×
Ad

ಮಂಗಳೂರು: ಕರಾವಳಿ ಜಲ ಸಂವರ್ಧನಾ ಪ್ರಾಧಿಕಾರ ರಚನೆಗೆ ಒತ್ತಾಯ

Update: 2016-03-27 21:17 IST

ಮಂಗಳೂರು ,ಮಾ.27:ಕರಾವಳಿ ಜಿಲ್ಲೆಯ ಕುಡಿಯುವ ನೀರಿನ ಸಂರಕ್ಷಣೆ, ಸಂವರ್ಧನೆಗಾಗಿ ವಿಧಾನ ಸಭೆಯಲ್ಲಿ ಕಾನೂನು ಪ್ರಕಾರವಾಗಿ ‘ಕರಾವಳಿ ಜಲ ಸಂವರ್ಧನಾ ಪ್ರಾಧಿಕಾರ’ವನ್ನು ಸರಕಾರ ರಚನೆ ಮಾಡಬೇಕು ಎಂದು ಹಿರಿಯ ನೀರಾವರಿ ತಜ್ಞ ಹಾಗೂ ನಿವೃತ್ತ ಐಎಎಸ್ ಅಧಿಕಾರಿ ವಿ.ವಿ. ಭಟ್ ಒತ್ತಾಯಿಸಿದ್ದಾರೆ. ನಗರದಲ್ಲಿ ಇಂದು ನೇತ್ರಾವತಿ ಸಂಯುಕ್ತ ಹೋರಾಟ ಸಮಿತಿ ನೇತೃತ್ವದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಕರಾವಳಿಗೆ ಆತಂಕವಾಗಿರುವ ಎತ್ತಿನಹೊಳೆ ಯೋಜನೆ ವಿರೋಧಿಸಿ ನ್ಯಾಯಾಲಯಗಳಲ್ಲಿ ಕಾನೂನು ಹೋರಾಟ ನಡೆಯುತ್ತಿದೆ. ಸುಪ್ರೀಂ ಕೋರ್ಟ್ ವರೆಗೆ ಹೋಗುವ ಅವಕಾಶಗಳಿವೆ. ಆದರೆ ಜಲ ಪ್ರಾಧಿಕಾರ ರಚನೆಯಿಂದ ಈ ಭಾಗದ ನೀರಿನ ಸಮಸ್ಯೆಗಳಿಗೆ ಪರಿಹಾರ ಸಿಗುವುದಕ್ಕೆ ಸಾಧ್ಯವಾಗುತ್ತದೆ ಎಂದರು.

ಅಮೆರಿಕಾ ಸೇರಿದಂತೆ ಜಗತ್ತಿನ ನಾನಾ ರಾಷ್ಟ್ರಗಳಲ್ಲಿ ಜಲ ಪ್ರಾಧಿಕಾರ ರಚನೆಯಾಗಿದೆ. ನಮ್ಮಲ್ಲಿ ಗಂಗಾ ನದಿ ಪ್ರಾಧಿಕಾರ, ಕಾವೇರಿ ನದಿ ರಕ್ಷಣೆಗೂ ಪ್ರಾಧಿಕಾರ ರಚಿಸಲಾಗಿತ್ತು. ಅಂತಾರಾಷ್ಟ್ರೀಯ ನೀರಿನ ವರದಿ ಪ್ರಕಾರ ನೀರಿನ ಮೂಲದ ರಕ್ಷಣೆಗೆ ವಿಶೇಷ ಒತ್ತು ನೀಡಬೇಕಾಗಿದೆ. ಈ ನಿಟ್ಟಿಲ್ಲಿ ಪ್ರಾಧಿಕಾರ ಅಗತ್ಯ ಎಂದರು. ಹಿರಿಯ ನೀರಾವರಿ ತಜ್ಞ ಪ್ರೊ. ಎಸ್.ಜಿ.ಮಯ್ಯ ಮಾತನಾಡಿ, ಎತ್ತಿನಹೊಳೆಯಲ್ಲಿ ನೀರು ಲಭಿಸುವುದಿಲ್ಲ ಎಂಬುವುದು ಸರಕಾರಕ್ಕೆ ಮನವರಿಕೆ ಆಗಿದೆ. ಈ ಹಿನ್ನೆಲೆಯಿಂದ ಶರಾವತಿ, ಉಪ್ಪಿನಂಗಡಿಯವರೆಗೂ ಸರಕಾರ ಕಣ್ಣು ಇಟ್ಟಿದೆ. ನಮ್ಮ ನೀರಿನ ಅವಶ್ಯಕತೆ ಕುರಿತು ಇಲ್ಲಿನ ಜನಪ್ರತಿನಿಧಿಗಳು ಪರಿಣಾಮಕಾರಿಯಾಗಿ ಮಾತನಾಡುತ್ತಿಲ್ಲ. ಇಲ್ಲಿ ರಾಜಕೀಯ ಮೇಲಾಟ ನಡೆಯುತ್ತಿದೆ. ಹಿಂದೆ ಅವರು ಮಾಡಿದರು ಎಂದು ಇಂದಿನವರು ದೂರುತ್ತಿದ್ದಾರೆ. ಅವರು ಮಾಡಿದ ತಪ್ಪನ್ನು ಎಲ್ಲರು ಜತೆ ಸೇರಿ ಸರಿ ಮಾಡಲು ಯಾಕೆ ಮುಂದಾಗುತ್ತಿಲ್ಲ ಎಂದು ಅವರು ಪ್ರಶ್ನಿಸಿದರು.

ಕರಾವಳಿ ಭಾಗದ ಜನಪ್ರತಿನಿಧಿಗಳ ಸಂಖ್ಯೆ ಕಡಿಮೆ ಇರುವುದರಿಂದ ವಿಧಾನ ಸಭೆಯಲ್ಲಿ ನಮ್ಮ ಧ್ವನಿ ಕಡಿಮೆ ಆಗಿದೆ ಎಂದು ಹೇಳಲಾಗುತ್ತಿದೆ. ಇದಕ್ಕಾಗಿ ಕರಾವಳಿಗೆ ಪ್ರತ್ಯೇಕ ರಾಜ್ಯವನ್ನೇ ಕೊಡಿ ಎಂಬ ಆಗ್ರಹವನ್ನು ಮಾಡುವ ಅಗತ್ಯವಿದೆ ಎಂದು ಪ್ರೊ. ಮಯ್ಯ ಹೇಳಿದರು.

ನೇತ್ರಾವತಿ ಹೋರಾಟ ಸಮಿತಿ ಮುಖಂಡರಾದ ಎಂ.ಜಿ.ಹೆಗಡೆ ,ಪುರುಷೋತ್ತಮ ಚಿತ್ರಾಪುರ, ಶಶಿರಾಜ್ ಶೆಟ್ಟಿ ಕೊಳಂಬೆ, ರಾಮಚಂದ್ರ ಬೈಕಂಪಾಡಿ ಉಪಸ್ಥಿತರಿದ್ದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News