×
Ad

ಮಂಗಳೂರು: ಕಾಂಗ್ರೆಸ್ ನಿಂದ ಬಹುಸಂಖ್ಯಾತರ ಭಾವನೆಗಳ ಜತೆ ಚೆಲ್ಲಾಟ- ನಳಿನ್‌ಕುಮಾರ್ ಕಟೀಲ್

Update: 2016-03-27 21:22 IST

ಮಂಗಳೂರು,ಮಾ.27: : ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಆಮಂತ್ರಣ ಪತ್ರಿಕೆಯಲ್ಲಿ ಕಾನೂನು ಉಲ್ಲಂಘನೆಯಾಗಿದ್ದರೂ ಕಾಂಗ್ರೆಸ್ ನಾಯಕರು ವಿರೋಧಾಭಾಸದ ಹೇಳಿಕೆ ನೀಡುವ ಮೂಲಕ ಬಹುಸಂಖ್ಯಾತರ ಭಾವನೆಗಳ ಜತೆ ಚೆಲ್ಲಾಟವಾಡುತ್ತಿದ್ದಾರೆ. ಧಾರ್ಮಿಕ ನಂಬಿಕೆಗೆ ಒತ್ತು ನೀಡಬೇಕಾದ ಸರ್ಕಾರ ಕೂಡಾ ಕಾನೂನು ಉಲ್ಲಂಘಿಸಿದ ಅಧಿಕಾರಿಗಳ ಬೆಂಬಲಕ್ಕೆ ನಿಂತಿದೆ ಎಂದು ಸಂಸದ ನಳಿನ್‌ಕುಮಾರ್ ಕಟೀಲ್ ಆರೋಪಿಸಿದ್ದಾರೆ. ದೇವಾಲಯದ ಅಧಿಕಾರಿಗಳು ಹಿರಿಯ ಅಧಿಕಾರಿಗಳನ್ನು ಓಲೈಸಲು ಧಾರ್ಮಿಕ ದತ್ತಿ ಇಲಾಖೆಯ ನಿಯಮಗಳನ್ನೇ ಗಾಳಿಗೆ ತೂರಿ ಆಮಂತ್ರಣ ಪತ್ರ ಮುದ್ರಿಸಿದ್ದಾರೆ. ಹಿಂದೂ ಧರ್ಮದ ದೇವಾಲಯಗಳ ಆಡಳಿತದಲ್ಲಿ ಅನ್ಯ ಧರ್ಮದವರಿಗೆ ಅವಕಾಶವಿಲ್ಲ ಎಂದು ನಿಯಮದಲ್ಲಿ ಸ್ಪಷ್ಟವಾಗಿ ತಿಳಿಸಿದೆ. ಇದರಲ್ಲಿ ಶಿಷ್ಟಾಚಾರದ ಪ್ರಶ್ನೆಯೇ ಬರುವುದಿಲ್ಲ. ಸರ್ಕಾರ ರೂಪಿಸಿದ ಕಾನೂನು ಪಾಲಿಸುವುದು ಅಧಿಕಾರಿಗಳ ಕರ್ತವ್ಯ. ಆದರೆ ಪುತ್ತೂರು ದೇವಸ್ಥಾನದ ಅಮಂತ್ರಣದಲ್ಲಿ ಅಧಿಕಾರಿಗಳೇ ಕಾನೂನು ಪಾಲಿಸಿಲ್ಲ ಎಂದು ಹೇಳಿದರು.

 ರಾಜ್ಯ ಸರ್ಕಾರ ಕೂಡಾ ಈ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದಿರುವುದು ಖಂಡನೀಯ ಎಂದು ಅವರು ತಿಳಿಸಿದ್ದಾರೆ.ದ.ಕ.ಜಿಲ್ಲೆಯಲ್ಲಿ ಕೆಲವು ಅಧಿಕಾರಿಗಳು ರಾಜಕೀಯ ಪಕ್ಷದ ಏಜೆಂಟ್‌ಗಳಂತೆ ಕಾರ್ಯನಿರ್ವಹಿಸುತ್ತಿದ್ದಾರೆ. ಕಾಂಗ್ರೆಸ್ ಸಚಿವರುಗಳನ್ನು ಮೆಚ್ಚಿಸಲು ರಾಜಕೀಯ ಪ್ರೇರಿತ ಹೇಳಿಕೆ ನೀಡುತ್ತಿದ್ದಾರೆ. ಸಹಿಷ್ಣುತೆಯ ವಿಚಾರವನ್ನು ಅಧಿಕಾರಿಗಳು ಕಲಿಸಬೇಕಾದ ಅವಶ್ಯಕತೆ ಇಲ್ಲ. ಹಿಂದೂ ಪರ ಸಂಘಟನೆಯ ನಾಯಕರು ಆಮಂತ್ರಣ ಪತ್ರಿಕೆಯಲ್ಲಿ ಸರ್ಕಾರದ ನಿಯಮ ಪಾಲಿಸಬೇಕು . ಆದರೆ ಸರ್ಕಾರ ಮತ್ತು ಅಧಿಕಾರಿಗಳು ತಮ್ಮ ನಿಲುವು ಸರಿ ಎಂದು ವಾದಿಸಿದ್ದು ಪರಿಸ್ಥಿತಿ ಉಲ್ಭಣವಾಗಲು ಕಾರಣವಾಗಿದೆ. ಭಕ್ತರು ಪ್ರತಿಭಟನೆಯ ಹಂತಕ್ಕೆ ಇಳಿಯಲು ಸರ್ಕಾರವೇ ನೇರ ಹೊಣೆ. ಸರ್ಕಾರ ತಕ್ಷಣ ಅಗಿರುವ ಪ್ರಮಾದವನ್ನು ಸರಿಪಡಿಸಿ ಹಿಂದೂಗಳ ಭಾವನೆಗಳನ್ನು ಗೌರವಿಸಬೇಕು ಎಂದು ನಳಿನ್‌ಕುಮಾರ್ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News