×
Ad

ಮುಲ್ಕಿ : ಕರ್ಣಾಟಕ ಬ್ಯಾಂಕ್‌ನ 725 ನೇ ಶಾಖೆ ಮತ್ತು 1275 ನೇ ಎಟಿಎಂ ಶಾಖೆಯ ಉದ್ಘಾಟನೆ

Update: 2016-03-28 17:43 IST

ಮುಲ್ಕಿ, ಮಾ.29: ಕರ್ಣಾಟಕ ಬ್ಯಾಂಕ್ ತನ್ನ ಲಾಭಾಂಶದಲ್ಲಿ ಕಲೆ ಸಂಸ್ಕೃತಿಗೆ ಪ್ರೋತ್ಸಾಹ ನೀಡುವ ಜೊತೆಗೆ ಜನ ಸಾಮಾನ್ಯರಿಗೆ ಉತ್ತಮ ಸೇವೆಯನ್ನು ಒದಗಿಸುತ್ತಾ ಜನ ಮೆಚ್ಚುಗೆಯ ಬ್ಯಾಂಕ್ ಎಂಬ ಹೆಗ್ಗಳಿಗೆ ಗಳಿಸಿದೆ ಎಂದು ಕರ್ಣಾಟಕ ಬ್ಯಾಂಕ್‌ನ ಅಡಳಿತ ನಿರ್ದೇಶಕರು ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ. ಜಯರಾಮ ಭಟ್ ಹೇಳಿದರು.
    ಇಂದು ಮುಲ್ಕಿಯ ಪುನರೂರು ಕಾಂಪ್ಲೆಕ್ಸ್‌ನಲ್ಲಿ ಶುಭಾರಂಭಗೊಂಡ ಕರ್ಣಾಟಕ ಬ್ಯಾಂಕ್‌ನ 725 ನೇ ಶಾಖೆ ಮತ್ತು 1275 ನೇ ಎಟಿಎಂ ಶಾಖೆಗಳ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
    15-16 ನೇ ಸಾಲಿನಲ್ಲಿ 83 ಸಾವಿರ ಕೋಟಿ ರೂ. ವಹಿವಾಟು ನಡೆಸುತ್ತಿದ್ದು, 451 ಕೋಟಿ ರೂ. ಸರ್ವಾಧಿಕ ಲಾಭಾಂಶ ಗಳಿಸುತ್ತಿದೆ. ಭವಿಷ್ಯದಲ್ಲಿ 1.80 ಸಾವಿರ ಕೋಟಿ ರೂ. ವಹಿವಾಟು ನಡೆಸಲಿದೆ ಎಂದು ಭರವಸೆ ನುಡಿದ ಅವರು, ಲಾಭಾಂಶವನ್ನು ಸಮಾಜ ಸೇವೆಗೆ ಬಳಸಿ ಕೊಳ್ಳುವ ಮೂಲಕ ಜನಸಾಮಾನ್ಯರಿಗೆ ವಿತರಿಸಲಾಗುತ್ತಿದೆ ಎಂದರು.
   ಈ ವರೆಗೆ ದೇಶಾಧ್ಯಂತ 725 ಶಾಖೆಗಳನ್ನು ತೆರದಿರುವ ಬ್ಯಾಂಕ್, ಅದರಲ್ಲಿ 450 ಶಾಖೆಗಳು ಕರ್ನಾಟಕ ರಾಜ್ಯದಲ್ಲಿ ಕಾರ್ಯಾಚರಿಸುತ್ತಿದೆ. ಅಲ್ಲದೆ, ಯುವ ಸಮೂಹದ ಬೇಡಿಕೆಗಳಿಗೆ ಅನುಸಾರವಾಗಿ ಮೊಬೈಲ್ ಬ್ಯಾಂಕಿಂಗ್, ಇಂಟರ್‌ನೆಟ್ ಬ್ಯಾಂಕಿಂಗ್, ಮೊಬೈಲ್ ಆಪ್ಸ್ ಬ್ಯಾಂಕಿಂಗ್ ಸೇರಿದಂತೆ ಹತ್ತು ಹಲವು ಸವಲತ್ತುಗಳನ್ನು ಒದಗಿಸುತ್ತಿದೆ. ಅಲ್ಲದೆ, ಇ ಲಾಭಿ ಬ್ಯಾಂಕಿಂಗ್ ಮೂಲಕ ಶಾಖಾ ರಹಿತ ವ್ಯವಹಾರ ನಡೆಸಲು ಉದ್ದೇಶಿಸಿದ್ದು, ದೇಶಾಧ್ಯಂತ ಸುಮಾರು 75 ಕಡೆಗಳಲ್ಲಿ ಇ- ಲಾಭಿ ಬ್ಯಾಂಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.
  ಮುಲ್ಕಿಗೆ ಹಾಗೂ ಕರ್ಣಾಟಕ ಬ್ಯಾಂಕ್‌ಗೂ ಹಲವು ವರ್ಷಗಳ ಹಿಂದಿನ ನಂಟು. ಬಪ್ಪನಾಡು ದೇವಾಲಯ ಹಾಗೂ ಬ್ಯಾಂಕ್‌ಗೆ ಉತ್ತಮ ಬಾಂಧವ್ಯ ಇದೆ. ದೇವಾಲಯದ ಜಾತ್ರಾ ಮಹೋತ್ಸವದ ದಿನದಂದೇ ಶುಭಾರಂಭಗೊಂಡಿರುವುದು ಶುಭ ಮುಹೂರ್ತ ಎಂದ ಮುಲ್ಕಿ ಸೀಮೆಯ ಅರಸರದ ದುಗ್ಗಣ್ಣ ಸಾವಂತರು, ಬ್ಯಾಂಕ್‌ಗೆ ಶುಭ ಹಾರೈಸಿದರು.
 ಎಟಿಎಂ ಶಾಖೆಯನ್ನು ಧರ್ಮದರ್ಶಿ ಹರಿಕೃಷ್ಣ ಪುನರೂರು ಉದ್ಘಾಟಿಸಿದರು. ಆಡಳಿತ ನಿದೇಶಕ ರಘುರಾಮ ಭಟ್, ಮಹ ಪ್ರಬಂಧಕ ಎಂ.ಎಸ್. ಮಹಾಬಲೇಶ್ವರ ಭಟ್, ಪ್ರಾದೇಶಿಕ ಸಹಾಯಕ ಮಹಾ ಪ್ರಬಂಧಕ ನಾಗರಾಜ ಆರ್. ಹೆಬ್ಬರ್, ನಿದೇಶಕ ಚಂದ್ರ ಶೇಖರ, ಯುಗಪುರುಷ ಕಿನ್ನಿಗೋಳಿಯ ಪ್ರಧಾನ ಸಂಪಾದಕ ಭುವನಾಭಿರಾಮ ಉಡುಪ, ವಿಜಯ ಆಡಳಿಯ ಮಂಡಳಿಯ ಡಾ. ಅಚ್ಯುತ ಕುಡ್ವ, ಲಯನ್. ದೇವಪ್ರಸಾದ್ ಪುನರೂರು, ಮುಲ್ಕಿ ಚರ್ಚ್‌ನ ಧರ್ಮಗುರು ರೆ.ಫಾ. ಪ್ರಾನ್ಸಿಸ್ ದೇವಿಯರ್ ಗೋಮ್, ದೇಶಪಾಂಡೆ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News