×
Ad

25 ವಿಕಲಚೇತನರಿಗೆ ವೀಲ್‌ಚೇರ್ ವಿತರಣೆ

Update: 2016-03-27 20:49 IST

ಉಳ್ಳಾಲ, ಮಾ.29: ಮಾನಸಿಕ ರೋಗಿಗಳಿಗೆ ಸ್ಪಂದಿಸುವ ಸ್ವಯಂಸೇವಾ ಸಂಸ್ಥೆಗಳಿಗೆ ಸರಕಾರದಿಂದ ‘ಮಾನಸಿ’ ಆಧಾರ ಯೋಜನೆ ಮೂಲಕ ಸಹಕಾರ ನೀಡಲಾಗುತ್ತಿದೆ. ಇದರ ಮೂಲಕ ಮಾನಸಿಕವಾಗಿ ಬಳಲುತ್ತಿರುವವರ ಬಾಳಿಗೆ ಬೆಳಕಾಗಬಹುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್ ಹೇಳಿದ್ದಾರೆ.

 ಅವರು ತೊಕ್ಕೊಟ್ಟುವಿನಲ್ಲಿ ಇತ್ತೀಚೆಗೆ ನಡೆದ ಹೆಲ್ಪ್‌ಇಂಡಿಯಾ ಫೌಂಡೇಶನ್ ನ ಕಚೇರಿ ಉದ್ಘಾಟನೆ ಹಾಗೂ 25 ವಿಕಲಚೇತನರಿಗೆ ವೀಲ್‌ಚೇರ್ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

  ರೋಗಿಗಳ ಆರೈಕೆಗೆ ಸ್ವಂತ 10 ಸೆಂಟ್ಸ್ ಜಾಗ: ಮಾನಸಿಕ ರೋಗಿಗಳ ಆಶ್ರಯಕ್ಕೆ ಹೆಲ್ಪ್‌ಇಂಡಿಯಾ ಫೌಂಡೇಶನ್ ಸರಕಾರಿ ಜಾಗದ ಪ್ರಸ್ತಾಪ ಮುಂದಿಟ್ಟಿದ್ದು, ಸಾಧ್ಯವಾದಲ್ಲಿ ಸರಕಾರಿ ಜಾಗದ ಜತೆಗೆ ತನ್ನ ಸ್ವಂತ 10 ಸೆಂಟ್ಸ್ ಜಾಗವನ್ನು ಮಾನಸಿಕ ರೋಗಿಗಳ ಆರೈಕೆಗೆ ನೀಡುವ ಭರವಸೆಯನ್ನು ನೀಡಿದರು. ಹೆಲ್ಪ್ ಇಂಡಿಯಾ ಫೌಂಡೇಶನ್ ಕಚೇರಿ ಉದ್ಘಾಟಿಸಿದ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹೀಂ ಮಾತನಾಡಿ, ಸ್ವಯಂಸೇವಾ ಸಂಸ್ಥೆಗಳು ಉದ್ಘಾಟನೆಗಳಿಗೆ, ಪ್ರಚಾರ ಗಳಿಗೆ ಮಾತ್ರ ಸೀಮಿತವಾಗಿ ದಾರಿ ತಪ್ಪುತ್ತಿವೆ. ರಾಜ್ಯ ಅಭಿವೃದ್ಧಿ ಯೋಜನೆಯಡಿ 1 ಲಕ್ಷ ಕೋಟಿ ಅನುದಾನ ಸರಕಾರದಿಂದ ಜನರ ಅಭಿವೃದ್ಧಿಗೆ ಸಿಗುತ್ತದೆ. ಸ್ವಯಂ ಸೇವಾ ಸಂಸ್ಥೆಗಳು ಸರಕಾರದ ಜತೆಗೆ ಜಂಟಿಯಾಗಿ ಕಾರ್ಯ ನಿರ್ವಹಿಸಿದಲ್ಲಿ ಪ್ರತಿ ಯೋಜನೆಗಳನ್ನು ಜನರಿಗೆ ತಲುಪಿಸಬಹುದಾಗಿದೆ. ಆದರೆ ವಿದೇಶದಿಂದ ಹಣ ಸಂಪಾದಿಸಿ, ಸಂಗ್ರಹಿಸಿ ದೇಶದ ಜನರಿಗೆ ಖರ್ಚು ಮಾಡುವುದು ಸರಿಯಲ್ಲ. ಸೇವೆಗಳಿಂದ ಜೀವನದ ಘನತೆಗೆ ಕುತ್ತು ತರುವ ಪ್ರಯತ್ನ ಆಗಬಾರದು. ಸರಕಾರದ ಸೇವೆ ಲಭ್ಯವಿರದ ಪ್ರದೇಶಗಳಲ್ಲಿ ಸ್ವಯಂ ಸೇವಾ ಸಂಸ್ಥೆಗಳು ಕಾರ್ಯಾಚರಿಸಬೇಕಿದೆ ಎಂದರು. ಮುಡಾ ಅಧ್ಯಕ್ಷ ಇಬ್ರಾಹಿಂ ಕೋಡಿಜಾಲ್ ಅಧ್ಯಕ್ಷತೆ ವಹಿಸಿದ್ದರು. ಉಳ್ಳಾಲ ನಗರಸಭೆ ಅಧ್ಯಕ್ಷ ಹುಸೈನ್ ಕುಂಞಿಮೋನು, ಹೆಲ್ಪ್‌ಇಂಡಿಯಾ ಪೌಂಡೇಶನ್ ಅಧ್ಯಕ್ಷ ನಾಸೀರ್ ಮೊಯ್ದಿನ್ ಪೆರ್ಮನ್ನೂರು ಸಂತ ಸೆಬೆಸ್ತಿಯನ್ನರ ಚರ್ಚಿನ ಧರ್ಮಗುರು ರೂಪೇಶ್ ಮಾಡ್ತಾ, ಕರ್ನಾಟಕ ರಾಜ್ಯ ಮಾನಸಿಕ ಆರೋಗ್ಯ ಪಡೆ ಹಾಗೂ ಶಿವಮೊಗ್ಗ ನರ್ಸಿಂಗ್ ಹೋಂನ ಅಧ್ಯಕ್ಷ ಹಾಗೂ ಖ್ಯಾತ ಮನೋವೈದ್ಯ ಡಾ.ಕೆ.ಎ.ಅಶೋಕ್ ಪೈ, ಕೆ.ಎಸ್.ಹೆಗ್ಡೆ ಆಸ್ಪತ್ರೆಯ ವೈದ್ಯ ಡಾ.ವಿಕ್ರಂ ಶೆಟ್ಟಿ, ಮನಸ್ವಿನಿ ಮಂಗಳೂರಿನ ಮಾನಸಿಕ ತಜ್ಞ ಡಾ.ರವೀಶ್ ತುಂಗಾ, ಬಿ.ಎಂ.ಕುಂಞಿ, ಉದ್ಯಮಿ ಯು.ಟಿ.ಝುಲ್ಫಿಕರ್, ಡಾ.ಪ್ರಕಾಶ್, ಬಾವ ಬಿಲ್ಡರ್ಸ್‌ ಸಂಸ್ಥೆಯ ಅಹ್ಮದ್ ಅಬ್ದುಲ್ ಖಾದರ್ ಬಾವ, ಹೆಲ್ಪ್‌ಇಂಡಿಯಾ ಫೌಂಡೇಶನ್‌ನ ಉಪಾಧ್ಯಕ್ಷ ಉಮರ್ ಫಾರೂಕ್ ಪಟ್ಲ, ಸ್ಥಾಪಕ ಸದಸ್ಯ ಸರ್ಫರಾಝ್, ಕಾರ್ಯಕಾರಿ ಸಮಿತಿ ಅಧ್ಯಕ್ಷ ತೌಸೀಫ್ ಮುಂತಾದವರು ಅತಿಥಿಗಳಾಗಿ ಭಾಗವಹಿಸಿದ್ದರು.

ಹೆಲ್ಪ್ ಇಂಡಿಯಾ ಪೌಂಡೇಶನ್‌ನ ಕಾರ್ಯದರ್ಶಿ ಅಬ್ದುಲ್ ರಾಝಿಕ್ ಉಳ್ಳಾಲ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸದಸ್ಯ ಶಕೀಲ್ ತುಂಬೇಜಾ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು.

ಇಕ್ಲಾಸ್ ಟೂರ್ಸ್‌ನ ಮಾಲಕ ಝಾಕಿರ್ ಹುಸೈನ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News