×
Ad

ಕೊಣಾಜೆ : ಭಾರತಲ್ಲಿರುವ ಧಾರ್ಮಿಕ ಸ್ವಾತಂತ್ರ್ಯ ಬೇರೆ ಯಾವ ದೇಶದಲ್ಲೂ ಇಲ್ಲ - ತ್ವಾಖ ಉಸ್ತಾದ್

Update: 2016-03-28 18:31 IST

ಕೊಣಾಜೆ: ‘ಕೆಲವು ದೇಶಗಳಲ್ಲಿ ಶುಕ್ರವಾರದ ಕುತ್ಬಾ ಪಾರಾಯಣ ಸರ್ಕಾರದ ನಿರ್ದೇಶನದಂತೆ ನಡೆಯಬೇಕು, ಆದರೆ ಭಾರತದಲ್ಲಿ ಇಂತಹ ಯಾವುದೇ ಕಟ್ಟುಪಾಡುಗಳಿಲ್ಲ, ಧಾರ್ಮಿಕ ವಿಚಾರದಲ್ಲಿ ನಮ್ಮ ದೇಶದಲ್ಲಿರುವಷ್ಟು ಸ್ವಾತಂತ್ರ್ಯ ಇನ್ಯಾವುದೇ ದೇಶದಲ್ಲೂ ಇಲ್ಲ’ ಇದು ದ.ಕ.ಜಿಲ್ಲಾ ಖಾಝಿ ಶೈಖುನಾ ಅಲ್‌ಹಾಜ್ ತ್ವಾಖಾ ಅಹ್ಮದ್ ಮುಸ್ಲಿಯಾರ್ ಅಭಿಮತ.

ಭಾನುವಾರ ಇರಾ ಸಂಪಿಲದಲ್ಲಿ ನಡೆದ ಸಂಶುಲ್ ಉಲಮಾ ಕ್ರಿಯಾ ಸಮಿತಿ ಮತ್ತು ಎಸ್ಕೆಎಸ್ಸೆಸ್ಸೆಫ್ ದ್ವಿತೀಯ ವಾರ್ಷಿಕೋತ್ಸವ ಹಾಗೂ ಅನುಸ್ಮರಣಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಇಸ್ಲಾಮಿನ ಸಿದ್ದಾಂತ ಬದ್ಧವಾಗಿರಬೇಕಾದರೆ ಜಂಇಯತ್ತುಲ್ ಉಲಮಾ ಸಂಘಟನೆ ಅಗತ್ಯ. ನೂತನವಾದಿಗಳ ಅಬ್ಬರಕ್ಕೆ ತಡೆಹಾಕುವ ನಿಟ್ಟಿನಲ್ಲಿ ವರಕ್ಕಲ್ ಮುಲ್ಲಕೋಯ ತಂಙಳ್‌ರಿಂದ ಹುಟ್ಟಿಕೊಂಡ ಸಂಘಟನೆಯನ್ನು ಸಂಶುಲ್ ಉಲಮಾ ಸಹಿತ ಹಲವು ಮಹಾನ್ ಪಂಡಿತರು ಮುನ್ನಡೆಸಿದ್ದರು. ಈ ಸಂಘಟನೆ ಇಲ್ಲದ ಪ್ರದೇಶದಲ್ಲಿ ನೂತನವಾದಿಗಳ ಸಂಖ್ಯೆ ಹೆಚ್ಚಾಗಿದೆ. ಉಳ್ಳಾಲ ದರ್ಗಾ ಸುತ್ತಲೂ ಇದೇ ಪರಿಸ್ಥಿತಿಯಿದೆ ಎಂದು ಖೇದ ವ್ಯಕ್ತಪಡಿಸಿದರು.

 ಬದ್ದುದ್ದೀನ್ ತಂಙಲ್ ಅಲ್‌ಮಶ್‌ಹೂರ್ ಪಾವೂರು ಮಂಜೇಶ್ವರ ಕಾರ್ಯಕ್ರಮ ಉದ್ಘಾಟಿಸಿ, ಸಮಸ್ತ ನೇತಾರರು ಅಂದಿನಿಂದ ಇಂದಿಗೂ ಯಾವುದೇ ಹಮ್ಮು, ಅಹಂ, ಹಣ ಅಂತಸ್ತಿನ ವ್ಯಾಮೋಹ ಇಲ್ಲದೆ ಪ್ರವಾದಿ (ಸ.ಅ) ಅವರ ಆದರ್ಶ ಪಾಲನೆ ಮೂಲಕ ಧರ್ಮ ಪ್ರಚಾರದಲ್ಲಿ ನಿರತರಾಗಿದ್ದಾರೆ. ಇವರನ್ನು ಅನುಸರಿಸಲು ಯುವಕರು ಮುಂದಾಗಬೇಕು. ಆದರೆ ಇಂದಿನ ಯುವಕರಿಗೆ ಆಟಗಾರರು, ಚಿತ್ರನಟರು ಆದರ್ಶವಾಗುತ್ತಿರುವುದು ದುರಂತ ಎಂದರು. ಕಾರ್ಯಕ್ರಮಕ್ಕೆ ಮುನ್ನ ಶೈಖುನಾ ಪಾತೂರು ಅಹ್ಮದ್ ಮುಸ್ಲಿಯಾರ್ ನೇತೃತ್ವದಲ್ಲಿ ಸಂಶುಲ್ ಉಲಮಾ ಮೌಲೀದ್ ಪಾರಾಯಣ ನಡೆಯಿತು. ಸಮಸ್ತ ಕೇರಳ ಜಂಇಯತ್ತುಲ್ ಉಲಮಾ ಕೇಂದ್ರ ಮುಶಾವರ ಸದಸ್ಯ ಶೈಖುನಾ ಅಲ್‌ಹಾಜ್ ಅಬ್ದುಲ್ ಜಬ್ಬಾರ್ ಮುಸ್ಲಿಯಾರ್ ಮಿತ್ತಬೈಲ್ ದುವಾ ನೆರವೇರಿಸಿದರು. ಖ್ಯಾತ ಭಾಷಣಗಾರ ಅಲೀ ಅಕ್ಬರ್ ಬಾಖವಿ ಕೊಲ್ಲಂ ಮುಖ್ಯ ಪ್ರಭಾಷಣ ಮಾಡಿದರು. ಖಾಸಿಂ ದಾರಿಮಿ ಕಿನ್ಯಾ ಅನುಸ್ಮರಣಾ ಭಾಷಣ ಮಾಡಿದರು. ಇರಾ ಸಂಪಿಲ ಸಂಶುಲ್ ಉಲಮಾ ಕ್ರಿಯಾ ಸಮಿತಿಯ ಗೌರವಾಧ್ಯಕ್ಷ ಟಿ.ಇಬ್ರಾಹಿಂ, ಮುಡಿಪು ಎಸ್‌ಯುಐಸಿ ಅಧ್ಯಕ್ಷ ಟಿ.ಎ.ಅಬ್ದುಲ್ ರಝಾಕ್ ಹಾಜಿ, ದೇರಳಕಟ್ಟೆ ಕೇಂದ್ರ ಜುಮಾ ಮಸೀದಿ ಖತೀಬ್ ಅಬ್ದುಲ್ ನಾಸಿರ್ ಫೈಝಿ, ಕಾಸರಗೋಡು ಎಸ್ಕೆಎಸ್ಸೆಸ್ಸೆಫ್ ಉಪಾಧ್ಯಕ್ಷ ಸಿದ್ದೀಕ್ ಅರ್ಹರಿ, ಮೂಸಾ ಹಾಜಿ ಉಪ್ಪಳ, ಮುಸ್ತಫಾ ಹುದವಿ ಪಾತೂರು, ಅರಬ್ಬಿಕುಂಞಿ ಸಾಂಬಾರ್‌ತೋಟ ಇನ್ನಿತರರು ಉಪಸ್ಥಿತರಿದ್ದರು. ದೇರಳಕಟ್ಟೆ ರೇಂಜ್ ಜಂಇಯತ್ತುಲ್ ಮುಅಲ್ಲಿಮೀನ್ ಉಪಾಧ್ಯಕ್ಷ ಮಹಮ್ಮದ್ ಅಲೀ ಫೈಝಿ ಸ್ವಾಗತಿಸಿದರು. ಬಿ.ಉಬೈದುಲ್ಲಾ ಅರ್ಹರಿ ಪಾಂಡವರಕಲ್ಲು ಪ್ರಾಸ್ತಾವಿಕವಾಗಿ ಮಾತನಾಡಿದರು. ಸಮೀರ್ ಕಿರಾಅತ್ ಪಠಿಸಿದರು. ಅಬ್ದುಲ್ ಅಝೀರ್ ಸಾಂಬಾರ್‌ತೋಟ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News