ದಿಲ್ಲಿಯಲ್ಲಿ ಶೇಮ್ ಶೇಮ್: 48 ಗಂಟೆಯಲ್ಲಿ ಮೂವರು ಅಪ್ರಾಪ್ತರ ಅತ್ಯಾಚಾರ
ಹೊಸದಿಲ್ಲಿ, ಮಾ.27: ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ಕಳೆದ 48 ಗಂಟೆಗಳ ಅವಧಿಯಲ್ಲಿ ಪ್ರತ್ಯೇಕ ಘಟನೆಗಳಲ್ಲಿ ಮೂರರಿಂದ 8ರ ಹರೆಯದ ಮೂವರು ಅಪ್ರಾಪ್ತ ಮಕ್ಕಳು ಅತ್ಯಾಚಾರಕ್ಕೀಡಾಗಿದ್ದಾರೆ. ಪೊಲೀಸರು ಮೂರು ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳನ್ನು ಬಂಧಿಸಿದ್ದು, ಎಲ್ಲ ಆರೋಪಿಗಳು ಬಲಿಪಶುಗಳಿಗೆ ಪರಿಚಿತರೇ ಆಗಿದ್ದಾರೆ.
ಮೊದಲ ಘಟನೆಯಲ್ಲಿ ಮೆಟ್ರೊ ಕಾಮಗಾರಿಯಲ್ಲಿ ತೊಡಗಿದ್ದ ಕಾರ್ಮಿಕ ದಂಪತಿಯ ಮೂರರ ಹರೆಯದ ಬಾಲಕಿ ಮೇಲೆ ನೆರೆಮನೆಯಾತ ಅತ್ಯಾಚಾರ ಎಸಗಿದ್ದಾನೆ. ಬಾಲಕಿ ಮನೆಯಲ್ಲಿ ಒಂಟಿಯಾಗಿದ್ದಾಗ ಭೀಮ್‌ರಾಜ್(35) ಎಂಬಾತ ಈ ಕೃತ್ಯ ಎಸಗಿದ್ದಾನೆ. ಬಾಲಕಿ ಬೊಬ್ಬೆ ಹಾಕಿದಾಗ ನೆರೆ ಕೆರೆಯವರು ಧಾವಿಸಿ ಬಂದು ಆರೋಪಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಎರಡನೆ ಘಟನೆಯಲ್ಲಿ ಮನೆ ಮಾಲಿಕ ಮೋತಿ ಎಂಬಾತ 4ರ ಹರೆಯದ ಬಾಲಕಿಯನ್ನು ಅತ್ಯಾಚಾರ ಮಾಡಿದ್ದಾನೆ. ಬಾಲಕಿಯನ್ನು ಹೆತ್ತವರು ಒಂಟಿಯಾಗಿ ಮನೆಯಲ್ಲಿ ಬಿಟ್ಟುಹೋಗಿದ್ದರು. ಬಾಲಕಿಯ ಮನೆಗೆ ಹೋಗಿದ್ದ ಆರೋಪಿ ಚಾಕಲೇಟ್, ಬಿಸ್ಕ್ಕೆಟ್ ನೀಡುವ ಆಸೆ ತೋರಿಸಿ ಈ ಕೃತ್ಯ ಎಸಗಿದ್ದಾನೆ.
ಮೂರನೆ ಘಟನೆಯಲ್ಲಿ 8ರ ಹರೆಯದ ಬಾಲಕಿಯನ್ನು ಬಾಲಕಿಯ ತಂದೆಯ ಸ್ನೇಹಿತನೋರ್ವ ಅತ್ಯಾಚಾರ ನಡೆಸಿ, ಕೊಲೆಗೈದಿದ್ದು, ಬಾಲಕಿಯ ಮೃತದೇಹ ಹಳ್ಳಿಯೊಂದರ ಗದ್ದೆಯಲ್ಲಿ ಪತ್ತೆಯಾಗಿತ್ತು.