×
Ad

ಲಾಹೋರ್‌ನಲ್ಲಿ ಆತ್ಮಹತ್ಯಾ ಬಾಂಬ್ ದಾಳಿ: ಕನಿಷ್ಠ 53 ಬಲಿ

Update: 2016-03-27 22:28 IST

ಲಾಹೋರ್,ಮಾ.27: ಪಾಕಿಸ್ತಾನದಲ್ಲಿ ಭಯೋತ್ಪಾದಕರು ಮತ್ತೆ ಅಟ್ಟಹಾಸಗೈದಿದ್ದಾರೆ. ಲಾಹೋರ್ ನಗರದ ಜನದಟ್ಟಣೆಯ ಸಾರ್ವಜನಿಕ ಉದ್ಯಾನವನವೊಂದರಲ್ಲಿ ರವಿವಾರ ಆತ್ಮಹತ್ಯಾ ಬಾಂಬರ್ ಒಬ್ಬಾತ ನಡೆಸಿದ ಭೀಕರ ದಾಳಿಗೆ ಮಕ್ಕಳು ಸೇರಿದಂತೆ 53 ಮಂದಿ ಮೃತಪಟ್ಟಿದ್ದಾರೆ ಹಾಗೂ ನೂರಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.

  ನಗರದ ಹೃದಯಭಾಗದಲ್ಲಿರುವ ವಿಲಾಸಿ ಪ್ರದೇಶದಲ್ಲಿರುವ ಗುಲ್ಶನ್ ಇಕ್ಬಾಲ್ ಪಾರ್ಕ್ ಸಮೀಪ ಈ ಸ್ಫೋಟ ಸಂಭವಿಸಿದೆ. ಪಾರ್ಕ್ ಇಡೀ ರಕ್ತಸಿಕ್ತವಾಗಿದ್ದು, ಮಾನವದೇಹದ ಅವಶೇಷಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿವೆಯಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಸ್ಫೋಟ ಸಂಭವಿಸಿದ ಸಂದರ್ಭದಲ್ಲಿ ಮಹಿಳೆಯರು ಮತ್ತು ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಪಾರ್ಕ್‌ನಲ್ಲಿದ್ದಾರೆನ್ನಲಾಗಿದೆ. ಈಸ್ಟರ್ ಹಬ್ಬವಾಗಿದ್ದ ಕಾರಣ ಪಾರ್ಕ್‌ನಲ್ಲಿ ಜನದಟ್ಟಣೆ ಹೆಚ್ಚಿತ್ತೆಂದು ಪ್ರತ್ಯಕ್ಷದರ್ಶಿಯೊಬ್ಬರ ಹೇಳಿಕೆಯನ್ನು ಉಲ್ಲೇಖಿಸಿ ಡಾನ್ ಪತ್ರಿಕೆ ವರದಿ ಮಾಡಿದೆ.
ಇದೊಂದು ಆತ್ಮಹತ್ಯಾ ಬಾಂಬ್ ದಾಳಿಯೆಂದು ಇಕ್ಬಾಲ್‌ಟೌನ್ ಪ್ರದೇಶದ ಪೊಲೀಸ್ ಅಧೀಕ್ಷಕ ಮುಹಮ್ಮದ್ ಇಕ್ಬಾಲ್ ತಿಳಿಸಿದ್ದಾರೆ. ಸ್ಫೋಟ ಸಂಭವಿಸಿದ ಸಂದರ್ಭದಲ್ಲಿ ಪಾರ್ಕ್‌ನಲ್ಲಿ ಭದ್ರತಾ ಸಿಬ್ಬಂದಿಗಳಿರಲಿಲ್ಲವೆಂದು ವರದಿ ಹೇಳಿದೆ. ಸ್ಫೋಟದ ಬಳಿಕ ರಕ್ಷಣಾ ಅಧಿಕಾರಿಗಳು ಹಾಗೂ ಪೊಲೀಸರು ಸ್ಥಳಕ್ಕೆ ಧಾವಿಸಿದರು.ಗಾಯಾಳುಗಳ ಚಿಕಿತ್ಸೆಗಾಗಿ ಆಸ್ಪತ್ರೆಯ ಎಲ್ಲಾ ಸರಕಾರಿ ಆಸ್ಪತ್ರೆಗಳಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಿಸಲಾಗಿದೆ ಹಾಗೂ ಇಡೀ ಪ್ರದೇಶವನ್ನು ಪೊಲೀಸರು ಸುತ್ತುವರಿದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News