ಆರ್ ಟಿ ಐ ಕಾರ್ಯಕರ್ತ ಹತ್ಯೆ ಪ್ರಕರಣ;ಇಬ್ಬರು ಸುಫಾರಿ ಕಿಲ್ಲರ್ಸ್ ಬಂಧನ

Update: 2016-03-27 18:31 GMT

ಮಂಗಳೂರು, ಮಾ.27; ಆರ್ ಟಿ ಐ ಕಾರ್ಯಕರ್ತರ ವಿನಾಯಕ ಪಾಂಡುರಂಗ ಬಾಳಿಗ ಅವರನ್ನು ಸುಫಾರಿ ಪಡೆದು  ಹತ್ಯೆಗೈದ ಇಬ್ಬರು ಆರೋಪಿಗಳನ್ನು  ಇಂದು ಬಂಧಿಸಲಾಗಿದೆ ಎಂದು ಮಂಗಳೂರು ಪೊಲೀಸ್ ಕಮೀಷನರ್ ಚಂದ್ರಶೇಖರ ಎಂ ಹೇಳಿದರು.

ನಗರದಲ್ಲಿ ಇಂದು ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು ನಗರದ ಕಾವೂರು ಬಟ್ರೆಕುಮೇರು ಪದವಿನಂಗಡಿಯ ವಿನಿತ್ ಪೂಜಾರಿ(26), ಶಕ್ತಿನಗರ ಕ್ಯಾಶ್ಯೂ  ಫ್ಯಾಕ್ಟರಿ ಬಳಿಯ ನಿತೀಶ್ ದೇವಾಡಿಗ(23) ಬಂಧಿಸಲಾಗಿದೆ. ಪ್ರಕರಣದಲ್ಲಿ ಇವರು ನೇರವಾಗಿ ಭಾಗಿಯಾಗಿದ್ದಾರೆ. ಇನ್ನೂ ಹಲವು ಆರೋಪಿಗಳು ಈ ಪ್ರಕರಣದಲ್ಲಿ ಭಾಗಿಯಾಗಿದ್ದು ಅವರನ್ನು ಶೀಘ್ರವಾಗಿ ಬಂಧಿಸಲಾಗುವುದು ಎಂದು ಹೇಳಿದರು.

ಹತ್ಯೆಯ ನಿಖರ ಕಾರಣ ತಿಳಿದುಬಂದಿಲ್ಲ. ಆರ್ ಟಿ ಐ ನಲ್ಲಿ ಪ್ರಶ್ನಿಸಿದ್ದು ಕಾರಣವಾಗಿರಬಹುದೆ ಎಂಬ ನಿಟ್ಟಿನಲ್ಲಿಯೂ ತನಿಖೆ ನಡೆಸಲಾಗುವುದು ಎಂದು ಹೇಳಿದರು.

ಆರೋಪಿಗಳಿಬ್ಬರಿಗೆ ದುಡ್ಡು ಕೊಟ್ಟು ವಿನಾಯಕ ಬಾಳುವ ಅವರನ್ನು ಕೊಲೆ ಮಾಡಿರುವುದು ತಿಳಿದುಬಂದಿದ್ದು ಘಟನೆ ನಡೆದ ಮೊದಲ ದಿನವೂ ಆರೋಪಿಗಳು ಹತ್ಯೆಗೈಯಲು ಸಂಚು ರೂಪಿಸಿದ್ದರು.ಆದರೆ  ಆ ಸಂದರ್ಭದಲ್ಲಿ  ಘಟನಾ ಸ್ಥಳಕ್ಕೆ ಬೇರೆ ಯಾರೋ ಬಂದ ಕಾರಣ ಅಂದು ಕೊಲೆ ಮಾಡಲು ಸಾಧ್ಯವಾಗಿಲ್ಲ. ಮರುದಿನ ಮತ್ತೆ ಘಟನಾ ಸ್ಥಳಕ್ಕೆ ಬಂದ ಆರೋಪಿಗಳು ವಿನಾಯಕ ಪಾಂಡುರಂಗ  ಬಾಳಿಗ ಅವರ ಬೈಕನ್ನು ದಾರಿ ಕೇಳುವ ನೆಪದಲ್ಲಿ ನಿಲ್ಲಿಸಿ ಹತ್ಯೆಗೈದರು ಎಂದು ತಿಳಿಸಿದರು.

ಈ ಪ್ರಕರಣದಲ್ಲಿ ಭಾಗಿಯಾಗಿರುವ ಎಲ್ಲಾ ಆರೋಪಿಗಳನ್ನು ಶೀಘ್ರವಾಗಿ ಬಂಧಿಸಲಾಗುವುದು ಎಂದು ತಿಳಿಸಿದರು.

ಪ್ರಕರಣದ ತನಿಖೆಯನ್ನು  ಮಂಗಳೂರು ನಗರ ಕೇಂದ್ರ ಉಪವಿಭಾಗದ ಎಸಿಪಿ ತಿಲಕರ ಚಂದ್ರ ಮತ್ತು ಇನ್ಸ್‌ಪೆಕ್ಟರ್ ಗಳಾದ ವೆಲೆಂಟೈನ್ ಡಿಸೋಜ, ಶಾಂತರಾಮ, ರಾಜೇಶ್, ರವೀಶ್ ನಾಯಕ್,  ಮಾರುತಿ ನಾಯಕ್ ಮತ್ತು ಪಿಎಸ್ ಐ ಶ್ಯಾಮ್ ಸುಂದರ್ ತನಿಖೆಯನ್ನು ನಡೆಸಿದ್ದಾರೆ ಎಂದು ಹೇಳಿದರು.

ಪತ್ರಿಕಾಗೋಷ್ಟಿಯಲ್ಲಿ ಡಿಸಿಪಿಗಳಾದ ಶಾಂತರಾಜು, ಸಂಜೀವ್ ಪಾಟೀಲ್ ಉಪಸ್ಥಿತರಿದ್ದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News