧ ನಡೆಸುತ್ತಿರುವ ಸಮರದಲ್ಲಿ ಗೆಲುವು ಸಾಧಿಸುವ ದೃಢ ನಿರ್ಧಾರವನ್ನು ನಾವು ಕೈಗೊಂಡಿದ್ದೇವೆ. ಇಸ್ಲಾಂ ಧರ್ಮದ ತತ್ವಗಳನ್ನು ತಿರುಚುತ್ತಿರುವ ಐಸಿಸ್ ತನ್ನ ದುರುದ್ದೇಶ ಸಾಧನೆಗಾಗಿ ಯುವ ಮುಸ್ಲಿಮರನ್ನು ತೀವ್ರವಾದಿಗಳನ್ನಾಗಿ ಮಾಡಲು ಪ್ರಯತ್ನಿಸುತ್ತಿದೆ’’ ಎಂದು ಒಬಾಮ ತನ್ನ ವಾರದ ರೇಡಿಯೊ ಹಾಗೂ ಇಂಟರ್‌ನೆಟ್ ಭಾಷಣದಲ್ಲಿ ತಿಳಿಸಿದ್ದಾರೆ.
ಬ್ರಸೆಲ್ಸ್‌ನಲ್ಲಿ ಇತ್ತೀಚೆಗೆ ನಡೆದ ಭಯೋತ್ಪಾದಕ ದಾಳಿಗಳ ಬಳಿಕ, ಮುಸ್ಲಿಂ ಬಾಹುಳ್ಯದ ಪ್ರದೇಶಗಳ ಮೇಲೆ ಕಣ್ಗಾವಲನ್ನು ಹೆಚ್ಚಿಸಬೇಕೆಂದು ಕ್ರೂಝ್ ಕರೆ ನೀಡಿದ್ದರೆ, ಟ್ರಂಪ್ ಮುಸ್ಲಿಮರ ಅಮೆರಿಕ ಪ್ರವೇಶಕ್ಕೆ ತಾತ್ಕಾಲಿಕ ನಿಷೇಧ ವಿಧಿಸಬೇಕೆಂಬ ತನ್ನ ಬೇಡಿಕೆಯನ್ನು ಪುನರುಚ್ಚರಿಸಿದ್ದರು.
‘‘ ಮುಸ್ಲಿಂ ಸಮುದಾಯಕ್ಕೆ ಕಳಂಕ ಹಚ್ಚುವ ಇಂತಹ ಪ್ರಯತ್ನಗಳು ನಮ್ಮ ಚಾರಿತ್ರ, ನಮ್ಮ ವೌಲ್ಯಗಳು ಹಾಗೂ ಧಾರ್ಮಿಕ ಸ್ವಾತಂತ್ರದ ಚಿಂತನೆಯೊಂದಿಗೆ ನಿರ್ಮಾಣಗೊಂಡ ನಮ್ಮ ದೇಶದ ಇತಿಹಾಸಕ್ಕೆ ತದ್ವಿರುದ್ಧವಾದುದು. ಇದರಿಂದ ದೇಶದ ಮೇಲೆ ಪ್ರತಿಕೂಲ ಪರಿಣಾಮವಾಗಲಿದೆ. ನಮ್ಮನ್ನು ಒಬ್ಬರಿಗೊಬ್ಬರು ತಿರುಗಿ ಬೀಳುವಂತೆ ಮಾಡಲು ಬಯಸುತ್ತಿರುವ ಭಯೋತ್ಪಾದಕರಿಗೆ ಇದರಿಂದ ಪ್ರಯೋಜನವಾಗಲಿದೆ’’ ಎಂದು ಒಬಾಮ ತಿಳಿಸಿದರು.
‘‘ನಾನೋರ್ವ ತಂದೆ. ಇತರ ಯಾವುದೇ ಪೋಷಕರ ಹಾಗೆ, ಬ್ರುಸೆಲ್ಸ್ ದಾಳಿಯ ದಾರುಣ ಚಿತ್ರಗಳು ನಮ್ಮ ಮಕ್ಕಳ ಸುರಕ್ಷತೆಯ ಬಗ್ಗೆ ಆತಂಕವನ್ನುಂಟು ಮಾಡುತ್ತದೆ. ಐಸಿಸ್‌ನ್ನು ಪರಾಭವಗೊಳಿಸುವುದು ನಮ್ಮ ಸೇನಾ, ಗುಪ್ತಚರ ಹಾಗೂ ರಾಷ್ಟ್ರೀಯ ಭದ್ರತಾ ಆದ್ಯತೆಯಾಗಿದೆಯೆಂದು ಒಬಾಮ ಸಾರಿದರು.