×
Ad

ಉಳ್ಳಾಲ : ಕೇವಲ ಕನಸು ಕಂಡರೆ ಸಾಲದು ಕನಸಿನ ಹಿಂದೆ ಪ್ರಯತ್ನ ಇದ್ದರೆ ಮಾತ್ರ ಕನಸು ನನಸಾಗಲು ಸಾಧ್ಯ - ಜೆ.ಆರ್. ಲೋಬೋ

Update: 2016-03-28 21:04 IST

ಉಳ್ಳಾಲ: ವಿದ್ಯಾರ್ಥಿಗಳು ಕಲಿಕೆಯೊಂದಿಗೆ ಮುಂದಿನ ಜೀವನದಲ್ಲಿ ಯಶಸ್ವಿಯ ಕನಸು ಕಾಣುತ್ತಾರೆ. ಆದರೆ ಕೇವಲ ಕನಸು ಕಂಡರೆ ಸಾಲದು ಕನಸಿನ ಹಿಂದೆ ಪ್ರಯತ್ನ ಇದ್ದರೆ ಮಾತ್ರ ಕನಸು ನನಸಾಗಲು ಸಾಧ್ಯ ಎಂದು ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ ಜೆ.ಆರ್. ಲೋಬೋ ಅಭಿಪ್ರಾಯಪಟ್ಟರು.
 ಅವರು ಮಂಗಳೂರು ರಥಬೀದಿಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನ 9ನೇ ವಾರ್ಷಿಕೋತ್ಸವದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.
  
       ಕಾಲೇಜು ಶಿಕ್ಷಣಕ್ಕೆ ಬರುವಾಗ ಮನೆಯವರ ಕೆಲವೊಂದು ಆಶೋತ್ತರಗಳಿರುತ್ತದೆ. ಅದರೊಂದಿಗೆ ವಿದ್ಯಾರ್ಥಿಗಳಲ್ಲಿಯೂ ತಾನು ಮುಂದೆ ಜೀವನದಲ್ಲಿ ಇಂತಹ ವ್ಯಕ್ತಿಯಾಗಬೇಕು ಎನ್ನುವ ಕನಸು ಇರುತ್ತದೆ. ಆದರೆ ಕನಸು ಕಾಣುವುದು ಸುಲಭ. ಆ ಕನಸನ್ನು ನನಸಾಗಿಸಲು ಬೇಕಾದ ಕಠಿಣ ಪರಿಶ್ರಮ, ಮಾರ್ಗದರ್ಶನ ಇದ್ದರೆ ಮಾತ್ರ ಜೀವನದಲ್ಲಿ ಯಶಸ್ವಿಯಾಗಲು ಸಾಧ್ಯ ಎಂದರು. ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಳ ಕಾಲೇಜಿನ ಪ್ರಾಂಶುಪಾಲರಾದ ಪ್ರೊ ಬಾಲಕೃಷ್ಣಶೆಟ್ಟಿ ಮಾತನಾಡಿ ಯುವಕರಲ್ಲಿ ಮಾನವೀಯತೆ ಕಡಿಮೆಯಾಗುತ್ತಿರುವುದು ಖೇದಕರ. ಭಾರತ ಸಹಿಷ್ಣು ದೇಶ. ಭಾರತೀಯರು ಸಹಿಷ್ಣುಗಳು ಆದರೆ ನಮ್ಮ ಬಂಡವಾಳಶಾಹಿ ವಿದ್ಯಾಭ್ಯಾಸದ ಮಾದರಿಗಳು ಎಲ್ಲವನ್ನು ಸರಕು ರೀತಿಯಲ್ಲಿ ನೋಡುತ್ತಿರುವುದರಿಂದ ಮಾನವೀಯತೆಯ ಗುಣಗಳು ಕಡಿಮೆಯಾಗಿ ಸ್ವಾರ್ಥ ಚಿಂತನೆಗಳು ವಿಜೃಂಭಿಸುತ್ತಿವೆ ಎಂದರು.
  ಕಾರ್ಯಕ್ರಮದಲ್ಲಿ ಶೈಕ್ಷಣಿಕ ಸಲಹೆಗಾರ ಡಾಶಿವರಾಮ ಪಿ., ಕ್ಷೇಮಪಾಲನಾಧಿಕಾರಿ ಡಾ ನಾಗಪ್ಪ ಗೌಡ, ಇತಿಹಾಸ ವಿಭಾಗದ ಮುಖ್ಯಸ್ಥ ಪ್ರೊ ನವೀನ್ ಕೋಣಾಜೆ, ಶಿಕ್ಷಕ ರಕ್ಷಕ ಸಂಘದ ನಿರ್ದೇಶಕರಾದ ಡಾ ಪ್ರಕಾಶ್‌ಚಂದ್ರ ಬಿ., ರಾಜ್ಯಶಾಸ್ತ್ರ ವಿಭಾಗ ಮುಖ್ಯಸ್ಥ ಡಾ ನಾಗಪ್ಪ ಗೌಡ, ಅಂತರಿಕ ಗುಣಮಟ್ಟ ಭರವಸೆ ಕೋಶದ ಸಂಚಾಲಕಿ ಪ್ರೊ ತೆರೆಸಾ ಪಿರೇರಾ, ವಿದ್ಯಾರ್ಥಿ ಪರಿಷತ್‌ನ ಸದಸ್ಯರುಗಳು ಉಪಸ್ಥಿತರಿದ್ದರು.
  
ಲಲಿತಾ ಕಲಾ ಸಂಘದ ನಿರ್ದೇಶಕರಾದ ಪ್ರೊ ಗೀತಾ ಹಾಗೂ ಪ್ರೊ ಶೇಷಪ್ಪ ರವರ ಮಾರ್ಗದರ್ಶನದಲ್ಲಿ ಕಾಲೇಜು ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಕಾಲೇಜಿನ ವಾರ್ಷಿಕ ವರದಿಯನ್ನು ಪ್ರಾಂಶುಪಾಲರಾದ ಪ್ರೊ ರಾಜಶೇಖರ ಹೆಬ್ಬಾರ್ ಸಿ. ವಾಚಿಸಿದರು. ವಿದ್ಯಾರ್ಥಿನಿ ಶ್ವೇತಾ ಕಾರ್ಯಕ್ರಮ ನಿರ್ವಹಿಸಿದರು. ವಿದ್ಯಾರ್ಥಿ ಪರಿಷತ್ ನಾಯಕ ದೇವರಾಜ್ ಸ್ವಾಗತಿಸಿ, ವಿಕಾಸ್ ಮಯ್ಯ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News