ಕೋಡಿಜಾಲ್ ರಿಂದ ಕಾಂಗ್ರೆಸನ್ನು ಮುಸ್ಲಿಮರ ಮೇಲೆ ಹೇರುವ ಪ್ರಯತ್ನ : SDPI
ಮಂಗಳೂರು, ಮಾ.27: ಇತ್ತೀಚೆಗೆ ನಡೆದ ಜಿಪಂ, ತಾಪಂ ಚುನಾವಣೆಯಲ್ಲಿ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ವಿಜೇತರಾದ ಮುಸ್ಲಿಮ್ ಅಭ್ಯರ್ಥಿಗಳಿಗೆ ಜಮೀಯ್ಯತುಲ್ ಫಲಾಹ್ ವತಿಯಿಂದ ಏರ್ಪಡಿಸಲಾದ ಅಭಿನಂದನಾ ಸಭೆಯನ್ನು ಮುಡಾ ಅಧ್ಯಕ್ಷ ಇಬ್ರಾಹೀಂ ಕೋಡಿಜಾಲ್ ಕಾಂಗ್ರೆಸ್ ಪಕ್ಷದ ಸಭೆಯೆಂದು ಭಾವಿಸಿ ಮಾತನಾಡಿದ್ದು ಖಂಡನೀಯ ಎಂದು ಎಸ್‌ಡಿಪಿಐ ದ.ಕ. ಜಿಲ್ಲಾ ಸಮಿತಿ ಆರೋಪಿಸಿದೆ.
ಕೋಡಿಜಾಲ್ರಿಗೆ ಎಲ್ಲವೂ ಕಾಂಗ್ರೆಸ್ ಆಗಿರಬಹುದು. ಆದರೆ, ಅದನ್ನು ಮುಸ್ಲಿಮ್ ಸಮುದಾಯದ ಮೇಲೆ ಹೇರಲು ಅವರು ಹರಸಾಹಸಪಡುತ್ತಿರುವುದು ಸರಿಯಲ್ಲ. ಕೋಡಿಜಾಲ್ರ ನಿರ್ದೇಶನದಂತೆ ಎಸ್‌ಡಿಪಿಐ ನಡೆಯುವ ಪಕ್ಷವಲ್ಲವೆಂದು ಅವರು ತಿಳಿಯುವುದು ಉತ್ತಮ. ಎಸ್‌ಡಿಪಿಐ ರಾಷ್ಟ್ರೀಯ ರಾಜಕೀಯ ಪಕ್ಷವಾಗಿದ್ದು, ಅದಕ್ಕೆ ಅದರದ್ದೇ ಅದ ನೀತಿನಿಯಮಗಳು ಮತ್ತು ಸಿದ್ಧಾಂತಗಳು ಇವೆಯೆಂದು ಕೋಡಿಜಾಲ್ ಅರ್ಥ ಮಾಡಿಕೊಳ್ಳಬೇಕೆಂದು ಹೇಳಿಕೆಯಲ್ಲಿ ತಿಳಿಸಿದೆ.
ಎಸ್‌ಡಿಪಿಐ ಈ ದೇಶದ ಪ್ರಬಲ ಎರಡು ರಾಜಕೀಯ ಪಕ್ಷಗಳನ್ನೂ ಸಮಾನವಾಗಿ ನೋಡುತ್ತಿದೆ. ಯಾಕೆಂದರೆ ಈ ದೇಶದ ದಲಿತ ಮತ್ತು ಅಲ್ಪಸಂಖ್ಯಾತ ಸಮುದಾಯದ ಸರಿ ಸುಮಾರು ಶೇಕಡ 75ರಷ್ಟು ಮಂದಿ ಇಂದು ಈ ದೇಶದಲ್ಲಿ ಗುಲಾಮರಾಗಿ ಜೀವಿಸುವಂತೆ ಮಾಡಿರುವುದರಲ್ಲಿ ಈ ಎರಡೂ ಪಕ್ಷಗಳ ಪಾಲು ಸಮಾನವಾಗಿದೆ. ಬಿಜೆಪಿಯಲ್ಲಿ ಹಿಂದುತ್ವವಾದಿಗಳಾದರೆ ಕಾಂಗ್ರೆಸ್‌ನಲ್ಲಿ ಶೇ. 60 ಕ್ಕಿಂತಲೂ ಅಧಿಕ ಮೃದು ಹಿಂದುತ್ವವಾದಿಗಳಿರುವುದು ಕೊಡಿಜಾಲ್ರಿಗೆ ತಿಳಿಯದಿರುವ ವಿಷಯವೇನಲ್ಲ ಎಂದು ಎಸ್‌ಡಿಪಿಐ ತಿಳಿಸಿದೆ.
ಕೊಡಿಜಾಲ್ರ ಹೇಳಿಕೆಯಂತೆ ಕಾಂಗ್ರೆಸ್, ಎಸ್‌ಡಿಪಿಐಯಿಂದಲೇ ಸೋಲನ್ನು ಅನುಭವಿಸಿದೆ ಎಂದಾದರೆ, ನಿಮ್ಮ ನಾಯಕತ್ವವನ್ನು ತಿರಸ್ಕರಿಸಿ, ದ.ಕ ಜಿಲ್ಲೆಯ ಅಲ್ಪಸಂಖ್ಯಾತರು ಎಸ್‌ಡಿಪಿಐಯನ್ನು ಸ್ವೀಕರಿಸುತ್ತಿದ್ದಾರೆ ಎಂಬ ಸೂಚನೆಯಾಗಿದೆ ಎಂಬುವುದನ್ನು ಕೊಡಿಜಾಲ್ ನೆನಪಿಟ್ಟುಕೊಳ್ಳಬೇಕು. ಅದೇ ರೀತಿ ಕೊಡಿಜಾಲ್ ರಾಜಕೀಯ ಸನ್ಯಾಸತ್ವವನ್ನು ಸ್ವೀಕರಿಸುವುದು ಉತ್ತಮ ಎಂದು ಎಸ್‌ಡಿಪಿಐ ದ.ಕ ಜಿಲ್ಲಾಧ್ಯಕ್ಷ ಹನೀಫ್ ಖಾನ್ ಕೊಡಾಜೆ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.