ಶೌಚಾಲಯದ ಗುಂಡಿ ಸ್ವಚ್ಚತೆಗೆ ಮಾನವ ಬಳಕೆ: ದಲಿತ ಕುಂದು ಕೊರತೆ ಸಭೆಯಲ್ಲಿ ಕ್ರಮಕ್ಕೆ ಆಗ್ರಹ
ಮಂಗಳೂರು,ಮಾ.27:ಶೌಚಾಲಯದ ಗುಂಡಿಗಳ ಸ್ವಚ್ಚತೆಗೆ ಮಾನವ ಬಳಕೆ ಮಾಡಬಾರದೆಂದು ಸುಪ್ರೀಂಕೋರ್ಟ್ ಆದೇಶವಿದ್ದರೂ,ದ.ಕ ಜಿಲ್ಲಾಧಿಕಾರಿಗಳು ಸೂಚಿಸಿದ್ದರೂ ಮಂಗಳೂರು ನಗರದ ಮಧ್ಯಭಾಗದಲ್ಲಿಯೆ ಶೌಚಾಲಯದ ಗುಂಡಿಗಳನ್ನು ದಲಿತ ಸಮುದಾಯದವರಿಂದ ಮಾಡಿಸಲಾಗುತ್ತಿದೆ ಎಂದು ಇಂದು ಮಂಗಳೂರು ಪೊಲೀಸ್ ಕಮೀಷನರ್ ಕಚೇರಿಯಲ್ಲಿ ನಡೆದ ದಲಿತ ಕುಂದುಕೊರತೆ ಸಭೆಯಲ್ಲಿ ಆಕ್ರೋಶ ವ್ಯಕ್ತವಾಯಿತು.
ಮಂಗಳೂರು ಡಿಸಿಪಿ ಶಾಂತರಾಜು ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ದಲಿತ ಮುಖಂಡ ಎಸ್.ಪಿ.ಆನಂದ್ ಅವರು ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣ ಮತ್ತು ಪುರಭವನದ ಹಿಂದೆ ಇರುವ ಸುಲಭ ಶೌಚಾಲಯದ ಬಳಿಯಿರುವ ಡ್ರೈನೆಜ್‍ನಲ್ಲಿ ದಲಿತ ಯುವಕರನ್ನು ಕೆಲಸ ಮಾಡಿಸಿಕೊಳ್ಳಲಾಗುತ್ತಿದೆ.ಈ ಬಗ್ಗೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು. ಇದಕ್ಕೆ ಪ್ರತಿಕ್ರೀಯಿಸಿದ ಡಿಸಿಪಿ ಶಾಂತರಾಜು ಈ ಬಗ್ಗೆ ದೂರು ದಾಖಲಿಸುವಂತೆ ಸೂಚಿಸಿದರು.
ದಲಿತ ಮುಖಂಡ ಮುಖೇಶ್ ಮಾತನಾಡಿ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕಳೆದ 9 ತಿಂಗಳಿನಿಂದ ನಡೆಯುತ್ತಿರುವ ದಲಿತ ಕುಂದುಕೊರತೆ ಸಭೆಯಲ್ಲಿ ಎಸ್‍ಐ ಭಾಗವಹಿಸುತ್ತಿಲ್ಲ. ಈ ಬಗ್ಗೆ ಸಾಕಷ್ಟು ಭಾರಿ ದೂರು ಸಲ್ಲಿಸಿದರೂ ಯಾವುದೆ ಪ್ರಯೋಜನವಾಗಿಲ್ಲ.ಈ ರೀತಿಯಾದರೆ ಮುಖ್ಯಮಂತ್ರಿಗಳಿಗೆ ದೂರು ನೀಡಲಾಗುವುದು ಎಂದು ಹೇಳಿದರು.
ಕೋಟಿಮುರ ಎಂಬ ಪ್ರದೇಶದಲ್ಲಿ ರಸ್ತೆಗೆ ದಲಿತರು ಜಾಗ ಬಿಟ್ಟುಕೊಟ್ಟಿದ್ದಾರೆ. ಆದರೆ ಅಲ್ಲಿ ನಿರ್ಮಾನವಾಗುತ್ತಿರುವ ಕಟ್ಟಡªವು ರಸ್ತೆಗೆ ಜಾಗ ಬಿಟ್ಟುಕೊಟ್ಟಿಲ್ಲ. ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದಾಗ ಡಿಸಿಪಿ ಶಾಂತರಾಜು ಈ ಬಗ್ಗೆ ಮನಪಾದೊಂದಿಗೆ ಚರ್ಚಿಸಲಾಗುವುದು ಎಂದು ಹೇಳಿದರು.
ಸುಮಿತ್ರ ಉಮೇಶ್ ಎಂಬವರು ಮಾತನಾಡಿ ಮೂರು ವರ್ಷಗಳ ಹಿಂದೆ ದಲಿತ ದೌರ್ಜನ್ಯ ಪ್ರಕರಣ ದಾಖಲಿಸಿದ ದ್ವೇಷಕ್ಕೆ ನೀರಿನ ಟ್ಯಾಂಕ್‍ಗೆ ವಿಷ ಹಾಕಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ನ್ಯಾಯ ಸಿಕ್ಕಿಲ್ಲ ಎಂದು ದೂರಿದರು.ಪ್ರಸಕ್ತ ದಾಖಲಿಸಲಾಗುತ್ತಿರುವ ದೂರುಗಳಿಗೆ ಸ್ಪಂದನೆಯಿಲ್ಲ ಎಂದು ಅವರು ಹೇಳಿದರು. ಇದಕ್ಕೆ ಪ್ರತಿಕ್ರೀಯಿಸಿದ ಡಿಸಿಪಿ ಶಾಂತರಾಜು ನೀರಿನ ಟ್ಯಾಂಕ್‍ಗೆ ವಿಷವನ್ನು ಹಾಕಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಾನವ ಹಕ್ಕು ಆಯೋಗದ ವರದಿಯ ಆಧಾರದ ಮೇಲೆ ಕ್ರಮ ಕೈಗೊಳ್ಳಲಾಗುವುದು. ಪ್ರಸಕ್ತ ದಾಖಲಿಸಲಾಗಿರುವ ಪ್ರಕರಣವನ್ನು ದಕ್ಷಿಣ ಎಸಿಪಿಯವರು ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ವಿಶುಕುಮಾರ್ ಮಾತನಾಡಿ ಮುಲ್ಕಿ, ಮೂಡಬಿದ್ರೆಯಲ್ಲಿ ಪಿಸಿಆರ್,ಪಿಸಿಐ ಇಲ್ಲ. ಇದರಿಂದ ಸಮಸ್ಯೆಯಾಗುತ್ತಿದೆ ಎಂದು ದೂರಿದರು.
ಸಿಟಿಬಸ್‍ಗಳಲ್ಲಿ ಟಿಕೇಟ್ ಕೊಡದೆ ಇರುವುದರಿಂದ ವಾಹನಗಳು ಅಪಘಾತವಾದಾಗ ಪ್ರಕರಣಕ್ಕೆ ಸಂಬಂಧಪಟ್ಟು ಟಿಕೇಟು ಅಗತ್ಯವಿದ್ದು ಈ ಬಗ್ಗೆ ಕ್ರಮ ತೆಗೆದುಕೊಳ್ಳುವಂತೆಯೂ ಒತ್ತಾಯಿಸಲಾಯಿತು. ಸಭೆಯಲ್ಲಿ ಡಿಸಿಪಿ ಸಂಜೀವ್ ಪಾಟೀಲ್ ಉಪಸ್ಥಿತರಿದ್ದರು.
ಮಂಗಳೂರು ರೈಲ್ವೆ ನಿಲ್ದಾಣದಲ್ಲಿ ಸಂದೀಪ್ ಅತ್ತಾವರ ಎಂಬಾತ ಬಡ ರಿಕ್ಷಾ ಚಾಲಕರಿಗೆ ಮತ್ತು ಹೊಸದಾಗಿ ದುಡಿಯಲು ಬರುತ್ತಿರುವ ರಿಕ್ಷಾ ಚಾಲಕರಿಗೆ ಹಲ್ಲೆ ಮಾಡುತ್ತಿದ್ದರೂ ಪೊಲೀಸರು ಆತನ ಬೆಂಬಲಕ್ಕೆ ನಿಂತಿದ್ದಾರೆ ಎಂದು ದಲಿತ ಮುಖಂಡ ಸದಾಸಿವ ಆಪಾದಿಸಿದರು. ಸಂದೀಪ್ ಅತ್ತಾವರ ದೊಣ್ಣೆಯ ಮೂಲಕ ಹಲ್ಲೆಗೈಯುತ್ತಿದ್ದು ಈ ಸಂದರ್ಭದಲ್ಲಿ ಆತನಿಗೆ ಹೆದರಿ ಯಾರು ಹಲ್ಲೆಗೊಳಗಾಗುತ್ತಿರುವವರ ರಕ್ಷಣೆಗೆ ಬರುವುದಿಲ್ಲ.ಆತನಿಗೆ ದಿನಂಪ್ರತಿ ಹಪ್ತಾ ನೀಡಬೇಕೆಂಬ ಮಾಹಿತಿಯಿದೆ . ಪೊಲೀಸ್ ಇನ್ಸ್‍ಪೆಕ್ಟರ್ ಶರೀಫ್ ಅವರಿಗೆ ದೂರು ನೀಡಿದರು ಆತನಿಗೆ ಅವರು ಬೆಂಬಲಿಸುತ್ತಿದ್ದಾರೆ ಎಂದು ಆಪಾದಿಸಿದರು.
ಈ ಬಗ್ಗೆ ಪ್ರತಿಕ್ರೀಯಿಸಿದ ಡಿಸಿಪಿ ಶಾಂತರಾಜು ದಕ್ಷಿಣ ಎಸಿಪಿ ಈ ಬಗ್ಗೆ ತನಿಖೆ ನಡೆಸಿ ಕ್ರಮಕೈಗೊಳ್ಳುವಂತೆ ಸೂಚಿಸಿದರು.